ಶುದ್ಧ ನೀರಿನ ಘಟಕ-ವೈದ್ಯಾಧಿಕಾರಿಗಳ ರಿಕ್ರಿಯೇಷನ್-ರೇಡಿಯಾಲಾಜಿ ಘಟಕ ಮೆಮೋಗ್ರಾಫಿ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಆರೋಗ್ಯವೂ ಅತಿಮುಖ್ಯವಾಗಿದೆ. ಆರೋಗ್ಯವೇ ಭಾಗ್ಯ ಎಂಬಂತೆ ವಿಜಯಪುರ ಜಿಲ್ಲಾಸ್ಪತ್ರೆಯು ಉತ್ಕಷ್ಠವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಹೊರರೋಗಿ, ಒಳರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಇಂಡಿಯನ್ ಬ್ಯಾಂಕ್ ವತಿಯಿಂದ ಒಳಾವರಣದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ ಹಾಗೂ ವೈದ್ಯಾಧಿಕಾರಿಗಳ ರಿಕ್ರೇಷನ್ ಹಾಗೂ ರೇಡಿಯೋಲಾಜಿ ಘಟಕದಲ್ಲಿ ಮೆಮೋಗ್ರಾಫಿ ಉದ್ಘಾಟನೆ, ಆರೋಗ್ಯ ರಕ್ಷಾ ಸಮಿತಿ ಸಭೆ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ ಆರೋಗ್ಯ ಸುಧಾರಣೆಯಾಗಿದೆ. ರೋಗಿಗಳ ಸಹಾಯಕ್ಕೆಂದು ರೋಗಿಗಳೊಂದಿಗೆ ಬರುವವರಿಗೆ ಉಳಿದುಕೊಳ್ಳಲು ಎರಡು ಕೋಟಿ ರೂ. ವೆಚ್ಚದ ಡಾರ್ಮೆಟರಿ ಕಾಮಗಾರಿಗೆ ಭೂಮಿಪೂಜೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯಲ್ಲಿ ಮಿಲ್ಕ ಬ್ಯಾಂಕ್ ಘಟಕ ಆರಂಭಿಸಲಾಗುತ್ತಿದೆ. ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಪವರ್ ಗ್ರಿಡ್ ಸಂಸ್ಥೆ ಸಹಾಯಕ್ಕೆ ಮುಂದಾಗಿದ್ದು, ವಿವಿಧ ಅನುದಾನವನ್ನು ಬಳಸಿಕೊಂಡು ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಅವರ ಹೇಳಿದರು.
ಜಿಲ್ಲಾಸ್ಪತ್ರೆಯ ಉತ್ತಮ ಕಾರ್ಯನಿರ್ವಹಣೆಗಾ ಸರ್ಕಾರದಿಂದ ಪ್ರಶಸ್ತಿ ದೊರೆತಿದೆ. ನಿಮ್ಮ ಪ್ರತಿನಿಧಿಯಾಗಿದೆ ಪ್ರಶಸ್ತಿ ತೆಗೆದುಕೊಂಡು ಬಂದಿದ್ದೇನೆ. ಇದರಿಂದ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ. ಯಾವುದೇ ದೂರು-ಸಮಸ್ಯೆಗಳು ಬಂದಾಗ ನಿವಾರಿಸಿಕೊಂಡು ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಪ್ರತಿನಿಧಿಗಳ ಸಹಕಾರವಿದ್ದು, ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಇನ್ನಷ್ಟು ಹೆಚ್ಚಿನ ಕ್ರಮ ವಹಿಸಲಾಗುವುದು. ಆರೋಗ್ಯ ರಕ್ಷಾ ಸಮಿತಿಯವರು ಆಸ್ಪತ್ರೆಗೆ ಸಂಬಂಧಿಸಿದ ಉತ್ತಮ ಕಾರ್ಯನಿರ್ವಹಣೆಗೆ ಸಲಹೆ ಸೂಚನೆ ನೀಡಬೇಕು ಎಂದು ಅವರು ಹೇಳಿದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೋಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಉತ್ತಮ ಚಿಕಿತ್ಸೆಗೆ ಬೇಕಾಗುವ ಎಲ್ಲ ಅವಶ್ಯಕ ಯಂತ್ರೋಪಕರಣಗಳ ವ್ಯವಸ್ಥೆ ಲಭ್ಯವಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಹೆರಿಗೆ ಸಮಯದಲ್ಲಿ ಉತ್ತಮಬೆಡ್ ಅಳವಡಿಸಿದೆ. ಟುಡಿ ಎಕೋ ವ್ಯವಸ್ಥೆ, ವಿವಿಧ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ಸಂದರ್ಭ ಘಟಕದಲ್ಲಿ ಅನಿರತವಾಗಿ ಸೇವೆ ನೀಡಲಾಗುತ್ತಿದೆ. ಆರ್ಥೋಪೆಡಿಕ್ ಸರ್ಜರಿ ವ್ಯವಸ್ಥೆ, ಒಟ್ಟಾರೆ ಎಲ್ಲಾ ವಿಭಾಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯ ಸ್ವಚ್ಛತೆ ಹಾಗೂ ಭದ್ರತೆಗೆ ಅಗತ್ಯ ಕ್ರಮ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಗೆ ಕಂಪೌಂಡ್, ಬೀದಿ ದೀಪ ಅಳವಡಿಸುವಂತೆ ಅವರು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ, ಪಾಲಿಕೆ ಸದಸ್ಯರಾದ ಆರತಿ ಶಹಾಪೂರ, ಆರೋಗ್ಯ ರಕ್ಷಾ ಸಮಿತಿ ಸಭೆಯ ಸದಸ್ಯರಾದ ಇಲಿಯಾಸ ಸಿದ್ದಿಕಿ ಹಾಗೂ ಮುನ್ನಾ, ಸಂತೋಷ ಶಹಾಪುರ, ನಜೀರ ತಾಳಿಕೋಟಿ, ಅಬೂಬಕರ್ ಕಂಬಾಗಿ, ಶ್ರೀಕಾಂತ, ಸವಿತಾ ಹಾಗೂ ಲಕ್ಷ್ಮಿ, ಜಿಲ್ಲಾಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ, ಚಂದು ರಾಠೋಡ ಇಂಡಿಯನ್ ಬ್ಯಾಂಕಿನ ಮ್ಯಾನೇಜರ್ ಹಜೇರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.