ಕಾವೇರಿ ನೀರಿನ ಕಿಚ್ಚು | ಕೃಷ್ಣಾ ತೀರದಲ್ಲೂ ಕಾವು | ಬೆಂಬಲಕ್ಕೆ ನಿಂತ ಅನ್ನದಾತರು
ಆಲಮಟ್ಟಿ: ಮಳೆಯ ಕೊರತೆಯ ಮಧ್ಯೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ, ತಾಲ್ಲೂಕು ರೈತ ಹಿತರಕ್ಷಣಾ ಸಂಘದ ಕಾರ್ಯಕರ್ತರು ಆಲಮಟ್ಟಿಯಲ್ಲಿ ಬುಧವಾರ, ಪ್ರತಿಭಟನೆ ನಡೆಸಿ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಮೂಲಕ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿ, ಕಾವೇರಿ ತೀರದ ರೈತರ ಬವಣೆಗೆ ಕೃಷ್ಣಾ ತೀರದ ರೈತರೆಲ್ಲಾ ಬೆಂಬಲಕ್ಕೆ ನಿಲ್ಲುತ್ತೇವೆ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನೀರು ಹರಿಸುವುದರಿಂದ ಜನ, ಜಾನುವಾರುಗಳ ತೊಂದರೆಯಾಗುವುದಲ್ಲದೇ, ಈಗಾಗಲೇ ಕಾವೇರಿ ನೀರನ್ನು ನಂಬಿ ಬಿತ್ತಿದ ಬೆಳೆ ಕೂಡಾ ಹಾಳಾಗುತ್ತದೆ, ರಾಜ್ಯದ ರೈತರ ಹಿತವನ್ನು ಕಾಪಾಡಬೇಕು ಎಂದರು.
ಈ ಸಂದರ್ಭದಲ್ಲಿ ಗುರುರಾಜ ವಡ್ಡರ, ಶಿವಪ್ಪ ಬೇವಿನಮಟ್ಟಿ, ಶ್ರೀಶೈಲ ಗುಳಬಾಳಮಠ, ರಾಮಚಂದ್ರಪ್ಪ ವಡ್ಡರ, ಲಕ್ಷ್ಮಣ ಖರಗದಾರಿ, ಪ್ರಶಾಂತ ಮನಗೂಳಿ, ಹರೀಶ ಮ್ಯಾಗೇರಿ, ಕೆ.ಎಂ. ಬಿರಾದಾರ, ವಿಠ್ಠಲ ಬಂಡಿವಡ್ಡರ ಇತರರು ಇದ್ದರು.
ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.