ಲೇಖನ
– ಆಶ್ರಿತ ಕಿರಣ್
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ನೋವನ್ನು ಮರೆಯುವುದು ಸುಲಭವೇ..? ನೋವನ್ನು ಯಾಕೆ ಮರೆಯಬೇಕು? ನೋವನ್ನು ಅನುಭವಿಸದೆ ಬದುಕಲು ಸಾಧ್ಯವಿಲ್ಲವೇ.. ಎನ್ನುವ ಪ್ರಶ್ನೆಗಳು ನೋವಿನಲ್ಲಿರುವಾಗ ಉದ್ಭವವಾಗುತ್ತದೆ. ನಲಿವಿನ ಮಹತ್ವ ಅಡಗಿರುವುದು ನೋವಿನಲ್ಲಿ ಎನ್ನುವುದನ್ನು ಮರೆಯುವಂತಿಲ್ಲ ಅಲ್ಲವೇ..
ನೋವನ್ನು ಅನುಭವಿಸದೆ ಹೋದರೆ ನಲಿವಿನ ಮಹತ್ವ ಅರ್ಥವಾಗದು. ನೋವು ಬದುಕಿನ ಅವಿಭಾಜ್ಯ ಅಂಗವೆಂದರೂ ತಪ್ಪಲ್ಲ. ಮಾನಸಿಕ ಅಥವಾ ದೈಹಿಕ ನೋವುಗಳು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸವಾಲುಗಳಾಗಿರುತ್ತದೆ. ಅವುಗಳ ಜೊತೆಗೆ ಬದುಕನ್ನು ನಡೆಸಿ ಬೆಳೆದಾಗ ಬದುಕಿನ ಸಾರ್ಥಕತೆ ದೊರೆಯುತ್ತದೆ.
ನೋವನ್ನು ಯಾಕೆ ಮರೆಯಬೇಕು !
ನೋವನ್ನು ಮರೆತರೆ ನೆಮ್ಮದಿಯಾಗಿರಬಹುದು. ನೋವನ್ನು ತಾಳ್ಮೆಯಿಂದ ಗೆದ್ದಾಗ ಮನ ಮನೆ ನಗುತ್ತದೆ. ಪ್ರತಿಯೊಬ್ಬರು ನೋವನ್ನು ಎದುರಿಸಲೇಬೇಕು. ದೇವಾನುದೇವತೆಗಳೂ ಕೂಡ ನೋವು ಅನುಭವಿಸಿದ್ದಾರೆ. ರಾಜ ಮಹಾರಾಜರುಗಳು ನೋವಿನಿಂದ ಪಾರಾಗಿರಲಿಲ್ಲ. ಅಷ್ಟಕ್ಕೂ ನೋವಿಗೆ ಭಯಪಡುವುದೇಕೆ? ನೋವಿಗೆ ಅಳುವುದೇಕೆ ?
ಕುರುಕ್ಷೇತ್ರ ರಣಭೂಮಿಯಲ್ಲಿ ಅರ್ಜುನ ಯುದ್ಧ ಮಾಡಲು ಹಿಂಜರಿದು ನನ್ನ ಸಂಬಂಧಿಕರ ಸಾವಿನ ನೋವನ್ನು ಹೇಗೆ ನೋಡಲಿ ಹೇಗೆ ಸಹಿಸಲಿ ಎಂಬ ಪ್ರಶ್ನೆ ಕೇಳಿ ಕುಸಿದು ಕುಳಿತಾಗ ಧರ್ಮ ಸಂಸ್ಥಾಪನೆಗೆ ಯುದ್ಧ ಮಾಡಬೇಕು ಎಂದು ಶ್ರೀಕೃಷ್ಣ ಉಪದೇಶ ನೀಡುತ್ತಾನೆ. ಗೀತೆಯಲ್ಲಿನ 2ನೇ ಅಧ್ಯಾಯದಲ್ಲಿ, ಶ್ರೀಕೃಷ್ಣ ಅರ್ಜುನನಿಗೆ ಹೀಗೆ ಹೇಳುತ್ತಾನೆ.
“ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ।
ಅಗಮಾಪಾಯಿನೋऽನಿತ್ಯಾ ತಾಂಸ್ತಿತಿಕ್ಷಸ್ವ ಭಾರತ॥”
ಈ ಶ್ಲೋಕದಲ್ಲಿ ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ ಸುಖ-ದುಃಖಗಳು ಸ್ವಲ್ಪ ಕಾಲ ಕಾಣಿಸಿಕೊಂಡು ಕ್ರಮೇಣ ಮಾಯವಾಗುತ್ತದೆ. ಈ ಸುಖ ದುಃಖ ಇಂದ್ರಿಯಗಳ ಗ್ರಹಿಕೆಯಿಂದ ಉದ್ಭವವಾಗುತ್ತದೆ. ಅವುಗಳಿಂದ ಪ್ರಭಾವಗೊಳ್ಳದೆ ಸಹಿಸುವುದನ್ನು ಕಲಿಯಬೇಕು ಎನ್ನುವುದು ಈ ಶ್ಲೋಕದ ಅರ್ಥ. ಕರ್ತವ್ಯ ನಿರ್ವಹಣೆಯಲ್ಲಿ ಸುಖ-ದುಃಖಗಳ ಆಗುಹೋಗುಗಳನ್ನು ಸಹಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಾನೆ.
ನೋವು ಶಾಶ್ವತವಲ್ಲ ಎಂದ ಮೇಲೆ ಅದಕ್ಕಾಗಿ ಕುಗ್ಗುವುದೇಕೆ? ನೋವು ನೀಡುವುದನ್ನು ಮತ್ತಷ್ಟು ನೆನೆದು ನೋವನ್ನು ಅನುಭವಿಸುವುದಕ್ಕಿಂತ ಅದರಿಂದ ಹೊರಬರುವ ದಾರಿ ಹುಡುಕುವುದು ಸೂಕ್ತವಲ್ಲವೇ?
ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದು ಅವನಿಗೆ ಮಾತ್ರವಿರಲಿ ಅಥವಾ ಅದು ಪುಸ್ತಕಕ್ಕೆ ಸೀಮಿತವಾಗಿರಲಿ ಅಥವಾ ಪುಸ್ತಕ ಓದುವವರಿಗಿರಲಿ ಎನ್ನುವ ಭಾವನೆ ಹೆಚ್ಚಾಗಿ ನೋವಿನಿಂದ ಬದುಕುವುದಕ್ಕಿಂತ ಸಾವನ್ನು ಆರಿಸಿಕೊಳ್ಳುವ ಮನಸ್ಸುಗಳು, ನೋವಿನಿಂದ ಕುಗ್ಗಿ ಜೀವನವನ್ನು ಶಪಿಸುತ್ತಾ ಬದುಕುವ ವ್ಯಕ್ತಿತ್ವಗಳು ತಿಳಿಯಬೇಕಾದ ಅರಿಯಬೇಕಾದ ಒಂದು ರಹಸ್ಯವಿದೆ. ಗೀತೆ ಬದುಕುವ ಮಾರ್ಗ ತಿಳಿಸುತ್ತದೆ. ಅದರಿಂದ ತಿಳಿದು ಅಳವಡಿಸಿಕೊಳ್ಳುವುದು ಸಾಕಷ್ಟಿದೆ. ಬದುಕೆಂಬ ಪರೀಕ್ಷೆಯನ್ನು ಎದುರಿಸಲು ಬೇಕಾಗಿರುವ ಆತ್ಮಸ್ಥೈರ್ಯ, ನೋವನ್ನು ಸ್ವೀಕರಿಸಿ ಬದುಕುವ ಛಲ ತುಂಬುವ ಶಕ್ತಿ ಭಗವದ್ಗೀತೆಗಿದೆ. ಆದರೆ ಇದನ್ನು ತಿಳಿಯುವ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಮನಸ್ಥಿತಿ ಮರೆಯಾಗಿದೆ.
ಹೇಗೆ ಹಸಿವಾದಾಗ ಊಟ ಮಾಡುತ್ತೇವೋ, ಕೆಲವೊಮ್ಮೆ ಚಳಿಗಾಲದಲ್ಲಿ ಅನಿವಾರ್ಯತೆಯಿಂದ ಬೇರೆ ದಾರಿಯಿಲ್ಲದೆ ತಣ್ಣೀರು ಸ್ನಾನ ಮಾಡುತ್ತೇವೋ, ಬೇಸಿಗೆಯ ಬಿಸಿಯಲ್ಲಿ ಬಿಸಿಯಾದ ಬಜ್ಜಿ ಬೊಂಡಾ ತಿಂದು ಬಿಸಿ ಬಿಸಿ ಕಾಫಿ ಟೀ ಕುಡಿಯುವ ಮನಸ್ಸು ಮಾಡುತ್ತೇವೋ ಹಾಗೆ ಬದುಕಿನಲ್ಲಿ ಎದುರಾಗುವ ನೋವುಗಳನ್ನು ನಗುತ್ತಾ ಸ್ವೀಕರಿಸಿ ಮನವನ್ನು ನಗುವಂತೆ ಮಾಡಬೇಕು. ಮನಸ್ಸಾರೆ ನಕ್ಕಾಗ ಮುಖದಲ್ಲಿ ಮೂಡುವ ಹೊಳಪು ಯಾವ ಕ್ರೀಮ್ ಅಥವಾ ಅಲಂಕಾರದಿಂದ ಪಡೆಯಲು ಸಾಧ್ಯವಿಲ್ಲ.
ಮನ ನಕ್ಕರೆ ಮನೆ ನಂದನವನವಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸುತ್ತದೆ..ಉದಾಹರಣೆಗೆ ನೋವು ಹತಾಷೆಯಿಂದ ಕೋಪಗೊಂಡ ಮನಸ್ಸು ಎದುರು ನಿಂತವರ ಮೇಲೆ ಅಸಹನೆಯಿಂದ ಕೂಗಾಡುವಂತೆ ಮಾಡುತ್ತದೆ. ಮನೆಯ ಹೊರಗೆ ಅಥವಾ ಮನೆಯ ಒಳಗೆ ಶಾಂತಿ ಇಲ್ಲವಾದರೆ ಬದುಕು ಬೇಡವೆನಿಸುತ್ತದೆ. ಮನೆ ಮನದ ಹಿತ ದೃಷ್ಟಿಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ನೋವ ಮರೆಯಬೇಕು. ನೋವು ಮರೆತು ಮನವನ್ನು ನಗುತ್ತಿರುವಂತೆ ನೋಡಿಕೊಳ್ಳಬೇಕು. ಏನಂತೀರಿ?
