ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಿಮಗೇಕೆ ಕೊಡಬೇಕು ಕಪ್ಪ?.. ನೀವೇನು ನಮ್ಮ ಅಣ್ಣ ತಮ್ಮಂದಿರೇ?ನೆಂಟರೇ! ಇಷ್ಟರೇ!. ನಿಮಗೇಕೆ ಕೊಡಬೇಕು ಕಪ್ಪ ಎಂಬ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಈ ಸಂಭಾಷಣೆ ಯಾರಿಗೆ ಗೊತ್ತಿಲ್ಲ? ರಾಣಿ ಚೆನ್ನಮ್ಮನ ಪಾತ್ರಕ್ಕೆ ಅದ್ಭುತ ಅಮೋಘ ಅಭಿನಯದ ಮೂಲಕ ನ್ಯಾಯ ಸಲ್ಲಿಸಿದ ಕರ್ನಾಟಕದ ಮನೆ ಮಾತಾದ ಕಲಾ ಸರಸ್ವತಿ ಬಿ ಸರೋಜಾ ದೇವಿ.

ಕಿತ್ತೂರು ಚೆನ್ನಮ್ಮನ ವೇಷ ಭೂಷಣ ಧರಿಸಿ ಮೇಲಿನ ಸಂಭಾಷಣೆ ಹೇಳದ ಯಾವುದಾದರೂ ಒಂದು ಛದ್ಮವೇಶ ಸ್ಪರ್ಧೆ ಅದೂ ಕರ್ನಾಟಕದ ಯಾವ ಮೂಲೆಯಲ್ಲಾದರೂ ನಡೆದಿದೆಯೇ ಎಂದು ಕೇಳಿದರೆ
ಬಹುತೇಕ ಎಲ್ಲರ ಉತ್ತರ ಇಲ್ಲ ಎಂದು ಗೋಣಾ ಡಿಸುವುದೇ ಆಗಿರುತ್ತದೆ.. ಅಷ್ಟೊಂದು ಪ್ರಸಿದ್ಧ ಆ ಸಂಭಾಷಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ ಗತ್ತು ಗಾಂಭೀರ್ಯದ ಅಭಿನಯ.
ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ಶೌರ್ಯವೇ ಮೈವೆತ್ತ ಅಭಿನಯವಾದರೆ ಭಾಗ್ಯವಂತರು ಚಿತ್ರದಲ್ಲಿ ಗಂಡನನ್ನು ಅತ್ಯಂತ ಗೌರವಿಸುವ, ಪ್ರೀತಿಸುವ ಮತ್ತು ಆತನೆಂದರೆ ಭಯಪಡುವ ಪತ್ನಿಯ ಪಾತ್ರ.. ಹೀಗೆ ಪಾತ್ರ ಯಾವುದಾದರೇನು ಅತ್ಯಂತ ಲೀಲಾಜಾಲವಾಗಿ ತನ್ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ಬಿ. ಸರೋಜಾ ದೇವಿಯವರ ಅಭಿನಯ ಅಮೋಘವಾಗಿತ್ತು.. ಪಂಚ ಭಾಷಾ ತಾರೆಯಾಗಿ ಗುರುತಿಸಿಕೊಂಡಿದ್ದ ಬಿ. ಸರೋಜಾ ದೇವಿ ಅವರನ್ನು ಅಭಿನಯ ಸರಸ್ವತಿ ಎಂದು ಕರೆದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಮೈಸೂರಿನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭೈರಪ್ಪ ಮತ್ತು ಸದ್ಗೃಹಿಣಿಯಾಗಿದ್ದ ರುದ್ರಮ್ಮ ದಂಪತಿಗಳ ತುಂಬು ಕುಟುಂಬದಲ್ಲಿ ನಾಲ್ಕನೇ ಮಗಳಾಗಿ ಹುಟ್ಟಿದ ಬಿ. ಸರೋಜಾ ದೇವಿಯವರು ತಾವು ಹೋಗುತ್ತಿದ್ದ ಶಾಲೆಯ ನನ್ ಗಳನ್ನು ನೋಡಿ ತಾವು ಕೂಡ ನನ್ ಆಗಬೇಕೆಂದು ಬಯಸಿದವರು. ಸಾಂಪ್ರದಾಯಿಕ ಕುಟುಂಬದ ಅವರು ತಮ್ಮ ಹಣೆಯ ಕುಂಕುಮ, ಕೈಯ ಬಳೆ ತೆಗೆದು ಅತ್ಯಂತ ಸರಳವಾಗಿ ಇರಲು ನೋಡಿದಾಗ ಅವರ ಅಜ್ಜಿಯಿಂದ ಬೈಗುಳ ತಿಂದವರು.
ತಂದೆಯ ಪ್ರೋತ್ಸಾಹದಿಂದ ನೃತ್ಯ ಮತ್ತು ಸಂಗೀತದಲ್ಲಿ ಆಸಕ್ತಿಯನ್ನು ವಹಿಸಿದ ಸರೋಜಾದೇವಿ ತಮ್ಮ 13ನೇ ವಯಸ್ಸಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾವಪೂರ್ಣವಾಗಿ ಹಾಡಿದ್ದನ್ನು ನೋಡಿದ ಬಿ ಆರ್ ಕೃಷ್ಣಮೂರ್ತಿ ಎಂಬ ವ್ಯಕ್ತಿ ಅವರನ್ನು ಚಲನಚಿತ್ರ ರಂಗಕ್ಕೆ ಆಹ್ವಾನಿಸಿದರು.. ಆದರೆ ನನ್ ಆಗಬೇಕೆಂದು ಬಯಸಿದ್ದ ಸರೋಜಾ ದೇವಿ ಇದನ್ನು ಸಾರಾಸಗಟಾಗಿ ನಿರಾಕರಿಸಿದರು.
ಮುಂದೆ ತಂದೆಯ ಒತ್ತಾಸೆಯಂತೆ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಸರೋಜಾ ದೇವಿಯವರು ಹೊನ್ನಪ್ಪ ಭಾಗವತರ್ ನಿರ್ದೇಶನದ ‘ಮಹಾಕವಿ ಕಾಳಿದಾಸ’ ಎಂಬ ಚಲನಚಿತ್ರದ ಮೂಲಕ ಕನ್ನಡ ಚಲನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ತಾಯಿಯ ಕಟ್ಟಪ್ಪಣೆಯಂತೆ ಎಂದಿಗೂ ಈಜುಡುಗೆ ಮತ್ತು ತೋಳಿಲ್ಲದ ಉಡುಗೆಗಳನ್ನು ಧರಿಸಲಿಲ್ಲ. ಚಿತ್ರರಂಗದ ಚಮಕ್ ಚಮಕ್ ಪ್ರಪಂಚದಲ್ಲಿಯೂ ಕೂಡ ಆಕೆ ಅನರ್ಘ್ಯ ರತ್ನದಂತೆ ತನ್ನ ಅಸ್ಮಿತೆಯನ್ನು ಕಾಯ್ದುಕೊಂಡಳು. ಮೊದಮೊದಲು ಆಕೆಯ ಜೊತೆಗೆ ಬೆಂಗಾವಲಾಗಿ ತಂದೆ ಬರುತಿದ್ದರು. ನಂತರ ತಾಯಿ ಇಲ್ಲವೇ ಅಜ್ಜಿ ಚಲನಚಿತ್ರರಂಗಕ್ಕೆ ಸಂಬಂಧಿಸಿದ ಆಕೆಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳಲಾರಂಭಿಸಿದರು.
ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರ ರಂಗಗಳ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಆಕೆ ಅಭಿನಯಿಸಿ ಚತುರ್ಭಾಷಾ ತಾರೆ ಎಂದು ಕರೆಯಲ್ಪಟ್ಟರು.
ನಾಲ್ಕು ಭಾಷೆಯ ಚಲನ ಚಿತ್ರರಂಗಗಳ ದಿಗ್ಗಜ ನಟರಾದ ಡಾಕ್ಟರ್ ರಾಜಕುಮಾರ್, ಕಲ್ಯಾಣ್ ಕುಮಾರ್, ಸುನಿಲ್ ದತ್, ಎಂ ಜಿ ಆರ್, ಎನ್ ಟಿ ಆರ್, ದಿಲೀಪ್ ಕುಮಾರ್ ಶಮ್ಮಿ ಕಪೂರ್ ರಾಜೇಂದ್ರ ಕುಮಾರ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಜೊತೆ ಆಕೆ ನಟಿಸಿದ್ದಳು.
ಎಂ ಜಿ ಆರ್ ರೊಂದಿಗೆ ನಟಿಸಿದ್ದ ಸುಮಾರು 26 ಚಲನಚಿತ್ರಗಳು ದಾಖಲೆಯ ಜಯಭೇರಿ ಬಾರಿಸಿದ್ದವು. ಶಿವಾಜಿ ಗಣೇಶನ್ ರೊಂದಿಗಿನ 22 ಚಿತ್ರಗಳು ಕೂಡ ಜಯಭೇರಿ ಬಾರಿಸಿದ್ದವು. 1962ರಲ್ಲಿ ಆಕೆಯನ್ನು ಚತುರ್ಭಾಷಾ ತಾರೆ ಎಂದು ಗೌರವಿಸಲಾಯಿತು.
1950-60 ರ ದಶಕದ ಅತಿ ದೊಡ್ಡ ಚಲನಚಿತ್ರ ತಾರೆಯಾಗಿ ಪ್ರಸಿದ್ಧಿಯಾದ ಸರೋಜಾದೇವಿಯವರು ಅತಿ ದೊಡ್ಡ ಫ್ಯಾಷನ್ ಐಕಾನ್ ಆಗಿಯೂ ಪ್ರಸಿದ್ಧರಾದರು. ಮಹಿಳೆಯರು ಆಕೆಯ ಸೀರೆ, ಕುಪ್ಪಸ, ಒಡವೆ, ವಸ್ತುಗಳು ಹಾಗೂ ಆಕೆಯ ಮ್ಯಾನರಿಸಂಗಳನ್ನು
ತಮ್ಮದಾಗಿಸಿಕೊಂಡರು.
ಹಲವಾರು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ ಸರೋಜಾ ದೇವಿಯವರು 1967 ರಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹರ್ಷ ಎಂಬುವರೊಂದಿಗೆ ವಿವಾಹವಾದರು. ಕೌಟುಂಬಿಕ ಜೀವನ ಮತ್ತು ವೃತ್ತಿ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಿದ ಸರೋಜಾ ದೇವಿಯವರು ನಂತರ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಮೊದಲು ರೋಮ್ಯಾಂಟಿಕ್ ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದ ಬಿ ಸರೋಜಾ ದೇವಿಯವರು ನಂತರ ಸಾಮಾಜಿಕ, ಧಾರ್ಮಿಕ ಮತ್ತು ಭಾವನಾತ್ಮಕ ಚಿತ್ರಗಳಲ್ಲಿ ನಟಿಸಲಾರಂಭಿಸಿದರು. ಸುಮಾರು 161 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಆಕೆ ಮುಂದೆ ಪೋಷಕ ಪಾತ್ರಗಳಲ್ಲಿ ಸಶಕ್ತ ನಟನೆಗೆ ಹೆಸರಾದರು. 1986 ರ ವರೆಗೂ ತಾನು ಒಪ್ಪಿಕೊಂಡ ಎಲ್ಲ ಚಿತ್ರಗಳಲ್ಲಿ ನಟಿಸಿದ ಆಕೆ ಮುಂದೆ ಐದು ವರ್ಷಗಳ ಕಾಲ ಒಂದು ಪುಟ್ಟ ಬ್ರೇಕ್ ನಂತರ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಆರಂಭಿಸಿದರು.

ತನ್ನ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ವ್ಯವಹಾರ ಜ್ಞಾನದ ಕೊರತೆಯಿಂದ ಬಿ ಸರೋಜಾ ದೇವಿಯವರು ಇನ್ಕಮ್ ಟ್ಯಾಕ್ಸ್ ಮತ್ತಿತರ ಹಣಕಾಸು ಸಮಸ್ಯೆಗಳಿಂದ ಒದ್ದಾಡುತ್ತಿರುವಾಗ ಭಾರತ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಹರ್ಷ ಎಂಬ ಇಂಜಿನಿಯರ್ ರ ಪರಿಚಯವಾಯಿತು. ಶ್ರೀ ಹರ್ಷ ಅವರು ಕೇವಲ ಆಕೆಯ ಆರ್ಥಿಕ ವ್ಯವಹಾರಗಳ ತೊಂದರೆಯನ್ನು ಮಾತ್ರ ನಿವಾರಿಸಲಿಲ್ಲ ಬದಲಾಗಿ ಹಣಕಾಸಿನ ವ್ಯವಹಾರವನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದನ್ನು ಕೂಡ ಕಲಿಸಿಕೊಟ್ಟರು.1967 ರಲ್ಲಿ ಅವರಿಬ್ಬರ ವಿವಾಹವಾಯಿತು.
ಪತ್ನಿ ವಿವಾಹದ ನಂತರವೂ ನಟಿಯಾಗಿ ಕಾರ್ಯನಿರ್ವಹಿಸಲು ಆಕೆಗೆ ಶ್ರೀ ಹರ್ಷ ಪ್ರೋತ್ಸಾಹಿಸಿದರು. 2 ದಶಕಗಳ ದಾಂಪತ್ಯ ಜೀವನದ ನಂತರ 1986 ರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಶ್ರೀ ಹರ್ಷ ಅವರು ನಿಧನರಾದರು.
ಇದೀಗ ಬಿ ಸರೋಜಾ ದೇವಿಯವರ ಜೊತೆ ಅವರ ಮಗಳು ಭುವನೇಶ್ವರಿ ಇದ್ದರು. ಭುವನೇಶ್ವರಿಯವರ ಅಕಾಲಿಕ ಮರಣದ ನಂತರ ಮೊಮ್ಮಕ್ಕಳಾದ ಗೌತಮ್ ಮತ್ತು ಇಂದಿರಾ ಅವರ ಜೊತೆ ಸುಖಮಯ ವೃದ್ಧಾಪ್ಯ ಜೀವನವನ್ನು ಸಾಗಿಸುತ್ತಿದ್ದ ಬಿ ಸರೋಜಾ ದೇವಿಯವರು
ವಯೊ ಸಹಜ ತೊಂದರೆಗಳಿಂದ ಇಂದು ನಿಧನರಾಗಿದ್ದಾರೆ.
ಅಭಿನಯ ಸರಸ್ವತಿ, ಕಲಾದರೆ ಎಂದೆಲ್ಲಾ ಕರೆಸಿಕೊಂಡಿದ್ದ ಬಿ ಸರೋಜಾ ದೇವಿಯವರು ತಮ್ಮ ಏಳು ದಶಕಗಳ ಚಿತ್ರ ಜೀವನದಲ್ಲಿ ಒಂದೇ ಒಂದು ವಿವಾದಕ್ಕೆ ಸಿಲುಕಿಕೊಂಡಿಲ್ಲ. ಪ್ರಬುದ್ಧ ನಟಿಯಾಗಿದ್ದ ಆಕೆ ಚಲನಚಿತ್ರರಂಗದ ದಂತ ಕಥೆಯಾಗಿ ನಮ್ಮೆಲ್ಲರ ಮನದಲ್ಲಿ ಚಿರಕಾಲ ಉಳಿಯಲಿ.. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬ ಆಶಯದೊಂದಿಗೆ ಈ ನುಡಿ ನಮನಕ್ಕೆ ಒಂದು ವಿರಾಮ ನೀಡುತ್ತಿರುವೆ.
ಬಾಕ್ಸ್
ಪ್ರಶಸ್ತಿ – ಪುರಸ್ಕಾರಗಳು
- 1969ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನ
- 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕಾರ
- 2008ರಲ್ಲಿ ಭಾರತೀಯ ಚಲನಚಿತ್ರ ರಂಗದ ಜೀವಮಾನ ಸಾಧನೆ ಪುರಸ್ಕಾರ
- ಬೆಂಗಳೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್
- ತಮಿಳುನಾಡು ಸರ್ಕಾರದ ಕಲಾ ಮಾಮನಿ ಜೀವಮಾನ ಸಾಧನೆ ಪ್ರಶಸ್ತಿ
- ಆಂಧ್ರಪ್ರದೇಶದ ಎನ್ ಟಿ ಆರ್ ರಾಷ್ಟ್ರ ಪ್ರಶಸ್ತಿ
- ಆಂಧ್ರಪ್ರದೇಶದ ಎಂ ಜಿ ಆರ್ ಪ್ರಶಸ್ತಿ 2009 ರಲ್ಲಿ
- ಕರ್ನಾಟಕ ಘನ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2009 ರಲ್ಲಿ
ಹೀಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ದೊರೆತಿವೆ.
