ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆಯುತ್ತಿರುವ ಶಿರಾಡೋಣ ಲಿಂಗಸೂರು ಕಾಮಗಾರಿಯ ಭಾಗವಾಗಿರುವ ಡಿವೈಡರ್ ಕಾಮಗಾರಿಯು ಅತ್ಯಂತ ಕಳಪೆಯಾಗಿದ್ದು, ಕಾಮಗಾರಿಯ ಗುಣಮಟ್ಟವನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಂದಾಜು ಪತ್ರಿಕೆಯಲ್ಲಿರುವಂತೆ ಸರಿಪಡಿಸುವವರೆಗೆ ಈ ಕಾಮಗಾರಿಯ ಬಿಲ್ ನೀಡಬಾರದು ಎಂದು ಯುವ ಮುಖಂಡ ವಿರೇಶ ಆಲಕೊಪ್ಪರ ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.
ಪತ್ರದ ಪ್ರತಿಯನ್ನು ಪತ್ರಿಕೆಗೆ ನೀಡಿ ಮಾತನಾಡಿದ ಅವರು ಕಾಮಗಾರಿ ನಡೆಯುವ ಸ್ಥಳದಲ್ಲೇ ಗಮನಿಸುತ್ತಿದ್ದ ನನ್ನ ಕಣ್ಣ ಮುಂದೆಯೇ ಕಾಮಗಾರಿಗೆ ಬಳಸಬೇಕಾದ ಸಿಮೆಂಟ್ ಬ್ಯಾಗ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಯಿತು. ಈ ಬಗ್ಗೆ ಕಾರ್ಮಿಕರನ್ನು ಪ್ರಶ್ನಿಸಲಾಗಿ ನಮಗೆ ಇಷ್ಟೇ ಪ್ರಮಾಣದಲ್ಲಿ ಬಳಸುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನನ್ನಲ್ಲಿ ವಿಡಿಯೋ ದಾಖಲೆಗಳು ಇವೆ. ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಸುವಾಗ ಯಾರೊಬ್ಬ ಅಧಿಕಾರಿ ಸ್ಥಳದಲಲಿ ಇರಲಿಲ್ಲ. ಈ ಬಗ್ಗೆ ಪಿಡಬ್ಲೂಡಿ ಅಧಿಕಾರಿ ಶಿವನಗುತ್ತಿ ಅವರಿಗೂ ಸಹ ಫೋನ್ ಮೂಲಕ ದೂರಿದ್ದೇನೆ. ತನಿಖೆ ನಡೆಸದೇ ಬಿಲ್ ನೀಡಿದಲ್ಲಿ ಲೋಕಾಯುಕ್ತಕ್ಕೆ ದೂರಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇನೆ ಎಂದರು.