ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ತ್ಯಾಗ ಭಾವ್ಯಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ರವಿವಾರದಂದು ಲೇಝಿಮ್ ಉತ್ಸವ, ಡೋಲಿ ಮೆರವಣಿಗೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಳೆದ ಐದುದಿನಗಳಿಂದ ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಛೇರಿಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ಲಾಲಸಾಬಲಿ ಹಾಗೂ ಹುಸೇನಬಾಷ ದೇವರುಗಳಿಗೆ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.
ಸಾಥವಿ ಪೂಜೆ, ಗಂಧರಾತ್ರಿ ನಡೆಯುವ ವಿಶೇಷ ಪೂಜೆಗಳಲ್ಲಿ ಜಾತಿ ಮತಭೇದವಿಲ್ಲದೆ ಸರ್ವಧರ್ಮಿಯರು ಪಾಲ್ಗೊಂಡು ತಮ್ಮ ಭಕ್ತಿಗನುಸಾರವಾಗಿ ಹರಕೆ ತೀರಿಸಿದರು.
ಶನಿವಾರ ರಾತ್ರಿ ಕರ್ಬಲಾ ನಿಮಿತ್ಯ ರಾತ್ರಿಯಿಡಿ ಉಪ್ಪಲದಿನ್ನಿಯ ಶಾಲ ನೇತ್ರತ್ವದ ರಿವಾಯತ್ ತಂಡ ಹಾಗೂ ಸ್ಥಳೀಯ ತಂಡಗಳಿಂದ ಮೊಹರಂ ಪದಗಳ ಗೀತಗಾಯನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಹಬ್ಬದ ಕೊಣೆಯದಿನವಾದ ರವಿವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಸಾವಿರಾರು ಜನ ರೈತರು, ಗ್ರಾಮಸ್ಥರು ದೇವರುಗಳಿಗೆ ಬೆತ್ತಾಸು, ಖಾರಿಕ, ಬಿಸ್ಕೇಟ್‌ಗಳನ್ನು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರಲ್ಲಿ ನಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಮುಸ್ಲಿಂ ಬಾಂಧವರು ಮೊಹರಂ ಹಬ್ಬದ ನಿಮಿತ್ತ ಕೊನೆಯ ಎರಡು ದಿನ ರೋಜಾ (ಉಪವಾಸ ವೃತ) ಆಚರಣೆ ಮಾಡುವುದರೊಂದಿಗೆ ವಿಶೇಷ ಸಿಹಿ ಖಾದ್ಯ ಚೊಂಗೆ ತಯಾರಿಸಿ ನೈವೆದ್ಯ ಅರ್ಪಿಸಿ ಅವುಗಳನ್ನು ಹಿಂದೂ ಬಾಂಧವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾವೈಕ್ಯತೆ ಮೆರೆದರು. ಮೊಹರಂ ನಿಮಿತ್ಯ ಲೇಝಿಮ್ ಉತ್ಸವ ಡೋಲಿ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಆರ್.ಎಂ. ಬಗನಾಳ, ಬಿ.ಎಸ್. ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಬಾಳಪ್ಪ ಹಳಿಂಗಳಿ, ಪರಪ್ಪಾ ಪಾಲಭಾವಿ, ದುಂಡಪ್ಪಾ ಪಾಟೀಲ, ಪ್ರಭು ಮುಧೋಳ, ಮನೋಜ ಹಟ್ಟಿ ಗ್ರಾಮದ ಸರ್ವ ಸಮಾಜಗಳ ಮುಖ್ಯಸ್ಥರು, ಜನಪ್ರತಿನಿಧಿಗಳು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹರಕೆ ತೀರಿಸಿದರು. ಮುಸ್ಲಿಂ ಸಮಾಜದ ಪ್ರಮುಖರು ಸ್ವಾಗತಿಸಿದರು.

