ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲ್ಲೂಕಿನ ಢವಳಗಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾ ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಾಂತೇಶ ದೊಡಮನಿ ನೆರವೇರಿಸಿದರು. ಕ್ರೀಡಾಜೋತಿಯನ್ನು ಗ್ರಾಮದ ಹಿರಿಯರಾದ ಮಾದೇವಪ್ಪ ಕೊಣ್ಣೂರ ಸ್ವೀಕರಿಸಿದರು. ಶಾಲೆಯ ದೈಹಿಕ ಶಿಕ್ಷಕ ಮಹೇಶ ಕೊಣ್ಣೂರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮಲ್ಲಮ್ಮ ನಾಗರಾಳ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗ್ರಾಮ ಪಂಚಾಯತ ದ್ವೀತಿಯ ದರ್ಜೆಯ ಲೆಕ್ಕ ಸಹಾಯಕ ಎಮ್.ಕೆ.ಗುಡಿಮನಿ ಕ್ರೀಡಾಕೂಟವನ್ನು ಗುಂಡು ಎಸೆದು ಕ್ರೀಡಾಕೂಟಕ್ಕೆೆ ಚಾಲನೆ ನೀಡಿದರು. ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಹೀರೆಮಠ, ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ ಸೇರಿದಂತೆ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು,ದೈಹಿಕ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.
ಸಮಯ ಪ್ರಜ್ಞೆ ಮರೆತ ಅಧಿಕಾರಿಗಳು
ಕಾರ್ಯಕ್ರಮ ಚಾಲನೆಗೊಂಡು ಇನ್ನೇನು ಮುಗಿಯುವ ಹಂತಕ್ಕೆ ಬಂದು ತಲುಪಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಐದಾರು ನಿಮಿಷದಲ್ಲಿಯೇ ವೇದಿಕೆಯಿಂದ ನಿರ್ಗಮಿಸಿದರು. ಅದನ್ನು ಕಂಡ ಸಾರ್ವಜನಿಕರು ಇಲಾಖೆಯ ಅಧಿಕಾರಿಗಳು ಕೇವಲ ಶಾಲು ಸನ್ಮಾನಕ್ಕೆ ಮಾತ್ರ ಆಗಮಿಸಿದ್ದರಾ? ಹೀಗಾಗಿಯೇ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿವೆ ಎಂದು ಆಕ್ರೋಶದ ಮಾತುಗಳನ್ನಾಡಿದರು.

