ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದಲ್ಲಿ ಹರಿಯುವ ಭೀಮಾನದಿಗೆ ಬರಬೇಕಾದ ನೀರಿನ ಪಾಲು ಕೇಳುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ.
ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯ ಜೀವನಾಢಿಯಾಗಿರುವ ಭೀಮಾ ನದಿಯು ಬೇಸಿಗೆಯಲ್ಲಿ ನೀರಿಲ್ಲದೆ ಸಂಪೂರ್ಣ ಒಣಗಿ ಹೋದರೂ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಬರಬೇಕಾದ ನೀರಿನ ಪಾಲು ಕೇಳುವಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ್ದರಿಂದ ಜನ ಜಾನುವಾರು ಕುಡಿಯುವ ನೀರಿನ ತೊಂದರೆಯಾಗುತ್ತಿದೆ.
ಭೀಮಾ ನದಿ ಮಹಾರಾಷ್ಟ್ರದ ಭೀಮಾಶಂಕರಿಯಲ್ಲಿ ಹುಟ್ಟಿ ಒಟ್ಟು ೭೮೬ ಕಿ.ಮಿ ಹರಿಯುವ ಈ ನದಿ ಕರ್ನಾಟಕದಲ್ಲಿ ೨೮೯ ಕಿ.ಮಿ ಹರಿಯುತ್ತದೆ. ನದಿಯ ಎರಡು ದಡದಲ್ಲಿ ಒಟ್ಟು ೧೬೪ ಹಳ್ಳಿಗಳ ಲಕ್ಷಾಂತರ ಜನ ಮತ್ತು ಜಾನುವಾರು ಭೀಮಾ ನದಿಯ ನೀರನ್ನೇ ನಂಬಿಕೊಂಡು ಬದುಕುತ್ತಿದ್ದಾರೆ.
ಬಚಾವತ ಆಯೋಗದ ತೀರ್ಪಿನ ಪ್ರಕಾರ ೧೯೭೬ ರಲ್ಲಿ ನೀಡಿದ ತೀರ್ಪಿನಂತೆ ಮಹಾರಾಷ್ಟ್ರ ೯೫ ಟಿ ಎಂ ಸಿ ಮತ್ತು ಕರ್ನಾಟಕ ೧೫ ಟಿ.ಎಂಸಿ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಮಹಾರಾಷ್ಟ್ರ ಸರಕಾರ ಒಮ್ಮೆಯೂ ೧೫ ಟಿ.ಎಂ.ಸಿ ನೀರು ಹರಿಸಿಲ್ಲ. ನಮ್ಮ ಪಾಲಿನ ನೀರು ನಮಗೆ ಕೊಡಿಸುವ ಪ್ರಾಮಾಣಿಕ ಪ್ರಯತ್ನ ರಾಜ್ಯ ಸರಕಾರ ಮಾಡಬೇಕಾಗಿತ್ತು. ಅದು ಸಹ ನಡೆದಿಲ್ಲ.
ಬೇಸಿಗೆಯಲ್ಲಿ ಭೀಮಾ ನದಿ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಒಣಗಿರುತ್ತದೆ. ಆಗ ನೀರಿಗಾಗಿ ಪ್ರತಿವರ್ಷವೂ ಮಹಾರಾಷ್ಟçದ ಮುಖ್ಯಮಂತ್ರಿ ಮತ್ತು ನೀರಾವರಿ ಪ್ರಧಾನ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿ ನೀರು ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಅದು ಮಹಾರಾಷ್ಟ್ರದವರು ಬಿಡುವದು ಎರಡು ಟಿ.ಎಂ.ಸಿ ನೀರು ಮಾತ್ರ..
ಅದಲ್ಲದೆ ಮಹಾರಾಷ್ಟ್ರ ಸರಕಾರ ಉಜನಿ ಆಣೆಕಟ್ಟಿನಲ್ಲಿ ಶೇಕಡಾ ೯೦ ಪ್ರಮಾಣ ದಷ್ಟು ನೀರು ಸಂಗ್ರಹಿಸುತ್ತದೆ. ಮಳೆಯಾದಾಗ ಆ ನೀರನ್ನು ನೇರವಾಗಿ ಕರ್ನಾಟಕದ ನದಿ ಪಾತ್ರಕ್ಕೆ ಬಿಡುವ ಕುತಂತ್ರ ನೀತಿ ಅನುಸರಿಸುತ್ತದೆ. ಹೀಗಾಗಿ ನಮ್ಮಲ್ಲಿ ಮಹಾಪೂರ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಒಮ್ಮೊಮ್ಮೆ ಉಜನಿ, ವೀರ ಭಟಕರ ಮತ್ತು ಸೀನಾ ನದಿಗಳ ನೀರನ್ನು ನೇರವಾಗಿ ಕರ್ನಾಟಕದ ಭೀಮಾ ನದಿ ಪಾತ್ರಕ್ಕೆ ಒಮ್ಮೆಲೆ ೨೫೦ ಕ್ಯೂಸೆಕ್ ಕ್ಕೂ ಹೆಚ್ಚು ಬಿಟ್ಟು ಮಹಾಪುರ ಪರಿಸ್ಥಿತಿ ನಿರ್ಮಿಸುತ್ತದೆ. ಒಮ್ಮೊಮ್ಮೆ ನಮ್ಮಲ್ಲಿ ಮಳೆ ಇಲ್ಲದಿದ್ದರೂ ನಾವು ಮಹಾಪುರವನ್ನು ಸಾಕಷ್ಟು ಬಾರಿ ಎದುರಿಸಿದ್ದೇವೆ.
ಕರ್ನಾಟಕದಲ್ಲಿ ಇಂಡಿ ಮತ್ತು ಚಡಚಣ ತಾಲೂಕಿನಲ್ಲಿ ನಾಲ್ಕು ಮತ್ತು ಮಹಾರಾಷ್ಟçದವರು ನಾಲ್ಕು ಬಾಂದಾರ ನಿರ್ಮಿಸಿದ್ದಾರೆ. ಆದರೆ ಬಾಂದಾರ ಎತ್ತರ ಅತೀ ಕಡಿಮೆ ಇದ್ದು ಎತ್ತರ ವನ್ನು ಹೆಚ್ಚಿಸುವ ಕಾರ್ಯ ಆಗಬೇಕಾಗಿದೆ. ಅದಲ್ಲದೆ ಕರ್ನಾಟಕದ ಭಾಗದಲ್ಲಿ ಭೀಮಾ ನದಿಗೆ ಆಣೆಕಟ್ಟು ನಿರ್ಮಾಣ ಮಾಡಿದರೆ ಮಹಾಪುರ ತಡೆಯುವ ಸಾಧ್ಯತೆ ಇದೆ ಎಂದು ನೀರಾವರಿ ತಜ್ಞರ ಅಭಿಪ್ರಾಯ.
ಈ ಕುರಿತು ಈ ಹಿಂದೆ ಶಾಸಕ ಬಸನಗೌಡ ಪಾಟೀಲ ನೇತೃತ್ವದಲ್ಲಿ ಭೀಮೆಯಿಂದ ಕೃಷ್ಣೆಯವರೆಗೆ ಪಾದಯಾತ್ರೆ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಈ ಕುರಿತು ನಡೆದ ಸಭೆಯಲ್ಲಿ ಸಿದ್ದೇಶ್ವರ ಶ್ರೀ ಜಿಲ್ಲೆಯ ಶಾಸಕರಾದ ಬಸನಗೌಡ ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ಒಂದಾಗಿ ಹೋರಾಡಿದರೆ ಈ ಭಾಗ ಅಮೇರಿಕಾದ ಕ್ಯಾಲಿಫೋರ್ನನಿಯಾ ಆಗುತ್ತದೆ ಎಂದು ಹೇಳಿದರು. ಆದರೆ ಆ ದಿಶೆಯಲ್ಲಿ ಕಾರ್ಯ ವಾಗಲಿಲ್ಲ. ಹಲವಾರು ಹೋರಾಟಗಳನ್ನು ರೈತರು ಮಾಡಿದ್ದಾರೆ. ಆದರೆ ಸದನದಲ್ಲಿ ಈ ಕುರಿತು ಒಮ್ಮೆಯೂ ಚರ್ಚೆಯಾಗಿಲ್ಲ.

“ಭೀಮಾ ನದಿ ನೀರನ್ನು ಬಳಸಿಕೊಳ್ಳಲು ಜಿಲ್ಲೆಯ ಶಾಸಕರ ಗಮನಕ್ಕೆ ತಂದು ಸದನದಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ.”
– ವಿಠ್ಠಲ ಕಟಕದೊಂಡ ಶಾಸಕರು, ನಾಗಠಾಣ ಮತಕ್ಷೇತ್ರ

“ತಾಲೂಕಿನ ನಮ್ಮ ಗ್ರಾಮ ಖ್ಯಾಡಗಿ ಮೇಲಿಂದ ಮೇಲೆ ಮಹಾಪುರಕ್ಕೆ ತುತ್ತಾಗಿರುವದರಿಂದ ನಾನು ಮತ್ತು ಗ್ರಾಮಸ್ಥರು ಪ್ರಯತ್ನಿಸಿ ಗ್ರಾಮಕ್ಕೆ ಮತ್ತು ದೇವಸ್ಥಾನಕ್ಕೆ ತಡೆಗೊಡೆ ನಿರ್ಮಿಸಿ ಮಹಾಪೂರ ಬರದ ಹಾಗೆ ಪ್ರಯತ್ನಿಸಿದ್ದೇವೆ.”
– ಬಸವರಾಜ ಸಾಹುಕಾರ ಕುಮಸಗಿ
ರಾಜಕೀಯ ಧುರೀಣರು & ಸಾಮಾಜಿಕ ಕಾರ್ಯಕರ್ತರು

