ಬರಿದಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ I ಮಹಾರಾಷ್ಟ್ರದ ಕೊಯ್ನಾದಿಂದ ಹರಿಯದ ನೀರು
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್.ಎಮ್.ಇಟ್ಟಿ ಜಮಖಂಡಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವ ಬಗ್ಗೆ ಎರಡು ರಾಜ್ಯಗಳ ಸರ್ಕಾರದ ನಡುವೆ ಮಾತುಕತೆ ನಡೆದಿಲ್ಲ. ಹಿಪ್ಪರಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಮತ್ತೊಂದೆಡೆ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಸಂಪೂರ್ಣ ಖಾಲಿಯಾಗಿ ಜಮಖಂಡಿ ತಾಲೂಕಿನ ಕೃಷ್ಣಾ ತೀರದಲ್ಲಿ ಬಾಯಾರಿಕೆ ದಾಹ ಹೆಚ್ಚಾಗುತ್ತಿದೆ.
ರೈತರ ಬ್ಯಾರೇಜ್ ಎಂದೇ ಖ್ಯಾತಿ ಪಡೆದಿರುವ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಂದು ವಾರದ ಹಿಂದೆಯೇ ಸಂಪೂರ್ಣ ಖಾಲಿ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ರೈತರೇ ಸೇರಿಕೊಂಡು ವಂತಿಗೆ ಕೂಡಿಸಿ ಕೃಷ್ಣಾ ನದಿ ನೀರು ಎತ್ತಿ ಬ್ಯಾರೇಜ್ ತುಂಬಿಸಿಕೊಳ್ಳುತ್ತಿದ್ದರು.
ಖರ್ಚು ಜಾಸ್ತಿ ಆಗುತ್ತದೆ ಎಂದು ಪ್ರಸಕ್ತ ವರ್ಷ ಗಲಗಲಿ ಬ್ಯಾರೇಜ್ ತುಂಬಿಸಲು ಪ್ಯಾನ್ ಮಾಡಲಾಗಿತ್ತು. ಅದಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಅನುದಾನ ಕೊಡಲು ಸಚಿವರು ಒಪ್ಪಿಗೆ ನೀಡಿದ್ದರಂತೆ. ಆದರೆ, ಕೆಲ ತಾಂತ್ರಿಕ ಕಾರಣದಿಂದಾಗಿ ಗಲಗಲಿ ಬ್ಯಾರೇಜ್ ತುಂಬಿಸಲು ಆಗಲಿಲ್ಲ. ಪರಿಣಾಮ ಚಿಕ್ಕಪಡಸಲಗಿ ಬ್ಯಾರೇಜ್ ಇದೀಗ ಸಂಪೂರ್ಣ ಖಾಲಿ ಆಗಿದೆ.
ಜಮಖಂಡಿ ಹಾಗೂ ಅಥಣಿ ತಾಲೂಕಿನ 32 ಗ್ರಾಮಗಳು ಕುಡಿಯುವ ನೀರಿಗೆ ಚಿಕ್ಕಪಡಸಲಗಿ ಬ್ಯಾರೇಜ್ ಅವಲಂಬಿಸಿವೆ. 60 ಸಾವಿರ ಎಕರೆ ಪ್ರದೇಶದ ಬೆಳೆಗಳಿಗೆ ನೀರು ದೊರೆಯುತ್ತದೆ. ಈಗ ಬೇಸಿಗೆ ಬಿರುಬಿಸಿಲಿಗೆ ನದಿ ಸಂಪೂರ್ಣ ಖಾಲಿ ಆಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಕಬ್ಬು ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳಿಗೆ ನೀರಿಲ್ಲದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ವಿಳಂಬ ಮಾಡದೆ ತಮ್ಮ ಜವಾಬ್ದಾರಿ ಮೆರೆಯಬೇಕಿದೆ.

ಮಹಾರಾಷ್ಟ್ರದಿಂದ ನೀರು ಬರಬೇಕು
ಬೇಸಿಗೆಯಲ್ಲಿ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು, ದುಡ್ಡು ಕೊಟ್ಟು ಕೊಯ್ತಾದಿಂದ ನೀರು ಬಿಡಿಸುತ್ತದೆ. ಆದರೆ, ಪ್ರಸಕ್ತ ವರ್ಷ ಆ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಸಾಗಿಲ್ಲ. ಮಹಾರಾಷ್ಟ್ರ ಸರ್ಕಾರ ಬೇಸಿಗೆಯಲ್ಲಿ ದುಡ್ಡು ಪಡೆದು ನೀರು ಬಿಡುವುದಕ್ಕಿಂತ ಈಗ ತಾವು ಹರಿಸುವ ನೀರನ್ನು ಮಳೆಗಾಲದಲ್ಲಿ ಕೃಷ್ಣಾ ನದಿಯಿಂದ ಮಹಾರಾಷ್ಟ್ರದ ಜತ್ತ ಭಾಗಕ್ಕೆ ನೀರು ಹರಿಸಬೇಕು ಎನ್ನುವ ಬೇಡಿಕೆ ಇಡುತ್ತ ಬಂದಿದೆ. ಈ ಬಗ್ಗೆ ಎರಡು ಸರ್ಕಾರಗಳ ನಡುವೆ ಒಪ್ಪಂದ ಆಗಬೇಕು. ಅದು ಸರಾಗವಾಗಿ ನಡೆದರೆ ಬೇಸಿಗೆಯಲ್ಲಿ ಕೃಷ್ಣಾ ತೀರದಲ್ಲಿ ನೀರಿನ ದಾಹ ನೀಗಿಸಬಹುದು ಎನ್ನುತ್ತಾರೆ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ.
ಸದ್ಯ ಮಹಾರಾಷ್ಟ್ರದಿಂದ 2 ರಿಂದ 3 ಟಿಎಂಸಿ ನೀರು ಬಿಡಿಸಿದರೆ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗಲ್ಲ. ಸದ್ಯಕ್ಕೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಹಿಪ್ಪರಗಿಯಿಂದ ನೀರು ಹರಿಸುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗ ನೀರು ಬಿಡಬಹುದು. ಸದ್ಯ ಅಷ್ಟು ನೀರು ಬಿಟ್ಟರೆ ಸ್ವಲ್ಪ ದಿನಗಳ ಕಾಲ ಸಮಸ್ಯೆ ದೂರವಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ
ಹೇಳುತ್ತಾರೆ.

