ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸ್ಪಷ್ಠನೆ
ವಿಜಯಪುರ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಿಗೆ ರಾಷ್ಟ್ರ, ಅಂತರ ರಾಷ್ಟೀಯ ಮಟ್ಟದ
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರೋಟರಿ ಕ್ಲಬ್-ಮಾನ್ಯುಮೆಂಟಲ್ ಹೆರಿಟೇಜ್ ಸಿಟಿ, ಆರ್.ಕೆ.ಎಂ ಆಯರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ಮತ್ತು ಪಿಜಿ ರಿಸರ್ಚ ಸೆಂಟರ್ ಇವರ ಸಹಯೋಗದಲ್ಲಿ ಬುಧವಾರ ನಗರದ ಬೇಗಂ ತಲಾಬ್ ಕೆರೆ ಆವರಣದಲ್ಲಿ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಘೊಷವಾಕ್ಯದೊಂದಿಗೆ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೊಂದಿಗೆ ಸ್ಮಾರಕಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಐತಿಹಾಸಿಕ ತಾಣಗಳ ರಕ್ಷಣೆ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸಿ ತಾಣಗಳ ಮಾಹಿತಿ ಒದಗಿಸಲು ಪ್ರತಿವಾರ ಹೆರಿಟೇಜ್ ವಾಕ್, ಸ್ಮಾರಕಗಳ ಸಂಪೂರ್ಣ ಮಾಹಿತಿ ಒದಗಿಸುವ ಆರ್ಟ್ ಗ್ಯಾಲರಿ ನಿರ್ಮಾಣ, ನಗರದ ಆನಂದ ಮಹಲ್‌ನಲ್ಲಿ ಮ್ಯೂಸಿಯಂ-ಕಂ-ಗ್ಯಾಲರಿ, ವಿವಿಧ ಸ್ಮಾರಕಗಳ ಪುನರುಜ್ಜೀವನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ವಿಜಯಪುರ ನಗರದಲ್ಲಿರುವ ಪುರಾತನ ಬಾವಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಬಾವಡಿಗಳನ್ನು ಸ್ವಚ್ಛಗೊಳಿಸಲಾಗುವುದು. ಸ್ವಯಂ ಪ್ರೇರಣೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಹ ಭಾಗವಹಿಸಿ ಕೈ ಜೋಡಿಸಬೇಕು. ಅದರಂತೆ ಬೇಗಂ ತಲಾಬ್ ಕೆಬಿಜೆಎನ್‌ಎಲ್ ವತಿಯಿಂದ ಅಭಿವೃದ್ದಿ ಪಡಿಸಲಾಗಿದ್ದು, ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಕುರಿತಾಗಿ ವಿಕ್ರಂ ಬೆಳಂಕಿ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ,ಇಗ್ನೋ ಪ್ರಾದೇಶಿಕ ನಿರ್ದೇಶಕರಾದ ವರದರಾಜನ್,ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾದ ವಿ.ಸಿ ವಸ್ತ್ರದ, ಕ್ರೀಡಾಧಿಕಾರಿ ಎಸ್ ಜಿ.ಲೋಣಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ವಾರ್ತಾ ಇಲಾಖೆಯ ಸಹಾಯ ನಿರ್ದೇಶಕ ಅಮರೇಶ ದೊಡಮನಿ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಪ್ರಸನ್ನ ವಿಜಯಕುಮಾರ್,ಆರ್ ಕೆ ಎಂ ಕಾಲೇಜಿನ ಶಂಭುಲಿಂಗ ಕರ್ಪೂರಮಠ, ಪ್ರವಾಸೋದ್ಯಮ ಇಲಾಖೆ ಅನಿಲಕುಮಾರ್ ತುಕಾರಾಂ ಪವಾರ್, ಜಗದೇವ ಗುಣಕಿ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಮಮದಾಪೂರ ಕಾರ್ಯಕ್ರಮ ನಿರ್ವಹಿಸಿದರು.