ಲೇಖನ
– ಎಸ್.ಶ್ರೀಧರಮೂರ್ತಿ
(ಶಿವಜಯಸುತ)
ಮಂಡ್ಯ
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಮೈತ್ರಿ ಮತ್ತು ಧಾತ್ರಿ ಬಾಲ್ಯದ ಗೆಳತಿಯರು. ಎರಡು ಜೀವ ಒಂದೇ ಪ್ರಾಣದಂತಿತ್ತು ಅವರ ಗೆಳೆತನ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಇಬ್ಬರೂ ಓದಿನಲ್ಲಿ ತುಂಬಾ ಚುರುಕು. ಏಳನೇ ತರಗತಿಯಲ್ಲಿ ಮೈತ್ರಿ ಶಾಲೆಗೆ ಪ್ರಥಮಳಾದರೆ ಧಾತ್ರಿ ದ್ವಿತೀಯ ಸ್ಥಾನ ಪಡೆದಿದ್ದಳು. ಶಾಲೆಯ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮುಂದಿದ್ದು ಶಿಕ್ಷಕ- ಶಿಕ್ಷಕಿಯರಿಗೆ ಪ್ರೀತಿ ಪಾತ್ರರಾಗಿದ್ದರು ಈ ಕನಸು ಕಂಗಳ ಪೋರಿಯರು. ಅವರಿಬ್ಬರ ವಿಚಾರ,ಹವ್ಯಾಸ, ಅಭ್ಯಾಸ, ಸ್ವಭಾವಗಳೆಲ್ಲವೂ ಅಪರಿಚಿತರಿಗೆ ಅವರು ಅವಳಿ ಸಹೋದರಿಯರಿರಬೇಕೆಂಬ ಭ್ರಮೆ ಹುಟ್ಟಿಸುತ್ತಿತ್ತು. ಕೊನೆಯವರೆಗೂ ಜೊತೆಯಾಗಿ ಓದಿ ವೈದ್ಯೆಯರಾಗುವ ಹಂಬಲ ಇವರದು.

ಮೈತ್ರಿ ಬಡ ಕುಟುಂಬದ ಕುಡಿ. ಆಕೆಯ ಅಪ್ಪ ಕಛೇರಿಯೊಂದರ ದಿನಗೂಲಿ ಗುಮಾಸ್ತರಾಗಿದ್ದರು. ಅಮ್ಮ ಅನಕ್ಷರಸ್ಥ ಗೃಹಿಣಿ. ಬಾಡಿಗೆ ಮನೆಯಲ್ಲಿ ವಾಸವಿದ್ದರೂ ಪ್ರೀತಿಯ ತಮ್ಮನೊಂದಿಗೆ ಇದ್ದುದರಲ್ಲಿಯೇ ತೃಪ್ತಿ ಕಾಣುತ್ತಿದ್ದಳು ಮೈತ್ರಿ. ಆದರೆ ಧಾತ್ರಿ ಐಶ್ವರ್ಯ ಲಾಲಸೆಯ ಸಿರಿವಂತ ಮನೆತನದವಳು. ಶ್ರೀಮಂತ ಉದ್ಯಮಿ ಹಾಗೂ ಜಮೀನ್ದಾರರ ಮಗಳವಳು. ಅವಳಿಗೂ ತಮ್ಮನೊಬ್ಬನಿದ್ದನು. ಹೀಗಿದ್ದರೂ ಗೆಳತಿಯರಿಬ್ಬರ ಒಡನಾಟಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಅಕ್ಕ-ಪಕ್ಕದ ಮನೆಯಲ್ಲಿಯೇ ಅವರ ವಾಸ.
ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನು ಕೆಲವೇ ದಿನಗಳಿದ್ದವು. ಗೆಳತಿಯರಿಬ್ಬರ ಪರೀಕ್ಷಾ ಸಿದ್ದತೆ ಪೈಪೋಟಿಯಿಂದ ನಡೆಯುತಿತ್ತು. ವಿಧಿಯಾಟವನ್ನು ಬಲ್ಲವರಾರು? ಮೈತ್ರಿಯ ತಂದೆಗೆ ದಿಢೀರನೆ ಹೃದಯಾಘಾತವಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಿತು. ಜೀವನ ನಿರ್ವಹಣೆಗಾಗಿ ತಾಯಿ ಅನಿವಾರ್ಯವಾಗಿ ಕೃಷಿ ಕಾರ್ಮಿಕಳಾಗಬೇಕಾಯಿತು. ಆ ನೋವಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಮೊದಲಿಗಳಾದಳು ಮೈತ್ರಿ! ಗೆಳತಿ ಧಾತ್ರಿ ಏಳನೇ ತರಗತಿಯಲ್ಲಾದಂತೆ ಶಾಲೆಗೆ ಎರಡನೇ ಸ್ಥಾನ ಪಡೆದಿದ್ದಳು. ಆದರೂ ಗೆಳತಿಯ ಪರವಾಗಿ ಎಲ್ಲರಿಗೂ ತಾನೇ ಪ್ರಥಮ ಸ್ಥಾನ ಪಡೆದಂತೆ ಸಿಹಿ ಹಂಚಿ ಸಂಭ್ರಮಿಸಿದಳು ಧಾತ್ರಿ.
ಮಾರನೇ ದಿನ ಗೆಳತಿಯರಿಬ್ಬರು ಪಿ ಯು ಸಿ ವಿಜ್ಞಾನ ವಿಭಾಗಕ್ಕೆ ದಾಖಲಾಗಲು ಕಾಲೇಜಿನಿಂದ ಅರ್ಜಿಗಳನ್ನು ತಂದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅರ್ಜಿಯನ್ನು ಭರ್ತಿ ಮಾಡಿ ಅಮ್ಮನ ಸಹಿ ಮಾಡಿಸಲು ಮೈತ್ರಿ ಮುಂದಾದಳು. ಅಮ್ಮ ಸಹಿ ಮಾಡುವ ಬದಲು ಮಗಳನ್ನು ಬಿಗಿದಪ್ಪಿ ಅಳಲಾರಂಭಿಸಿದರು. ಅವರ ಕಣ್ಣೀರ ಕಟ್ಟೆ ಒಡೆಯಿತು.
” ನಾನೇನು ಮಾಡಲವ್ವ? ನಿಮ್ಮಪ್ಪ ಇದ್ದಿದ್ದರೆ ಏನಾದರೂ ಮಾಡಬಹುದಿತ್ತು. ಮೂರು ಹೊತ್ತು ಮೂರು ಜನರ ಹೊಟ್ಟೆ ತುಂಬಿಸುವುದೇ ಕಷ್ಟವಾಗಿರುವಾಗ ನಿನ್ನನ್ನು ಹೇಗೆ ಓದಿಸಲೇ? ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಬಾರದಿತ್ತು ನನ್ನವ್ವ.”
ಅಮ್ಮನ ಒಡಲ ನೋವನ್ನು ಮೈತ್ರಿ ಹೇಗೆ ತಾನೆ ಸಹಿಸಿಯಾಳು? ಅವಳು ಸೂಕ್ಷ್ಮಮತಿ. ಅಮ್ಮನಿಗೆ ಧೈರ್ಯ ತುಂಬಿ ಸಂತೈಸುತ್ತಾ ತಾನೇ ಅಮ್ಮನಿಗೆ ಅಮ್ಮನಾದಳು. ವೈದ್ಯೆಯಾಗುವ ತನ್ನ ಕನಸನ್ನು ಹತ್ತಿಕ್ಕಿ ತಂದಿದ್ದ ಅರ್ಜಿಯನ್ನು ಹರಿದು ಬಿಸಾಡಿದಳು.
” ಅಳಬೇಡಮ್ಮ. ನಾನು ಕಾಲೇಜಿಗೆ ಹೋಗುವುದಿಲ್ಲ. ನಾಳೆಯಿಂದ ನಿನ್ನೊಂದಿಗೆ ನಾನೂ ಕೆಲಸಕ್ಕೆ ಬರುತ್ತೇನೆ. ತಮ್ಮನನ್ನು ನಾನೇ ಓದಿಸುತ್ತೇನೆ. ನಿನಗೆ ನಾನು ಭಾರವಾಗಲಾರೆ. ನಿನ್ನ ಹೆಗಲಿಗೆ ಹೆಗಲಾಗಿ ನಾನಿರುವೆ. ಯೋಚಿಸಬೇಡಮ್ಮ . ಬೇಕಾದರೆ ನಾನು ಖಾಸಗಿಯಾಗಿ ಪಿ ಯು ಸಿ.,ಬಿ ಎ ಓದಿಕೊಳ್ಳುತ್ತೇನೆ.”
ಮಗಳ ಈ ಮಾತಿಗೆ ಹೆತ್ತೊಡಲು ಮೂಕವಾಯಿತು. ಜೋರಾಗಿ ಅಳುತ್ತಾ ಮಗಳನ್ನು ಮುದ್ದಿಸತೊಡಗಿದರು. ಮಗಳೂ ಅಳಲಾರಂಭಿಸಿದಳು. ಇಬ್ಬರ ಅಳುವು ಅವರ ಮುಂದಿನ ಉಳಿವಿನ ದಾರಿಯನ್ನು ನಿರ್ಧರಿಸಿ ಗಟ್ಟಿಗೊಳಿಸಿತ್ತು.
ಮೈತ್ರಿ ತನ್ನೊಂದಿಗೆ ಕಾಲೇಜಿಗೆ ಬರಲಾರಳೆಂದು ತಿಳಿದು ಧಾತ್ರಿ ಪರಿತಪಿಸಿದಳು. ಆದರೆ ಅವಳು ತಾನೆ ಏನು ಮಾಡಿಯಾಳು?
ಗೆಳತಿಗೆ ಆದ ತೊಂದರೆಗೆ ಕಣ್ಣೀರು ಹರಿಸುವುದನ್ನು ಬಿಟ್ಟರೆ ಅವಳಿಗೆ ಅನ್ಯ ಮಾರ್ಗವಿರಲಿಲ್ಲ. ತಾನೊಬ್ಬಳೇ ಕಾಲೇಜಿನ ವ್ಯಾಸಂಗ ಮುಂದುವರಿಸಿದಳು ಧಾತ್ರಿ.
ತನ್ನ ಅಮ್ಮನೊಂದಿಗೆ ಪ್ರತಿದಿನ ಗದ್ದೆ ಕೆಲಸ ಮತ್ತು ಕೆಲವು ಮನೆಗಳ ಮನೆಗೆಲಸ ಮಾಡುತ್ತಾ ಹೊಸ ಜೀವನ ಆರಂಭಿಸಿದಳು ಮೈತ್ರಿ. ಧಾತ್ರಿ ಕಾಲೇಜು, ಟ್ಯೂಶನ್.. ಹೀಗೆ ತನ್ನನ್ನು ತಾನು ಪೂರ್ಣ ತೊಡಗಿಸಿಕೊಂಡಳು. ಆಗೊಮ್ಮೆ -ಈಗೊಮ್ಮೆ ಗೆಳತಿಯರ ಭೇಟಿಯಾಗುತ್ತಿತ್ತು. ಎಂದಿನಂತೆ ಅವರ ಸ್ನೇಹಕ್ಕೆ ಯಾವ ಧಕ್ಕೆಯೂ ಇರಲಿಲ್ಲ. ಭಾನುವಾರದ ದಿನಗಳಂದು ಬಿಡುವಾದಾಗ ಇಬ್ಬರೂ ಒಂದೆಡೆ ಸೇರಿ ಹರಟುತ್ತಿದ್ದರು.
ಧಾತ್ರಿ ಪಿಯುಸಿ ಮುಗಿಸಿ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಎಂ ಬಿ ಬಿ ಎಸ್ ಪದವಿಗೆ ದಾಖಲಾದಳು. ಇತ್ತ ಮೈತ್ರಿ ಪಿಯುಸಿ ಆರ್ಟ್ಸ್ ಪರೀಕ್ಷೆ ಗೆ ಖಾಸಗಿಯಾಗಿ ಹಾಜರಾಗಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಳಾದಳು. ಕೆಲಸಗಳ ಒತ್ತಡದಲ್ಲಿ ಪ್ರತಿಭಾವಂತೆಯಾಗಿದ್ದರೂ ಓದಿನಲ್ಲಿ ಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲಾಗದೆ ಹೇಗೋ ಪಾಸಾಗಿ ಖಾಸಗಿಯಾಗಿ ಮುಕ್ತ ವಿಶ್ವವಿದ್ಯಾಲಯದ ಬಿ ಎ ಪದವಿಗೆ ದಾಖಲಾದಳು.
ಹೀಗೆ ಜೀವನ ಸಾಗುತ್ತಿತ್ತು. ಅದೊಂದು ದಿನ ಭಾನುವಾರ ಧಾತ್ರಿಯ ಮನೆ ಮುಂದೆ ಐದಾರು ಬೈಕ್ ಗಳು ಮತ್ತು ಒಂದೆರಡು ಕಾರುಗಳು ನಿಂತಿದ್ದವು. ಧಾತ್ರಿಯು ತನ್ನ ಕಾಲೇಜಿನ ಸಹಪಾಠಿಗಳಿಗೆ ಔತಣ ಕೂಟವನ್ನು ಏರ್ಪಡಿಸಿದ್ದಳು. ಇದು ಮೈತ್ರಿಗೆ ತಿಳಿದಿರಲಿಲ್ಲ.
ಅಂಗಡಿಯಿಂದ ಅಡುಗೆಗೆಂದು ಅವಳು ತರಕಾರಿ ತರುವಾಗ ಧಾತ್ರಿಯು ಆಕೆಯ ತಮ್ಮನೊಂದಿಗೆ ಸ್ಕೂಟರ್ ನಲ್ಲಿ ಅಂಗಡಿಗೆ ಬಂದು ಹಣ್ಣುಗಳನ್ನು ಕೊಂಡಳು. ಮೈತ್ರಿ ಸುಮ್ಮನಿರದೆ ಎಂದಿನ ಸಲುಗೆಯಿಂದ ಅವಳ ಹೆಗಲ ಮೇಲೆ ಕೈ ಹಾಕಿ “ಏನಿವತ್ತು ಅಂಗಡಿಗೆ ಬಂದುಬಿಟ್ಟಿದ್ದಿ? ಏನು ವಿಶೇಷ? ನಿಮ್ಮ ಮನೆಗೆ ಬಂದು ನಾನು ಸಹಾಯ ಮಾಡಲಾ?” ಎಂದು ಆತ್ಮೀಯವಾಗಿ ಕೇಳಿದಳು. ಆಗವಳು” ಇಲ್ಲ ,ಅಂತದ್ದೇನು ಇಲ್ಲ .ಈಗ ನೀನು ನಮ್ಮ ಮನೆಗೆ ಬರಬೇಡ. ಬಿಡುವಾದಾಗ ನಾನೇ ನಿನಗೆ ಸಿಗುತ್ತೇನೆ.” ಎಂದು ಹೇಳಿ ಮೈತ್ರಿಯ ಕೈಯನ್ನು ತನ್ನ ಭುಜದಿಂದ ಕೆಳಗಿಳಿಸಿ ಹೊರಟೇಬಿಟ್ಟಳು. ಮೈತ್ರಿಗೆ ಅಚ್ಚರಿಯಾಯಿತು. ಗಂಟೆಗಟ್ಟಲೆ ಹರಟುತ್ತಿದ್ದ ತನ್ನ ಗೆಳತಿಗೆ ಇಂದೇನಾಯಿತೆಂದು ತಿಳಿಯದೆ ಯೋಚಿಸಲಾರಂಭಿಸಿದಳು. ಮನೆಗೆ ಹೋದ ಬಳಿಕ ಅಮ್ಮನ ಬಳಿ ಇದನ್ನೇ ಚರ್ಚಿಸಿದಳು. ಆಗ ಅಮ್ಮ ಮಗಳಿಗೆ ಧಾತ್ರಿಯು ತನ್ನ ಸಹಪಾಠಿಗಳನ್ನು ಊಟಕ್ಕೆ ಆಹ್ವಾನಿಸಿರುವುದನ್ನು ತಿಳಿಸಿದರು. ಈ ಮಾತುಗಳನ್ನು ಕೇಳಿ ಮೈತ್ರಿಗೆ ಸಂಕಟವಾಯಿತು.
“ನಾನೇನು ಅವರ ಮನೆಗೆ ಊಟಕ್ಕೆ ಆಸೆಪಟ್ಟು ಹೋಗುತ್ತಿರಲಿಲ್ಲ. ಆದರೆ ನನ್ನ ಜೊತೆ ಸೌಜನ್ಯದಿಂದಲೂ ಮಾತನಾಡಲಿಲ್ಲವಲ್ಲ!” ಎಂದು ಹಲುಬಿದಳು. ಆದರೆ ತನ್ನ ಘನತೆಗೆ ಮೈತ್ರಿಯು ತಕ್ಕವಳಲ್ಲವೆಂದು ಧಾತ್ರಿ ತೀರ್ಮಾನಿಸಿದ್ದಳು. ಸಾಮಾನ್ಯ ಕೂಲಿಕಾರ ಹುಡುಗಿಯಾದ ಮೈತ್ರಿ ಅವಳ ಎಂ ಬಿ ಬಿ ಎಸ್ ಓದುತ್ತಿದ್ದ ಸ್ನೇಹಿತೆಯರ ಎದುರು ಪರಿಚಯಕ್ಕೆ ಅರ್ಹಳಾಗಿರಲಿಲ್ಲ. ದಶಕಗಳ ಗೆಳೆತನ ಸದ್ದಿಲ್ಲದೆ ಸತ್ತಿತ್ತು! ಜೀವದ ಗೆಳತಿ ,ಒಡನಾಡಿಯಾಗಿದ್ದ ಧಾತ್ರಿಯು ಮೈತ್ರಿಯನ್ನು ಅಂತರದಿಂದ ಕಾಣಲಾರಂಭಿಸಿದಳು. ಆ ದಿನ ಮೈತ್ರಿಯು ಎಷ್ಟೊತ್ತು ಹಲುಬುತ್ತಾ ,ಅಳುತ್ತಾ ಕುಳಿತಳೋ ಆ ದೇವರೇ ಬಲ್ಲ!
” ನಾನು ಮಾಡಿದ ತಪ್ಪೇನು? ಓ ದೇವರೇ ನನಗೇಕೆ ಇಂತಹ ಶಿಕ್ಷೆ ?” ಎಂದು ಹಲುಬಿದಳು.
ಗೆಳತಿಯ ಈ ತಿರಸ್ಕಾರ ಮೈತ್ರಿಯ ಛಲವನ್ನು ಬಡಿದೆಬ್ಬಿಸಿತು. ಗೆಳತಿಗೆ ಸರಿಸಮಾನಾಗಿ ನಿಲ್ಲಬೇಕೆಂಬ ಹಠವು ಮನದಲ್ಲಿ ಮನೆ ಮಾಡಿತು. ಬಿಡುವಿಲ್ಲದ ಕೆಲಸಗಳ ನಡುವೆಯೂ ಕಷ್ಟಪಟ್ಟು ಓದಿ ಕೆಲವೊಮ್ಮೆ ನಿದ್ರೆಗೆ ತಿಲಾಂಜಲಿ ನೀಡಿ ಬಿ ಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದಳು.
ಎಂಬಿಬಿಎಸ್ ಮುಗಿಸಿದ ಧಾತ್ರಿಯು ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಮೈತ್ರಿಯು ಅವಳ ಆಸ್ಪತ್ರೆಯಲ್ಲಿ ದಿನಗೂಲಿ ‘ಡಿ ‘ದರ್ಜೆ ನೌಕರಳಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದಳು. ಸ್ನೇಹವಿದ್ದರೂ ಮೊದಲಿನ ವಿಶ್ವಾಸ ಈಗ ಮರೆಯಾಗಿತ್ತು. ಕೆಲಸ ಮಾಡುತ್ತಾ ಮೈತ್ರಿ ಕೆಎಎಸ್ ಪರೀಕ್ಷೆಗೆ ಅತ್ಯಂತ ಪರಿಶ್ರಮದಿಂದ ತಯಾರಿ ಆರಂಭಿಸಿದಳು. ಗೆಳತಿಗೆ ಸಿಗುತ್ತಿದ್ದ ಗೌರವಾದರ ಮತ್ತು ಅವಳು ತನ್ನನ್ನು ಅಲಕ್ಷಿಸಿದ ರೀತಿ ಪ್ರತಿಕ್ಷಣ ಮೈತ್ರಿಯನ್ನು ಎಚ್ಚರಿಸುತ್ತಿತ್ತು. ಕೆಎಎಸ್ ಪರೀಕ್ಷೆಯಲ್ಲಿ ಅವಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯಿತು. ಉಪ ಆಯುಕ್ತ ಹುದ್ದೆಗೆ ಆಯ್ಕೆಯಾಗಿ ನೇಮಕಗೊಂಡ ಮೈತ್ರಿ ಸಾಧನೆಯ ಶಿಖರವನ್ನೇರಿದಳು. ತರಬೇತಿಯ ಬಳಿಕ ಧಾತ್ರಿಯು ಕೆಲಸ ನಿರ್ವಹಿಸುತ್ತಿದ್ದ ತಾಲೂಕಿನ ಆರೋಗ್ಯ ಕೇಂದ್ರಗಳ ಸುಧಾರಣೆಗೆ ಅಧ್ಯಯನ ವರದಿಯನ್ನು ಸಿದ್ಧಪಡಿಸಲು ಸರ್ಕಾರದಿಂದ ಮೈತ್ರಿಯು ನೇಮಿಸಲ್ಪಟ್ಟಳು. ತನ್ನ ಬಾಲ್ಯದ ಗೆಳತಿಯು ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ಮೈತ್ರಿಯು ಜೀಪಿನಲ್ಲಿ ಬಂದಿಳಿದಾಗ ವೈದ್ಯಾಧಿಕಾರಿ ಧಾತ್ರಿ ಹೂಮಾಲೆ ಹಾಕಿ ಅಳುಕಿನಿಂದ ಸ್ವಾಗತಿಸಿದಳು. ಅದನ್ನು ಗುರುತಿಸಿದ ಮೈತ್ರಿ ಅಂದು ಸಾಯಂಕಾಲ ತನ್ನ ಮನೆಗೆ ಬರುವಂತೆ ಗೆಳತಿಯನ್ನು ಆಹ್ವಾನಿಸಿದಳು. ಅಂದು ಸಂಜೆ ಗೊಂದಲದಿಂದಲೇ ಮನೆಗೆ ಹೋದಳು ಡಾ|| ಧಾತ್ರಿ. ಮನೆಗೆ ಬಂದ ಗೆಳತಿಯನ್ನು ಪ್ರೀತಿಯಿಂದ ಅಪ್ಪುತ್ತಾ
” ನಿನಗೇಕೆ ಹಿಂಜರಿಕೆ? ಎಂದಿದ್ದರೂ ನಾನು ನಿನ್ನ ಗೆಳತಿ ಅಲ್ಲವೇ?” ಎಂದಳು. ಅದುವರೆಗಿನ ಗೆಳತಿಯೊಂದಿಗಿನ ತನ್ನ ವರ್ತನೆಗೆ ಧಾತ್ರಿ ವಿಷಾದಿಸಿದಳು. ಅದಕ್ಕೆ ಮೈತ್ರಿ ನೀಡಿದ ಉತ್ತರ ಅವಳ ಗುಣ ಸೌಂದರ್ಯವನ್ನು ಬಿಂಬಿಸಿತು.
” ನೀನು ನನ್ನೊಂದಿಗೆ ಕಟುವಾಗಿ ವರ್ತಿಸದಿದ್ದರೆ, ತಾರತಮ್ಯ ಮಾಡದಿದ್ದರೆ ನಾನಿಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ನಾನು ಮಾಡಿದ ಕರ್ಮ, ಹಣೆಬರಹ ಎಂದುಕೊಳ್ಳುತ್ತಾ ಕೂಲಿ ಮಹಿಳೆಯಾಗಿಯೇ ನನ್ನ ಜೀವನಪೂರ್ತಿ ಕಳೆದುಬಿಡುತ್ತಿದ್ದೆ. ಆ ಕ್ಷಣಕ್ಕೆ ನಿನ್ನಿಂದ ಆದ ಅವಮಾನವು ನನ್ನನ್ನು ಕುಗ್ಗಿಸಿತ್ತು. ಹಾಗೆಯೇ ನನ್ನೊಳಗಿನ ಶಕ್ತಿಯನ್ನು, ಹಠವನ್ನು ಮತ್ತು ಸಾಧಿಸುವ ಛಲವನ್ನು ಈಚೆಗೆ ಎಳೆದಿತ್ತು. ಹೀಗಾಗಿ ನೀನು ನನಗೆ ಉಪಕಾರವನ್ನೇ ಮಾಡಿರುವೆ.” ಎಂದಳು. ಧಾತ್ರಿಗೂ ಜೀವನದ ಪಾಠ ಅರ್ಥವಾಗಿತ್ತು. ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಂಡರು. ಮೈತ್ರಿಯ ಅಮ್ಮನ ಕಣ್ಣುಗಳಲ್ಲಿ ಆನಂದಬಾಷ್ಪ ಜಿನುಗುತಿತ್ತು. ಮೈತ್ರಿಯ ಮನ ಸೌಂದರ್ಯವು ಧಾತ್ರಿಯ ಮನ ಕಲಕಿತ್ತು; ಗೆದ್ದಿತ್ತು.
ಗೆಳತಿಯರ ಗೆಳೆತನ ಮರುಹುಟ್ಟು ಪಡೆದು ಮತ್ತಷ್ಟು ಮಗದಷ್ಟು ಗಟ್ಟಿಯಾಯಿತು.
