ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಹಾಗೂ ಆಲಮಟ್ಟಿಡ್ಯಾಂಸೈಟ್ ಸಂಪರ್ಕ ಕಲ್ಪಿಸಲು ಅಡ್ಡಿಯಾಗಿರುವ ಆಲಮಟ್ಟಿ ರೈಲು ನಿಲ್ದಾಣದ ಬಳಿ ರೈಲ್ವೆ ಅಂಡರ್ಪಾಸ್ ನಿರ್ಮಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.
ಸೋಮವಾರ ಆಲಮಟ್ಟಿಗೆ ಭೇಟಿ ನೀಡಿದ ಅವರು ರೈಲ್ವೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ರೈಲ್ವೆ ಅಂಡರ್ ಪಾಸ್ ನಿರ್ಮಾಣದ ವಿಷಯದ ಕುರಿತು ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಅವರೊಂದಿಗೂ ಚರ್ಚಿಸುವೆ ಎಂದು ಹೇಳಿದರು.
ಅಂಡರ್ ಪಾಸ್ ನಿರ್ಮಾಣಕ್ಕೆ ತಾಂತ್ರಿಕ ತೊಂದರೆಯ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ, ಅದನ್ನು ಬಗೆಹರಿಸಿಯಾದರೂ ಅಂಡರ್ ಪಾಸ್ ನಿರ್ಮಿಸಲು ಸೂಚಿಸಿದ್ದೇನೆ, ನೈರುತ್ಯ ರೇಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಅವರೊಂದಿಗೆ ಮಾತನಾಡುವೆ ಎಂದರು.
ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಆಲಮಟ್ಟಿ-ಯಾದಗೀರಿ ರೈಲು ಮಾರ್ಗ ಸಮೀಕ್ಷೆಗೆ ಆದೇಶಿಸಲಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲೆಲ್ಲಾ ಅಭಿವೃದ್ಧಿಯ ಪರ್ವ ಹರಡಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಕೇಂದ್ರದಿಂದ ೧.೨೦ ಲಕ್ಷ ಕೋಟಿ ರೂಗಳ ಕಾಮಗಾರಿ ನಡೆದಿದೆ. ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಳೆದ ಆರು ತಿಂಗಳಿಂದ ಸಂಬಳ ನೀಡದ ಕಾರಣ ಇಂಡಿ ತಾಲ್ಲೂಕಿನ ೭೦ ಹಳ್ಳಿಗಳಿಗೆ ನೀರು ಪೂರೈಕೆಯಲ್ಲಿ ಕಳೆದ ಐದು ದಿನಗಳಿಂದ ವ್ಯತ್ಯಯ ಉಂಟಾಗಿದೆ. ಅಲ್ಲಿಯ ಕಾರ್ಮಿಕರಿಗೆ ಸಂಬಳ ಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಅರಳದಿನ್ನಿಯ ಸ್ಮಶಾನ ದಾರಿಯ ಸಮಸ್ಯೆ ಬಗೆಹರಿಸುವಿಕೆ, ಬೇನಾಳ ರೈಲುನಿಲ್ದಾಣದ ದುರಸ್ತಿ, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.
ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಭರತರಾಜ ದೇಸಾಯಿ, ಶಿವಾನಂದ ಅವಟಿ, ರಮೇಶ ಆಲಮಟ್ಟಿ, ಶಂಕರ ಜಲ್ಲಿ, ಮಲ್ಲೇಶಿ ರಾಠೋಡ, ಪ್ರಮೋದ ಕುಲಕರ್ಣಿ, ರಮೇಶ ರೇಶ್ಮಿ, ಲಕ್ಷ್ಮಣ ಹಂಡರಗಲ್ಲ, ಮಲ್ಲಪ್ಪ ಹುಂಡೇಕಾರ, ಎನ್.ಎ. ಪಾಟೀಲ, ಎಂ.ಡಿ. ಬಾಗಲಕೋಟೆ, ದಾಮೋದರ ರಾಠಿ, ಮಹಾಂತೇಶ ಹಿರೇಮಠ, ಶ್ರೀಧರ ಬಿದರಿ, ಸುಭಾಷ ಗೋಖಲೆ, ರಮೇಶ ವಂದಾಲ, ಬಿ.ಎಚ್. ಗಣಿ, ಮಲ್ಲನಗೌಡ ಪಾಟೀಲ, ಕರಿಯಪ್ಪ ಭಾವಿಕಟ್ಟಿ, ಬಸವರಾಜ ದಂಡಿನ, ರೈಲ್ವೆ ಅಧಿಕಾರಿಗಳಾದ ಚಂದನ್, ಸೋಮನಾಥ ಮತ್ತೀತರರು ಇದ್ದರು.
ಇದೇ ಸಂದರ್ಭದಲ್ಲಿ ಆಲಮಟ್ಟಿ, ಬೇನಾಳ, ವಂದಾಲ ಗ್ರಾಮಸ್ಥರು ವಿವಿಧ ಬೇಡಿಕೆಗಳ ಮನವಿಯನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಿದರು.
ಆಲಮಟ್ಟಿ ರೈಲ್ವೆ ನಿಲ್ದಾಣದಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು, ದೂರದ ಪ್ರಯಾಣಿಕರಿಗೆ ಅನುಕೂಲವಾಗಲು ಡಾರ್ಮೇಟರಿ ನಿರ್ಮಿಸಬೇಕು, ಆಲಮಟ್ಟಿಯಲ್ಲಿ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಹಾಗೂ ಯಶವಂತಪುರ-ಬಾರಮೇರ್ ರೈಲುಗಳನ್ನು ನಿಲ್ಲಿಸಬೇಕು, ಬೇನಾಳ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ನವೀಕರಣಗೊಳಿಸಬೇಕು, ವಂದಾಲ ಬಳಿ ರೈಲ್ವೆ ಓವರ್ ಬ್ರಿಜ್ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆಯ ಮನವಿ ಅರ್ಪಿಸಿದರು.

