ಮುದ್ದೇಬಿಹಾಳ: ತಾಲೂಕು ಬರಗಾಲ ಪೀಡಿತವೆಂದು ಘೋಷಣೆಯಾಗಿದ್ದು, ನರೇಗಾ ಮಾನವ ದಿನಗಳು ೧೦೦ ರಿಂದ ೧೫೦ ಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ. ದುಡಿಮೆ ಅರಸಿ ವಲಸೆ ಹೋಗದೆ ನಿಮ್ಮಲ್ಲೇ ಕೆಲಸ ಮಾಡಿ ಆರ್ಥಿಕ ಸಾವಲಂಬಿಗಳಾಗಿ ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾ.ಉ.) ಖುಬಾಸಿಂಗ್ ಜಾಧವ್ ಹೇಳಿದರು.
ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ತಾಲೂಕು ನರೇಗಾ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದಡಿ ನಡೆದ ವಿಶೇಷ ರೋಜಗಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರೀಕ್ಷಿತ ಮಳೆಯಾಗದೆ ರೈತರ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿವೆ. ಕೃಷಿ ಕೂಲಿ ಕಾರ್ಮಿಕರು ದುಡಿಮೆ ಇಲ್ಲದೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಬರಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ ನೀಡಿ ಕುಟುಂಬ ನಿರ್ವಹಣೆಗೆ ಆರ್ಥಿಕ ಸಹಕಾರ ಮಾಡಲು ನರೇಗಾ ಯೋಜನೆ ಸನ್ನದ್ಧವಾಗಿದೆ. ಮಾನವ ದಿನಗಳು ೧೫೦ಕ್ಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಧೀಕೃತ ಘೋಷಣೆಯೊಂದೇ ಬಾಕಿ ಇದೆ. ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗುವುದು. ಅದ್ದರಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಎಲ್ಲೂ ವಲಸೆ ಹೋಗದೆ ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮಡಿಕೇಶ್ವರ ಗ್ರಾಮದ ೪೫ಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿದರು. ನಂತರ ನರೇಗಾ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ವ್ಯಾಪಾಕ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವನಗೌಡ ಸಾಸನೂರ, ಉಪಾಧ್ಯಕ್ಷೆ ಶ್ರೀಮತಿ ಗೀತಾ ಮುತ್ತಣ್ಣ ಹೊಸಮನಿ, ತಾಂತ್ರಿಕ ಸಂಯೋಜಕ ಶಂಕರಗೌಡ ಯಾಳವಾರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಿ.ಎಸ್.ಹಿರೇಕುರುಬರ ಹಾಗೂ ಗ್ರಾ.ಪಂ.ಸಿಬ್ಬಂದಿ ಇದ್ದರು.
Related Posts
Add A Comment