ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಯಿಯ ಎದೆ ಹಾಲು ಮಗುವಿಗೆ ಸೂಕ್ತವಾದ ಆಹಾರ. ಇದು ಸುರಕ್ಷಿತ, ಸ್ವಚ್ಚ ಮತ್ತು ಪ್ರತಿಕಾಯಗಳನ್ನು ಹೊಂದಿದ್ದು, ಬಾಲ್ಯದ ಅನೇಕ ಸಾಮಾನ್ಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ವ್ಹಿ.ಪಾಟೀಲ ಹೇಳಿದರು.
ಅವರು ಪಟ್ಟಣದ ಮೊಗಲಾಯಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಭಾರತೀಯ ಮಕ್ಕಳ ತಜ್ಞರ ಸಂಘ, ತಾಲೂಕಾ ಆರೋಗ್ಯ ಇಲಾಖೆ ಮತ್ತು ಮೋಗಲಾಯಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎದೆ ಹಾಲು ಶಿಶುವಿಗೆ ಜೀವನದ ಮೊದಲ ತಿಂಗಳುಗಳಿಗೆ ಅಗತ್ಯವಿರುವ ಎಲ್ಲಾ ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಮಕ್ಕಳ ಬುದ್ದಿಮತ್ತೆ ಇದರಿಂದ ಜಾಸ್ತಿಯಾಗಿ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಎದೆಹಾಲು ಉಣಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆ ಎಂದರು.
ಈ ವೇಳೆ ವಿಜಯಪುರದ ಮಕ್ಕಳ ತಜ್ಞ ಡಾ.ಎಸ್.ಎಸ್.ಕಲ್ಯಾಣಶೆಟ್ಟಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶಾರದಾ ನಾಡಗೌಡ ಮಾತನಾಡಿ, ಸ್ತನ್ಯಪಾನದ ಬಗ್ಗೆ ಅನೇಕ ತಾಯಂದಿರಲ್ಲಿ ತಪ್ಪು ಕಲ್ಪನೆಗಳಿಗೆ ಅವುಗಳನ್ನು ಹೋಗಲಾಡಿಸುವುದೆ ಈ ಸಪ್ತಾಹದ ಮೂಲ ಉದ್ದೇಶವಾಗಿದೆ. ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಮ್ಮ ಹಳೆಯ ಸಂಪ್ರದಾಯಗಳು, ಮೂಲ ಕಲ್ಪನೆಗಳು ಮರೆಯಾಗುತ್ತಿವೆ. ಗರ್ಭ ಧರಿಸಿದ ಮಹಿಳೆಗೆ ಮಗುವಿನ ಬೆಳವಣಿಗೆ ಕುರಿತು ಮಾನಸಿಕವಾಗಿ ನಾವು ಸಿದ್ದತೆ ಮಾಡಬೇಕು. ತಾಯಿಯ ಎದೆಹಾಲು ಮಗುವಿಗೆ ಮಾನಸಿಕ ಮತ್ತು ದೈಹಿಕ ಬೆಳೆವಣಿಗೆಗೆ ಧನಾತ್ಮಕ ಕಾರಣವಾಗುತ್ತದೆ. ಬಹಳಷ್ಟು ತಾಯಂದಿರು ಎದೆಹಾಲು ಉಣಿಸಲು ಪ್ರಾರಂಭಿಸಿದರೂ ಕೆಲವೇ ತಿಂಗಳುಗಳಲ್ಲಿ ಇತರೆ ಹಾಲು ಮತ್ತು ಪಾನೀಯಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಇದರಿಂದ ಶಿಶು ವಿವಿಧ ಸೋಂಕುಗಳಿಗೆ ಗುರಿಯಾಗುತ್ತದೆ. ಸ್ತನ್ಯಪಾನದ ಬಗ್ಗೆ ನಿರ್ಲಕ್ಷಬೇಡ ಎಂದರು.
ಈ ವೇಳೆ ಡಾ.ಸಿ.ಎಸ್.ಹಿರೇಗೌಡರ, ಡಾ. ಶಾರದಾ ನಾಡಗೌಡ ತಾಲೂಕಾ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ, ಮೊಗಲಾಯಿ ಆಸ್ಪತ್ರೆಯ ಡಾ. ಇಸ್ಮಾಯಿಲ್ ಮೊಗಲಾಯಿ, ಡಾ.ನೂರಾನಿ ಮೊಗಲಾಯಿ ಡಾ.ಸಾರಂಗ ನಾಡಗೌಡ, ಡಾ.ಸರೋಜಿನಿ ದಾನಗೊಂಡ, ಡಾ.ಸೀಮಾ ವಾರದ, ಡಾ. ಶೃತಿ ಸಜ್ಜನ, ಡಾ ತೌಶಿಫ್ ನಾಗರಳ್ಳಿ ಸೇರಿದಂತೆ ಆಶಾ ಕಾರ್ಯಕರ್ತರು, ತಾಯಂದಿರು ಇದ್ದರು.
ಕಾರ್ಯಕ್ರಮವನ್ನು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಾಯ್.ಚೌಡಕಿ ಸ್ವಾಗತಿಸಿದರು, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ನಿರೂಪಿಸಿ ವಂದಿಸಿದರು.

