ಮುದ್ದೇಬಿಹಾಳ: ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾ.ಉ.) ಖೂಬಾಸಿಂಗ ಜಾಧವ್ ಅವರು ಹಿರೇಮುರಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೇಮುರಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಬೇಟಿ ನೀಡಿ ಮೂಲ ಸೌಕರ್ಯ ಹಾಗೂ ಶಾಲೆಯ ಸ್ಥಿತಿಗತಿ ಕುರಿತು ಪರಿಶೀಲಿಸಿದರು.
ಮಕ್ಕಳ ದಾಖಲಾತಿ, ಶಾಲಾ ಸ್ವಚ್ಛತೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಮುಖ್ಯ ಶಿಕ್ಷಕ ಚಂದ್ರಶೇಖರ ಚಟ್ಟಿ ಅವರ ಜೊತೆ ಚರ್ಚಿಸಿದರು. ಶಿಥಿಲ ವ್ಯವಸ್ಥೆಯಲ್ಲಿದ್ದ ಬಿಸಿಯೂಟ ಅಡುಗೆಕೋಣೆ ಪರಿಶೀಲಿಸಿ ನರೇಗಾ ಯೋಜನೆಯಡಿ ಬಿಸಿಯೂಟ ಅಡುಗೆಕೋಣೆ, ಪೌಷ್ಠಿಕ ತೋಟ ಹಾಗೂ ಹೆಣ್ಣು ಮಕ್ಕಳಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡುವ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿ ಮುಂದಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಅಳವಡಿಸುವಂತೆ ಸೂಚಿಸಿದರು. ಈಗಾಗಲೇ ನರೇಗಾ ಯೋಜನೆಯಡಿ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದಾಗಿ ಪಿಡಿಒ ಅವರು ತಿಳಿಸಿದರು. ಶಾಲಾ ಮಕ್ಕಳ ದಾಖಲಾತಿ, ಅವರಿಗೆ ವಿತರಿಸುವ ಆಹಾರ ಸಾಮಗ್ರಿ ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ವೇಳಾಪಟ್ಟಿಗನುಣವಾಗಿ ಸರಿಯಾದ ಸಮಯಕ್ಕೆ ರುಚಿ-ಶುಚಿಯಾದ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸುವಂತೆ ಬಿಸಿಯೂಟ ಕಾರ್ಯಕರ್ತೆಯರಿಗೆ ಸೂಚಿಸಿದರು.
ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಹೆಚ್.ಕುಂಬಾರ, ತಾಲೂಕು ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಶಾಲೆಯ ಸಹ ಶಿಕ್ಷಕರು ಇದ್ದರು.
Related Posts
Add A Comment