ಚರ್ಚೆ ಸಮಯದಲ್ಲಿ ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ‘ಜಾತಿ ಗಣತಿ’ ಎಂದು ಜನಪ್ರಿಯವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಬಗ್ಗೆ ಚರ್ಚಿಸಲು ಗುರುವಾರ ಸಂಜೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವರದಿಗೆ ಯಾರೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಚರ್ಚೆಯ ಸಮಯದಲ್ಲಿ ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
“ನಿನ್ನೆ, ಜಾತಿ ಗಣತಿ ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಯಿತು. ಚರ್ಚೆ ಅಪೂರ್ಣವಾಗಿದೆ ಮತ್ತು ಅದನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಯಾರೂ ಅದನ್ನು ವಿರೋಧಿಸಿಲ್ಲ” ಎಂದು ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ಕೆಲವು ಸಚಿವರು ಪರಸ್ಪರ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದರು ಎಂಬ ಮಾಧ್ಯಮ ವರದಿ ಸುಳ್ಳು” ಎಂದು ಹೇಳಿದರು.
ಇನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಸಂಪುಟ ಸಭೆಯಲ್ಲಿ ಯಾವುದೇ ಆಕ್ರಮಣಕಾರಿ ವಾದಗಳನ್ನು ತಳ್ಳಿಹಾಕಿದ್ದಾರೆ.
“ನಾವು ನಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ ಅಷ್ಟೇ. ಏರು ಧ್ವನಿ ಅಥವಾ ವಾಗ್ವಾದ, ಅಂತಹದ್ದೇನೂ ನಡೆದಿಲ್ಲ. ಸಲಹೆಗಳನ್ನು ನೀಡಲಾಯಿತು. ಅದನ್ನು ಹೊರತುಪಡಿಸಿ ಯಾವುದೇ ನಿರ್ಧರ ಕೈಗೊಂಡಿಲ್ಲ” ಎಂದು ಅವರು ಹೇಳಿದ್ದಾರೆ.

ತಪ್ಪು ಹೆಜ್ಜೆ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ :ಜಾರಕಿಹೊಳಿ
ಬೆಂಗಳೂರು: ವಿವಾದಿತ ಜಾತಿ ಗಣತಿ ವರದಿ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧತೆ ಕಡಿಮೆ ಮತ್ತು ಹಲವು ಸಂಕೀರ್ಣತೆಗಳಿಂದಾಗಿ ನಿರ್ಧಾರ ಕೈಗೊಳ್ಳಲು ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದ್ದಾರೆ.
ಜಾತಿ ಗಣತಿ ವರದಿಯ ಕುರಿತು ವಿವಿಧ ಜಾತಿಗಳು ಎತ್ತಿರುವ ಕಳವಳಗಳನ್ನು ಪರಿಹರಿಸುವಲ್ಲಿ ಯಾವುದೇ ತಪ್ಪು ಹೆಜ್ಜೆ ಇಟ್ಟರೆ ಭವಿಷ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಚಿವರು ಎಚ್ಚರಿಸಿದ್ದಾರೆ.
ಜಾತಿ ಜನಗಣತಿ ವರದಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಸಚಿವ ಸಂಪುಟ ಸಭೆಯು ಸರ್ಕಾರದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮೇ 2 ರಂದು ಮತ್ತೆ ಈ ವಿಷಯವನ್ನು ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲು ನಿರ್ಧರಿಸಲಾಗಿದೆ.
“ಇದು ಇಂದು ಅಥವಾ ನಾಳೆ ಆಗುವ ವಿಷಯವಲ್ಲ, ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ನಾಳೆ ವರದಿ ಜಾರಿ ಆಗುತ್ತೆ ಅಂತ ನಿರೀಕ್ಷಿಸಬೇಡಿ, ಅದಕ್ಕೆ ಒಂದು ವರ್ಷ ತೆಗೆದುಕೊಳ್ಳಬಹುದು. ಏಕೆಂದರೆ ಹಲವು ಸಮಸ್ಯೆಗಳಿವೆ ಮತ್ತು ಅವು ಜಟಿಲವಾಗಿವೆ. ಎಲ್ಲರನ್ನೂ ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದರೆ, ಅನೇಕ ಸಭೆಗಳನ್ನು ನಡೆಸಬೇಕಾಗುತ್ತದೆ. ಸರ್ಕಾರ ರಾಜಿ ಮಾಡಿಕೊಳ್ಳುವ ಕ್ರಮದಲ್ಲಿರಬೇಕು. ಏಕೆಂದರೆ ಇದನ್ನು ಇದ್ದಕ್ಕಿದ್ದಂತೆ ಜಾರಿ ಮಾಡಲು ಸಾಧ್ಯವಿಲ್ಲ” ಎಂದು ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ವರದಿಯು ಬಹುತೇಕ 10 ವರ್ಷ ಹಳೆಯದಾಗಿದೆ ಮತ್ತು ಫೆಬ್ರವರಿ 2024 ರಲ್ಲಿ ಸಲ್ಲಿಕೆಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಸಂಪುಟ ಅದನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದರು.
“ಈ ಬಗ್ಗೆ ಯಾವುದೇ ತುರ್ತು ನಿರ್ಧಾರ ಕೈಗೊಳ್ಳುವ ಅಗತ್ಯ ಇಲ್ಲ… ಚರ್ಚೆಗಳು ಒಂದು ವರ್ಷ ನಡೆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವಾನುಮತದಿಂದ ಮತ್ತು ಎಲ್ಲರ ಸಹಕಾರದೊಂದಿಗೆ ನಾವು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ” ಎಂದರು.
ಮೂಲಗಳ ಪ್ರಕಾರ, ಕೆಲವು ಸಚಿವರು ಸಂಪುಟದಲ್ಲಿ ಸಮೀಕ್ಷಾ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಹಲವರು ವರದಿ “ಅವೈಜ್ಞಾನಿಕ ಮತ್ತು ಹಳೆಯದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.