ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವೇತನ, ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಬಹುತೇಕ ಸಾರಿಗೆ ಇಲಾಖೆಯ ವಾಹನಗಳು ಬೀದಿಗಿಳಿಯದ ಪರಿಣಾಮ, ಖಾಸಗಿ ವಾಹನಗಳಿಗೆ ಮಂಗಳವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಿಂದಗಿ ಕೇಂದ್ರ ಬಸ್ ನಿಲ್ದಾಣಕ್ಕೆ ನೇರವಾಗಿ ನುಗ್ಗಿದ ಖಾಸಗಿ ವಾಹನಗಳು, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಹಜವಾಗಿ ಸಾರಿಗೆ ಇಲಾಖೆಯ ಬಸ್ ನಿಲ್ದಾಣದಿಂದ ನೂರು ಮೀಟರ್ ಅಂತರದಲ್ಲಿ ಯಾವುದೇ ಖಾಸಗಿ ವಾಹನಗಳು ಓಡಾಟ ಮಾಡದಂತೆ ನಿಷೇಧವಿದೆ. ಆದರೆ, ಸಾರಿಗೆ ಇಲಾಖೆಯ ನೌಕರರ ಮುಷ್ಕರದಿಂದಾಗಿ ಖಾಸಗಿ ವಾಹನಗಳು ನೇರವಾಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರವೇಶಿಸಿ, ಅಲ್ಲಿದ್ದ ಪ್ರಯಾಣಿಕರನ್ನು ಸಾಗಿಸುತ್ತಿದ್ದವು.
ದುಪ್ಪಟ್ಟು ಹಣ ವಸೂಲಿ
ಸಾರಿಗೆ ಇಲಾಖೆಯ ವಾಹನಗಳ ಓಡಾಟವಿಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳು ಜನರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು ದುಪ್ಪಟ್ಟು ಹಣ ವಸೂಲಿ ಮಾಡಿದ ಆರೋಪ ಪ್ರಯಾಣಿಕರಿಂದ ಅಲ್ಲಲ್ಲಿ ಕೇಳಿ ಬಂದಿವೆ.
“ಸಾರಿಗೆ ಇಲಾಖೆಯ ಮುಷ್ಕರದಿಂದ ಬಸ್ ಸಂಚರಿಸದ ಕಾರಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದ ಕಾರಣ ವ್ಯಾಪಾರ, ವಾಹಿವಾಟು ಕಡಿಮೆಯಾಗಿದೆ.”
– ಚನ್ನು ಮುಚ್ಚಂಡಿ
ಪತ್ರಿಕಾ ವಿತರಕ

