ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಶತಮಾನ ಕಂಡ ಸರ್ಕಾರಿ ಉರ್ದು ಶಾಲೆಯ ಸ್ಥಳಾಂತರವನ್ನು ವಿರೋಧಿಸಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಧರಣಿ ಉಪವಾಸ ಸತ್ಯಾಗ್ರಹ ಶಿಕ್ಷಣ ಇಲಾಖೆಯ ಭರವಸೆಯ ಮೇರೆಗೆ ತಾತ್ಕಾಲಿಕ ಅಂತ್ಯ ಕಂಡಿದೆ.
ಪಟ್ಟಣದ ಹೃದಯ ಭಾಗದ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದ ಬಳಿ ಇರುವ ಸರ್ಕಾರಿ ಉರ್ದು ಶಾಲೆಗೆ ಅಂದಾಜು ೧೨೫ ವರ್ಷಗಳ ಇತಿಹಾಸವಿದೆ. ಈ ಶಾಲೆಯನ್ನು ಸಾರ್ವಜನಿಕರ ಗಮನಕ್ಕೆ ತರದೇ ಸ್ಥಳಾಂತರಿಸಲಾಗಿದೆ. ಈ ಶಾಲೆಯನ್ನು ಪುರಸಭೆಗೆ ಹಸ್ತಾಂತರಿಸುವ ಕುತಂತ್ರ ನಡೆದಿದೆ ಎಂದು ಆರೋಪಿಸಿ ಮತ್ತು ಕೂಡಲೇ ಶಾಲೆಯನ್ನು ಪುನರ್ ಆರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ಮುಸ್ಲಿಂ ಕೌನ್ಸಿಲ್ ಮತ್ತು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಬುಧವಾರ ಬೆಳಿಗ್ಗೆ ಧರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಧರಣಿಯ ಕಾವು ಹೆಚ್ಚುತ್ತಿದ್ದಂತೆಯೇ ಧರಣಿ ನಿರತರ ಬಳಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ನಾನು ಈಗಾಗಲೇ ಈ ಶಾಲೆ ಆರಂಭಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎನ್ನುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ಹೊರಾಟಗಾರರು ನೀವು ಯಾವುದೇ ರೀತಿಯ ಪತ್ರಗಳ ವ್ಯವಹಾರ ಆಗಲಿ ಅಥವಾ ಮಾಹಿತಿ ಆಗಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿಲ್ಲಾ. ಈ ಜಾಗವನ್ನು ದಾನಿಯೊಬ್ಬರು ಶಾಲೆಗಾಗಿಯೇ ದಾನ ಮಾಡಿದ್ದಾರೆ. ಹಾಗಾಗಿ ಈ ಜಾಗ ಶಾಲೆಗೆ ಸೀಮಿತವಾಗಿದ್ದು, ಶಾಲೆ ಶಾಲೆಯಾಗಿಯೇ ಉಳಿಯಬೇಕು ಎಂದು ಸರ್ಕಾರದ ಕ್ರಮಕ್ಕೆ ಆಕ್ರೋಶ ತಮ್ಮ ಆಕ್ರೋಷವನ್ನು ಹೊರಹಾಕಿದರು. ಆಗ ಕ್ಷೇತ್ರ ಶಿಕ್ಷಣಾಧಿಕಾರಿ ಸಾವಳಗಿ ಪ್ರಭಾರ ಡಿಡಿಪಿ ಟಿ.ಎಸ್.ಕೋಲಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು. ಆಗ ಹೋರಾಟಗಾರರು ಕೂಡ ತಮ್ಮ ಬೇಡಿಕೆಯನ್ನು ಡಿಡಿಪಿಐ ಅವರಿಗೆ ತಿಳಿಸಿದರು. ಬಳಿಕ ಡಿಡಿಪಿ ಅವರು ನೀಡಿದ ಭರವಸೆ ಮೇರೆಗೆ ಹೋರಾಟಗಾರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಒಂದು ವಾರದೊಳಗೆ ಶಾಲೆಯನ್ನು ಆರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು, ಜೊತೆಗೆ ಡಿಡಿಪಿಐ ಅವರು ತಿಳಿಸಿದ ಹಾಗೆ ಶಾಲೆ ಆರಂಭಕ್ಕ ಪ್ರಪೋಸಲ್‌ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಳಿಸಿಬೇಕು ಎನ್ನುತ್ತಲೇ ಇದಕ್ಕೆ ಒಪ್ಪಿಗೆ ಸೂಚಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಶಾಲೆ ಆರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಈ ವೇಳೆ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಕೆ.ಎಮ್.ರಿಸಾಲ್ದಾರ್ ಅವರು ಒಂದು ವಾರದಲ್ಲಿ ಶಾಲೆ ಆರಂಭವಾಗಬೇಕು. ಹಾಗೂ ಆ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಸರ್ಕಾರದ ಹಂತದಲ್ಲಿ ಈ ಶತಮಾನ ಕಂಡ ಶಾಲೆಯನ್ನು ಹಸ್ತಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ಉದೇಶ ಬೇರೆಯಾಗಿದೆ. ಈ ಶಾಲೆಯ ರಕ್ಷಣೆಗೆ ನಾವು ಸದಾ ಸಿದ್ದ. ಹಾಗಾಗಿ ಕೂಡಲೇ ಸರ್ಕಾರ ಈ ಶಾಲೆಯ ಜಾಗವನ್ನು ಶಾಲೆಗೆ ಸೀಮಿತವಾಗಿಟ್ಟು ಕೂಡಲೇ ಶಾಲೆಯನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಹೋರಾಟದಲ್ಲಿ ಹಿರಿಯ ಪತ್ರಕರ್ತ ಎಚ್.ಆರ್.ಬಾಗವಾನ, ಎಲ್.ಎಂ.ನಾಯ್ಕೋಡಿ, ದಾವಲ್ ಸಾತಿಹಾಳ, ಹಾಜಿ ತೆಗ್ಗಿ, ರಿಯಾಜ್ ಮುಲ್ಲಾ, ಹುಸೇನಬಾಷಾ ಮುಲ್ಲಾ, ಇಸ್ಮಾಯಿಲ್ ಅವಟಿ, ಆಶಪಾಕ್ ಮುಲ್ಲಾ, ಕಯೂಮ್ ಚೌದರಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

