ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಹಾಲುಮತ ಬಾಂಧವರ ಹೃದಯಾಂತರಾಳ ನೊರೆ ಹಾಲಿನಷ್ಟೇ ಪವಿತ್ರವಾದುದು, ಪ್ರತಿಯೊಂದು ಶುಭಕಾರ್ಯಕ್ಕೂ ನೀವೇ ಆರಂಭಿಕರು. ಆದರೂ ಮೌಢ್ಯ ಕಂದಾಚಾರದಲ್ಲಿ ನಿಮ್ಮ ಬದುಕಿನ ದೋಣಿ ಮುಳುಗೇಳುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ವಿಷಾದ ವ್ಯಕ್ತಪಡಿಸಿದರು.
ಸಮೀಪದ ಹುಣಶಾಳ-ಪಿಸಿ ಗ್ರಾಮದಲ್ಲಿ ಭಾನುವಾರ ಚಾಲನೆ ಪಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಾಲುಮತ ಬಾಂಧವರಿಂದ ಕುರಿಮರಿ ಮತ್ತು ಕಂಬಳಿಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹುಟ್ಟಿದಾಗ ಉಸಿರು, ಬೆಳೆಯುತ್ತಿರುವಾಗ ಉಸಿರು ನೀಡಿ ಬೆಳೆಸಿದ ಕುರುಬ ಜನಾಂಗ ಕುಲ ಕಸುಬಾದ ಕುರಿ ಕಾಯುವ ಜತೆಗೆ ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೂ ತಮ್ಮ ಕಾರ್ಯವೈಖರಿ ಖಚಿತಪಡಿಸಿದ್ದರೂ ಹೆಚ್ಚಿನ ಶಿಕ್ಷಣ ಪಡೆಯುವುದರಲ್ಲಿ ಹಿಂದುಳಿದಿದೆ. ಜಗತ್ತು ಮುಂದುವರೆದಂತೆ ನಾವೂ ಕೂಡ ಭವಿಷ್ಯದ ನಮ್ಮ ಕುಡಿಗಳಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗಬೇಕಿದೆ. ಕುರಿಮರಿಯಂತಿದ್ದ ನನ್ನನ್ನು ಸಾಕಿ ಬೆಳೆಸಿ ಇಂದು ರಾಜ್ಯದ ಶಿಕ್ಷಕರ ಸಂಘದ ಅಧ್ಯಕ್ಷ ಸ್ಥಾನದವರೆಗೆ ತಂದು ನಿಲ್ಲಿಸಿದ್ದೀರಿ. ನಿಮ್ಮ ಈ ಋಣಭಾರವನ್ನು ನಾನೆಂದಿಗೂ ಮರೆಯಲಾರೆ ಎಂದರು.
ಶಿಕ್ಷಕ ಮಹೇಶ ಗಾಳಪ್ಪಗೋಳ ಮಾತನಾಡಿ, ಹಾಲುಮತ ಬಾಂಧವರು ಯಾವತ್ತೂ ಸಂಪ್ರದಾಯದ ಗೋಡೆಯನ್ನು ಒಡೆದು ಬಂದವರಲ್ಲ. ಇಂದು ನಮ್ಮ ಮನೆಯ ಮಗ ರಾಜ್ಯದ ಗುರುಕುಲದ ಯಜಮಾನನಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದರು.
ವಂದಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಶ ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚನ್ನಸಂಗಪ್ಪಗೌಡ ಪಾಟೀಲ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಸೋಮನಗೌಡ ಪಾಟೀಲ, ಕೆಂಚಪ್ಪ ಮಸೂತಿ, ಹನುಮಂತ ವಾಲಿಕಾರ, ಮಲ್ಲಪ್ಪ ವಾಲಿಕಾರ, ಬೀರಬಲ್ಲ ಗೊಡ್ಡಿ, ರಮೇಶ ಕಾಖಂಡಕಿ, ಸಿದ್ದಯ್ಯ ಚಿಕ್ಕಮಠ, ದೇವೇಂದ್ರ ವಾಲಿಕಾರ, ಬಸವರಾಜ ಕೊಳದಾನವರ, ಮತ್ತಿತರರು ಇದ್ದರು.

