ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಜಾತ್ಯಾತೀತ ಜನತಾದಳವನ್ನು ತಳಮಟ್ಟದಿಂದ ಬಲಪಡಿಸಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜನರೊಂದಿಗೆ ಜನತಾದಳ ಅಭಿಯಾನವನ್ನು ಆರಂಭಿಸಿರುವ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಸೇರಿದಂತೆ ಪಕ್ಷದ ರಾಜ್ಯ,ಜಿಲ್ಲಾ ಮುಖಂಡರು ಸೇರಿದಂತೆ ಅನೇಕರು ಜು. ೧೫ ರಂದು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪಪೂ ವಿದ್ಯಾಲಯದ ಆವರಣದಲ್ಲಿ ಮಧ್ಯಾನ್ಹ ೩ ಗಂಟೆಗೆ ಹಮ್ಮಿಕೊಂಡಿರುವ ಜನರೊಂದಿಗೆ ಜನತಾದಳ ಹಾಗೂ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ತಾಲೂಕಿನ ಕುದರಿಸಾಲವಾಡಗಿಯ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸುವರು. ಇವರೊಂದಿಗೆ ಮಾಜಿ ಸಚಿವರಾದ ಆಲಗೊಂಡ ಹನಮಂತಪ್ಪ, ವೆಂಕಟರಾವ ನಾಡಗೌಡ, ವೆಂಕಟ್ಟಪ್ಪ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಮುಖಂಡರಾದ ಅಪ್ಪುಗೌಡ ಪಾಟೀಲ, ಹನಮಂತಪ್ಪ ಮಾವಿನಮರದ, ಬಿ.ಡಿ.ಪಾಟೀಲ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಸೇರಿದಂತೆ ಅನೇಕರು ಆಗಮಿಸುತ್ತಾರೆ. ಮುಂಬರುವ ದಿನಗಳಲ್ಲಿ ನಡೆಯುವ ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಈಗಿನಿಂದಲೇ ಕಾರ್ಯನ್ಮೋಖರಾಗಬೇಕು. ಹೂವಿನಹಿಪ್ಪರಗಿಯಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಹತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮತಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ನಿಖಿಲ್ಕುಮಾರಸ್ವಾಮಿ ಅವರು ಮಧ್ಯಾನ್ಹ ನಮ್ಮ ನಿವಾಸದಲ್ಲಿ ಊಟ ಮುಗಿಸಿಕೊಂಡ ನಂತರ ಬೈಕ್ ರ್ಯಾಲಿ ಮೂಲಕ ಹೂವಿನಹಿಪ್ಪರಗಿ ಗ್ರಾಮಕ್ಕೆ ತಲುಪಿದ ನಂತರ ಗ್ರಾಮದ ಅಗಸಬಾಳ ಕ್ರಾಸ್ನಿಂದ ಕ್ಯಾಂಟರ್ ಮೂಲಕ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಚೀನಗೌಡ ಪಾಟೀಲ, ಗುರುನಗೌಡ ಪಾಟೀಲ ಇದ್ದರು.