ವಿಜಯಪುರದಲ್ಲಿ ಗುಂಡೇಟಿಗೆ ರೌಡಿಶೀಟರ್ ಹತ್ಯೆ ಪ್ರಕರಣ
ವಿಜಯಪುರ: ನಗರದಲ್ಲಿ ನಡೆದಿರುವ ಕೊಲೆಯ ಹಿಂದಿನ ಸತ್ಯಾಸತ್ಯತೆ ಹೊರಗೆ ಬರಬೇಕೆಂದರೆ, ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರ್ಭೀತಿಯಿಂದ ಓಡಾಡುತ್ತಿರುವ ಗುಂಡಾಗಳನ್ನು ಹದ್ದು ಬಸ್ತಿನಲ್ಲಿಟ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು, ಈಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದೆವು. ಇಂದು
(ಶನಿವಾರ) ಹಾಡು ಹಗಲೇ ಗುಂಡಾಗಳು ಓರ್ವ ವ್ಯಕ್ತಿಯ ಮೇಲೆ ಗುಂಡುಗಳನ್ನು ಹಾರಿಸಿ, ಭೀಕರ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ.
ಕೊಲೆಯಾದ ವ್ಯಕ್ತಿ ಇತ್ತೀಚಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರ ವಿರುದ್ಧ ನಿಲ್ಲಿಸಿ, ತನ್ನ ಧರ್ಮ ಪತ್ನಿಯನ್ನು ಗೆಲ್ಲಿಸಿದ್ದ? ಇವನ ಆರು ತಿಂಗಳ ಕಾಲ್ ರೆಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, ಆಳವಾಗಿ ತನಿಖೆ ಮಾಡಿದರೆ ಸತ್ಯ ಹೊರ ಬೀಳಲಿದೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಕೊಲೆ ನಡೆದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮತದಾನದ ಮೇಲೆ ಕೂಡ ಪರಿಣಾಮ ಬೀರಲಿದೆ. ಹೀಗಾಗಿ ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು, ಗೂಂಡಾ ಆಕ್ಟದಲ್ಲಿರುವ ಪ್ರತಿಯೊಬ್ಬರನ್ನು ಚುನಾವಣೆ ಪೂರ್ಣಗೊಳ್ಳುವವರೆಗೆ ವಶಕ್ಕೆ ಪಡೆಯಬೇಕು. ಹೆಚ್ಚಿನ ಪೊಲೀಸ್ ಬಂದೋಬಸ್ತ್, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಪಡೆ ನಿಯೋಜಿಸಬೇಕು.
ಹಿಂದೂ ಫೈಯರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳರ ಸ್ಪರ್ಧೆಯಿಂದ ವಿಜಯಪುರ ನಗರ ರಾಜ್ಯದ ಗಮನ ಸೆಳೆದಿದ್ದು , ಈಗಾಗಲೇ ವಿಜಯಪುರ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಚುನಾವಣೆ ಸಂದರ್ಭ ಬೇರೆ. ಇಂತಹ ಸಂದರ್ಭದಲ್ಲಿ ಗುಂಡಾಗಳು ಹಾಡು ಹಗಲೇ ಕೊಲೆ ಮಾಡುತ್ತಾರೆ ಎಂದರೆ ಏನು ಅರ್ಥ? ಇವರಿಗೆ ಯಾರ ಭಯವಿಲ್ಲವೇ? ಅಥವಾ ಇವರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ?
ಸರಕಾರ ಹಾಗೂ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿ, ಸೂಕ್ತ ತನಿಖೆ ಮಾಡಿ ಯಾವುದೇ ಒತ್ತಡಕ್ಕೆ ಮಣಿಯದೆ ರಾಜ್ಯದ ಜನತೆಯ ಮುಂದೆ ಕೊಲೆಗೈದ ಅಪರಾಧಿಗಳು ಹಾಗೂ ಅವರ ಬೆನ್ನಿಗೆ ನಿಂತವರು ಯಾರು ಎಂಬುದನ್ನು ಬಹಿರಂಗಪಡಿಸಬೇಕೇಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ