ಲೇಖನ
– ವಿಜಯಲಕ್ಷ್ಮಿ ಮೂರ್ತಿ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಆ ದಿನ ಟೆರೇಸ್ ನಲ್ಲಿ ಮುದ್ದುರಾಮನ ಪುಸ್ತಕ ಓದುತ್ತಾ ಕುಳಿತಿದ್ದ ಸಮಿತಳಿಗೆ ಮನೆಯಲ್ಲಿ ಆದ ಗಲಾಟೆಯಿಂದ ಮನಸ್ಸು ಭಾರವಾಗಿತ್ತು.ಓದುತ್ತಾ ಅವಳಿಗೆ ಮುದ್ದುರಾಮನ ಪುಸ್ತಕದಲ್ಲಿ ಸಿಕ್ಕ ಈ ಚೌಪದಿ ಅವಳಿಗೆ ಅವಳ ಮನಸ್ಸಿನಲ್ಲಿ ಆಗುವ ಒಂದು ಗೊಂದಲಕ್ಕೆ ವಿರಾಮ ಹಾಕುವಂತೆ ಅವಳನ್ನು ಪ್ರೇರೇಪಿಸಿತ್ತು.
ಕಥೆ ಓದುವ ಹುಚ್ಚು ಸಮಿತಳಿಗೆ ಮೊದಲಿನಿಂದಲೂ ಇತ್ತು. ಯಾವ ಕಥೆ ಆಗಲಿ ಅವಳಿಗೆ ಓದುವುದು ಮುಖ್ಯ. ಮಹಾ ಕಾವ್ಯಗಳಾದ ಮಹಾಭಾರತ ರಾಮಾಯಣದಂತಹ ಕಥೆ ಅವಳಿಗೆ ಅಚ್ಚು ಮೆಚ್ಚು. ರಾಮಾಯಣದಲ್ಲಿ ರಾಮನ ಭಾತ್ರ್ ಪ್ರೇಮ ಅವಳನ್ನು ಮೂಕವಾಗಿಸಿತ್ತು. ರಾಮನಂತೆ ತನ್ನ ಗಂಡ ಸುಶಾಂತ ತನ್ನ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವ ಆಸೆ ಅವಳ ಮನದಲ್ಲಿ ಇತ್ತು. ಮೊದಲನೆಯವನಾಗಿ ಹುಟ್ಟಿದ ಸುಶಾಂತ ತುಂಬಾ ಮೊಂಡು ಬುದ್ಧಿಯವನಾಗಿದ್ದ. ತನ್ನದೇ ಹಠ ನಡೆಯಬೇಕೆಂಬ ಮನಸ್ಸು ಅವನದು.
ಮದುವೆಯಾಗಿ ಬಂದಳು ಸಮಿತ ಈ ಕೂಡು ಕುಟುಂಬಕ್ಕೆ. ಅತ್ತೆಯ ಹಾಗೆ ತಾನೂ ಈ ಮನೆಯನ್ನು ಸಂಬಾಳಿಸಬೇಕು ಅಂದುಕೊಂಡಿದ್ದಳು. ತನ್ನ ತೌರು ಮನೆಯಲ್ಲಿ ತಾನು ಹಾಗೂ ಅಪ್ಪ ಅಮ್ಮ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇಲ್ಲಿಗೆ ಬಂದು ತುಂಬಿದ ಮನೆ ನೋಡಿ ಬಹಳ ಖುಷಿಯಾಗಿತ್ತು. ಸುಶಾಂತ್ ಹಾಗೂ ಅವರ ತಮ್ಮಂದಿರನ್ನು ನೋಡಿ ಯಾರಿಗೆ ಪತ್ತೆದಾರಿ ಕಾದಂಬರಿ ಇಷ್ಟವಾಗಬಹುದು ಯಾರಿಗೆ ಸಾಮಾಜಿಕ ಕಾದಂಬರಿ ಇಷ್ಟವಾಗಬಹುದು ನಾನು ಅವರ ಜೊತೆ ನಾ ಓದಿದ ಪುಸ್ತಕದ ಬಗ್ಗೆ ಮಾತನಾಡಬೇಕು ಎಂಬ ಕಲ್ಪನೆಯೇ ಅವಳಿಗೆ ಸಂತೋಷ ತಂದಿತ್ತು.
ಮದುವೆಯ ಮೊದಲು ಸುಶಾಂತ್ ನ ಹತ್ತಿರ ಮಾತನಾಡಲು ಸ್ವಲ್ಪ ಸಂಕೋಚವಾಗಿತ್ತು. ಅವನು ಒಂದು ದೊಡ್ಡ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ. ಅವನಿಗೆ ಬಿಡುವು ಸರಿಯಾಗಿ ಸಿಕ್ಕದಿರುವುದರಿಂದ ಅವನ ಜೊತೆಯಲ್ಲಿ ಕಥೆಯ ಬಗ್ಗೆ ಮಾತನಾಡಲು ವೇಳೆ ಸಿಗಲಿಲ್ಲ. ತಾನು ಓದಿದ ಕಥೆಯ ತಿರುಳು ಹೇಳಲು ಆಗಲಿಲ್ಲ. ಆಮೇಲೆ ಮಧುಚಂದ್ರದ ವೇಳೆಯಲ್ಲಿ ಅವನಿಗೆ ಯಾವ ಪುಸ್ತಕ ಇಷ್ಟ ಎಂದು ಕೇಳಿದಾಗಈಗ ಸದ್ಯ ನಾವು ನಮ್ಮ ಮಧುಚಂದ್ರ ವನ್ನು ಮುಗಿಸುವ ಎಂದು ಮಾತು ಹಾರಿಸಿದ. ಸಮಿತ ಯಾವುದೋ ಕಥೆಯ ಕಥಾ ನಾಯಕಿ ಆಗಿಬಿಟ್ಟಿದ್ದಳು. ಒಳ್ಳೆ ಖುಷಿಯ ಮೂಡಿನಲ್ಲಿ ಇದ್ದಳು. ಅಂತೂ ಅವರ ರಜೆಯ ದಿನಗಳು ಮುಗಿದು ಮನೆಗೆ ವಾಪಸ್ಸು ಬಂದರು.
ಸುಶಾಂತ್ ಗೆ ಇಬ್ಬರು ತಮ್ಮಂದಿರು. ಇಬ್ಬರೂ ತುಂಬಾ ಚೆನ್ನಾಗಿ ಓದುತ್ತಿದ್ದರು. ಬಿಡುವಿನ ವೇಳೆಯಲ್ಲಿ ಸಮಿತ ಓದಿದ ಕಥೆಯ ಬಗ್ಗೆ ಮಾತನಾಡುತ್ತಿದ್ದಳು. ಅವರಿಗೆ ಪುರಾಣ ಕಥೆಗಳು ಇಷ್ಟವೆಂದು ಗೊತ್ತಾಗಿತ್ತು. ರಜೆ ದಿವಸ ತಾನು ಓದಿದ ಕಥೆಯನ್ನು ಹೇಳಿ ಅದರಲ್ಲಿ ಬರುವ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿ ಬಗ್ಗೆ ಓದುವಂತೆ ಹೇಳುತ್ತಿದ್ದಳು. ಇಂಗ್ಲಿಷ್ ಕಾದಂಬರಿಗಳ ಬಗ್ಗೆ ಸಹ ಮಾತನಾಡಿ ಓದುವಂತೆ ಹುರಿದುಂಬಿಸುತ್ತಿದ್ದಳು. ರಜೆಯ ದಿನ ಬೆಳಗ್ಗಿನ ತಿಂಡಿಯ ಜೊತೆ ಅವಳು ಓದಿದ ಕಥೆಯ ಬಗ್ಗೆಚರ್ಚೆ ನಡೆಯುತ್ತಿತ್ತು. ಲೈಬ್ರರಿಯಿಂದ ಒಳ್ಳೆಯ ಪುಸ್ತಕ ತಂದು ನೀವು ಓದಿ ಎಂದು ಸುಶಾಂತನ ತಮ್ಮಂದಿರಿಗೆ ಹೇಳುತ್ತಿದ್ದಳು.

ಹೊಸದಾಗಿ ಬಂದಿದ್ದಾಳೆ ಈ ಮನೆಗೆ ಎಂದು ಸುಮ್ಮನಿದ್ದ ಸ್ವಲ್ಪ ಸಮಯ ಸುಶಾಂತ್. ಒಂದು ದಿನ ಅವಳ ಹತ್ತಿರ ಪುಸ್ತಕ ಓದಿ ಅದರಲ್ಲಿ ಬರುವ ವಿಚಾರವನ್ನು ನೀನು ನನ್ನ ತಮ್ಮಂದಿರ ಹತ್ತಿರ ಸಂವಾದ ಮಾಡುವ ಅವಶ್ಯಕತೆ ಇಲ್ಲ. ಅವರು ಅವರಿಗೆ ಸಂಬಂಧ ಪಟ್ಟ ವಿಷಯವನ್ನು ಓದಿದರೆ ಸಾಕು ಎಂದರು. ಅದನ್ನು ಕೇಳಿ ಸಮಿತಳಿಗೆ ಆಶ್ಚರ್ಯವಾಯಿತು. ಪುಸ್ತಕ ಓದಬಾರದಾ ಎಂದು ಸುಶಾಂತ್ ನನ್ನು ಕೇಳಿದ್ದಕ್ಕೆ ಅದೆಲ್ಲಾ ಓದಿ ಏನಾಗಬೇಕಿದೆ ವೇಳೆ ಕಳೆಯಲು ಒಂದು ಸಾಧನ. ನಿನಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಓದುತ್ತೀಯಾ. ಅವರ ಭವಿಷ್ಯಕ್ಕೆ ಕಾಲೇಜ್ ನಲ್ಲಿ ಹೇಳುವ ಪಾಠ ಮುಖ್ಯ. ಅವರು ಏನು ಚಿಕ್ಕ ಮಕ್ಕಳಾ ಕಥೆಗಳನ್ನು ಓದಲು ಎಂದು ಕಟುವಾಗಿ ಮಾತನಾಡಿದ. ದುಃಖ ತಡೆಯಲಾರದೆ ಮುದ್ದುರಾಮನ ಪುಸ್ತಕ ಹಿಡಿದು ಟೆರೇಸ್ ಗೆ ಬಂದಿದ್ದಳು.
ಇವತ್ತು ಒಂದು ತೀರ್ಮಾನವಾಗಲಿ ಎಂದು ಕೂಡಲೇ ಟೆರೇಸ್ ನಿಂದ ಕೆಳಗೆ ಬಂದು ಸುಶಾಂತ್ ನ ಹತ್ತಿರ ಈ ಪುಸ್ತಕದಲ್ಲಿ ಬರೆದ ಚೌಪದಿ ಓದಿ ಎಂದು ಹೇಳಿದಳು. ಏನಿದೆ ಮಹಾ ಇದರಲ್ಲಿ ಎಂದ. ಓದಿ ಗೊತ್ತಾಗುತ್ತೆ ಎಂದಳು ಸಮಿತ.
ಕತೆಯಿರುವುದೆಳೆಯರಿಗೆ ಎನ್ನುವ ಭ್ರಮೆ ಇದೆ ನಮಗೆ ಸಾರ್ವಕಾಲಿಕ ಅದರ ಸತ್ವದುಪದೇಶ.
ಒಂದು ನೀತಿಯ ಸಾಲು ಸಾಕು ಪರಿಪಕ್ವತೆಗೆ!
ದೃಷ್ಟಾಂತ – ಕತೆ ಬದುಕು – ಮುದ್ದುರಾಮ.
ಓದುತ್ತಾ ತಾನು ಏನು ತಪ್ಪು ಮಾಡಿದ್ದೀನಿ ಎನ್ನುವುದು ಸುಶಾಂತ್ ಗೆ ಗೊತ್ತಾಯಿತು. ಸಮಿತಳನ್ನು ನೋಡಿದಾಗ ಅವಳು ಕಥೆ ಓದುವುದು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳು ಓದುವ ಪಂಚತಂತ್ರ ಕಥೆಯು ಸಹ ದೊಡ್ಡವರು ಓದಿದರೆ ಅದರಲ್ಲಿ ಬರುವ ಪ್ರಪಂಚ ಜ್ಞಾನ ಎಲ್ಲರಿಗೂ ತಿಳುವಳಿಕೆ ಕೊಡುವಂತಹದು.
ಬೆಳೆಯುತ್ತಾ ಬುದ್ಧಿ ಪಕ್ವ ಆಗಬೇಕಾದರೆ ಕಥೆ ಓದಬೇಕು. ಕಥೆಯಲ್ಲಿ ಬರುವ ಒಳ್ಳೆಯ ನುಡಿಯ ಸಾಲುಗಳು ಒಳ್ಳೆಯ ಉದ್ದೇಶ ಹೊಂದಿರುತ್ತದೆ. ಕಥೆಯಲ್ಲಿ ಬರುವ ಒಳ್ಳೆಯ ವಾಕ್ಯಗಳು ಸರ್ವರಿಗೂ ಅನ್ವಯಿಸುತ್ತದೆ. ಪುಸ್ತಕದಲ್ಲಿ ಬರುವ ಸಂದರ್ಭಗಳು ಎಲ್ಲಕಾಲದಲ್ಲೂ ಜನರ ನಿತ್ಯ ಬದುಕಿನಲ್ಲಿ ನಡೆಯುವುದೇ ಆಗಿರುತ್ತದೆ. ಒಂದು ನೀತಿಯ ಸಾಲು ಮನುಷ್ಯನನ್ನು ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗಲು ಸಾಕಾಗುತ್ತದೆ ಎಂದು ಹೇಳಿ ಸುಶಾಂತ ನನ್ನು ಬದಲಿಸಲು ಪ್ರಯತ್ನಿಸಿದಳು.
