ರೂ.೫ಕೋಟಿ ವೆಚ್ಚದ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯ ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುವುದರ ಜೊತಗೆ ಪ್ರಾಥಮಿಕ, ಪ್ರೌಢ ಶಾಲೆ-ಕಾಲೇಜುಗಳ ಮೂಲಭೂತ ಸೌಕರ್ಯಕ್ಕಾಗಿ ವಿಶೇಷ ಅನುದಾನ ನೀಡುತ್ತಿದೆ. ಹಿಕ್ಕನಗುತ್ತಿ ಗ್ರಾಮದಲ್ಲಿ ಅಲ್ಪ ಸಂಖ್ಯಾತರಿಗಾಗಿಯೇ ರೂ.೧೬ಕೋಟಿ ಅಲ್ಪ ಸಂಖ್ಯಾತರ ಮೂರಾರ್ಜಿ ವಸತಿ ಶಾಲೆ ಮತ್ತು ರೂ.೮ಕೋಟಿಯ ವಸತಿ ಗೃಹಗಳಿಗಾಗಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಜಯಪುರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ರೂ.೫ಕೋಟಿ ವೆಚ್ಚದ ಮೌಲಾನ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮತಕ್ಷೇತ್ರಕ್ಕೆ ೨ ಮೌಲಾನ ಆಜಾದ್ ಶಾಲೆಯನ್ನು ನೀಡುವ ಜೊತೆಗೆ ಸಿಂದಗಿ ನಗರದ ೩೨ಕೋಣೆಯ ರೂ.೫ಕೋಟಿ ವೆಚ್ಚದ ಅನುದಾನವನ್ನು ರಾಜ್ಯ ಸರಕಾರದಿಂದ ಮಂಜೂರಾಗಿದೆ. ಅದೇ ರೀತಿಯಾಗಿ ಆಲಮೇಲ ಪಟ್ಟಣಕ್ಕೂ ಈಗಾಗಲೇ ಶಾಲೆ ಪ್ರಾರಂಭವಾಗಿದೆ. ಜಮೀನಿನ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ರೂ.೫ಕೋಟಿ ವೆಚ್ಚದ ಮೌಲಾನ ಆಜಾದ್ ಶಾಲೆಯ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಒಟ್ಟಿನಲ್ಲಿ ಒಟ್ಟು ರೂ.೨೪ಕೋಟಿಯ ಅಲ್ಪ ಸಂಖ್ಯಾತರಿಗಾಗಿ ಸರಕಾರ ಮಂಜೂರ ಮಾಡಿದೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು.
೪ಲಕ್ಷ ೯ಸಾವಿರ ಕೋಟಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ಜಿಲ್ಲೆಗೆ ಒಂದು ಕಾರ್ಮಿಕ ಇಲಾಖೆ ವಸತಿ ಶಾಲೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆ ಶಾಲೆಯನ್ನು ಸಿಂದಗಿ ನಗರಕ್ಕೆ ಮಂಜೂರು ಮಾಡಿಕೋಡಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಈರ್ವ ಸಚಿವರು ಸಿಎಂ ಹಾಗೂ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಕೊಟ್ಟಿದ್ದಾರೆ. ಈ ರೂ.೩೨ಕೋಟಿಯ ಕಾರ್ಮಿಕ ವಸತಿ ಶಾಲೆ ಮುಂಬರುವ ದಿನಮಾನಗಳಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಮಂಜೂರಾಗುವ ಎಲ್ಲಾ ಆಶಾಭಾವನೆ ನನ್ನಲ್ಲಿದೆ. ಒಟ್ಟಾರೆ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚನ ಆಧ್ಯತೆ ನೀಡುತ್ತೇನೆ ಎಂದರು.
ಈ ವೇಳೆ ಆಲಮೇಲ ಪಪಂ ಅಧ್ಯಕ್ಷ ಸಾದಿಕ್ ಸುಂಬಡ ಮಾತನಾಡಿ, ಸಿಂದಗಿ ಮತಕ್ಷೇತ್ರದ ಶಾಸಕರು ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ಶ್ಲಾಘನೀಯ. ಇಂದಿನ ಸಮಾಜದಲ್ಲಿ ಅಲ್ಪ ಸಂಖ್ಯಾತ ಬಂಧುಗಳ ಮಕ್ಕಳು ವಿದ್ಯಾವಂತರಾಗಿದ್ದರು ಸಹ ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗೆ ದುಪ್ಪಟ್ಟು ಶುಲ್ಕ ನೀಡಿ ಓದಿಸಲು ಸಾಧ್ಯವಾಗುವುದಿಲ್ಲ. ಇಂತಹ ಸರಕಾರಿ ಶಾಲೆಗಳಾದರೆ ಅಲ್ಪ ಸಂಖ್ಯಾತ ಮಕ್ಕಳಿಗೆ ಅನುಕೂಲವಾಗಲಿದ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಯೋಜನಾ ಪ್ರಾಧಿಕಾರಿ ಅಧ್ಯಕ್ಷ ಬಸವರಾಜ ಕಾಂಬಳೆ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ ನಾಯ್ಕೋಡಿ, ಶರಣಪ್ಪ ಶುಲ್ಪಿ, ಎಸ್.ಬಿ.ಖಾನಾಪೂರ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

