ಅಫಜಲಪುರ ಪುರಸಭೆಗೆ ಅಧ್ಯಕ್ಷರಾಗಿ ಸುಹಾಸಿನಿ, ಉಪಾಧ್ಯಕ್ಷರಾಗಿ ಶಿವಕುಮಾರ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಇಲ್ಲಿನ ಪುರಸಭೆ ಅಧ್ಯಕ್ಷತೆ, ಉಪಾಧ್ಯಕ್ಷ ಚುನಾವಣೆಯಲ್ಲಿ ಲೋಕಸಭೆ ಸದಸ್ಯರು ಹಾಗೂ ಶಾಸಕ ಮತ ಒಳಗೊಂಡು ಒಟ್ಟು ೨೫ ಮತಗಳಲ್ಲಿ ಶಾಸಕರ ಮತ ಸೇರಿ ಒಟ್ಟು ೨೪ ಮತ ಚಲಾಯಿಸಿದ್ದು ಕಾಂಗ್ರೆಸ್‌ನ ಸುಹಾಸಿನಿ ವಿರೇಶ್ ಖೇಳಗಿ ೧೯ ಮತಗಳು ಪಡೆಯುವ ಮೂಲಕ ಅಧ್ಯಕ್ಷೆಯಾದರೆ ಶಿವಕುಮಾರ ಪದಕಿ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಸಂಜೀವಕುಮಾರ ದಾಸರ್ ಘೋಷಣೆ ಮಾಡಿದರು.
ಪುರಸಭೆ ಅಧ್ಯಕ್ಷತೆಗೆ ಬಿಸಿಬಿ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶಿಲ್ಪಾ ಮಳೇಂದ್ರ ಡಾಂಗೆ ನಾಮಪತ್ರ ಸಲ್ಲಿಸಿ ೫ ಮತಗಳು ಪಡೆದರು. ಕಾಂಗ್ರೆಸ್ ಪಕ್ಷದ ಸುಹಾಸಿನಿ ವಿರೇಶ್ ಖೇಳಗಿ ಅವರು ನಾಮಪತ್ರ ಸಲ್ಲಿಸಿ ೧೯ ಮತಗಳು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶಿವಕುಮಾರ ಪದಕಿ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆಯಲ್ಲಿ ಶಾಸಕ ಎಂ.ವೈ.ಪಾಟೀಲ ಅವರು ಕೂಡಾ ಮತ ಚಲಾಯಿಸಿದರು. ಫಲಿತಾಂಶ ಘೋಷಣೆಯಾಗುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಎಂ.ವೈ.ಪಾಟೀಲ ಹಾಗೂ ಕೆಪಿಸಿಸಿ ಸದಸ್ಯ ಅರುಣಕುಮಾರ ಎಂವೈ.ಪಾಟೀಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ ಅಫಜಲಪುರ ಪಟ್ಟಣವು ವಿಶಾಲವಾಗಿ ಬೆಳೆಯುತ್ತಿದೆ. ಪಟ್ಟಣದ ಎಲ್ಲ ವಾರ್ಡ್ಗಳು ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸುಹಾಸಿನಿ ಖೇಳಗಿ ಅವರು ಪುರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು. ಈಗಾಗಲೇ ೧೨೦ ಕೋಟಿ ರೂ ಅನುದಾನದ ಕುಡಿಯುವ ನೀರಿನ ಯೋಜನೆ ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ. ಇನ್ನೂ ೧೫೦ ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ಇಲಾಖೆಯವರು ೮೫ ಕೋಟಿ ಮಂಜೂರಿಗೆ ಒಪ್ಪಿದ್ದಾರೆ ಉಳಿದಂತೆ ಕೆಕೆಆರ್‌ಡಿ ಅನುದಾನದಲ್ಲಿ ವರ್ಷದೊಳಗೆ ಕೆಲಸ ಮಾಡಿ ಮುಗಿಸಲಾಗುವುದು ಎಂದ ಅವರು ೨೦೧೮ ರಿಂದ ಇಲ್ಲಿಯವರೆಗೂ ಪಟ್ಟಣದ ಅರ್ಹ ಬಡ ಕುಟುಂಬಗಳಿಗೆ ಮನೆ ಹಂಚಿಕೆ ಮಾಡಲು ಆಗಿಲ್ಲ. ಪಟ್ಟಣದವರಿಗಾಗಿ ಈಗಾಗಲೇ ೧೭ ಎಕರೆ ೩೦ ಗುಂಟೆ ಜಮೀನು ಖರೀದಿ ಮಾಡಿದ್ದು ಗುಣಮಟ್ಟದ ಮನೆ ನಿರ್ಮಿಸಿ ಹಂಚಿಕೆ ಮಾಡಲಾಗುವುದು. ಹೀಗಾಗಿ ಪುರಸಭೆಯ ಅಧ್ಯಕ್ಷರು ಎಲ್ಲರನ್ನು ಒಗ್ಗೂಡಿಸಿಕೊಂಡು ಜವಾಬ್ದಾರಿಯಿಂದ ಪಟ್ಟಣದ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಅರುಣಕುಮಾರ ಎಂವೈ ಪಾಟೀಲ, ಪಪ್ಪು ಪಟೇಲ್ ಮಾಜಿ ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ, ಮತೀನ್ ಪಟೇಲ್, ಸಿದ್ದಾರ್ಥ ಬಸರಿಗಿಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮುಖಂಡರಾದ ರಾಜಶೇಖರ ಪಾಟೀಲ, ರವಿನಂದಶೇಟ್ಟಿ, ಶಿವಾನಂದ ಗಾಡಿಸಾಹುಕಾರ, ಲಚ್ಚಪ್ಪ ಜಮಾದಾರ, ರವಿ ಶೆಟ್ಟಿ, ನಾಗಪ್ಪ ಆರೇಕರ್, ರಾಜುಗೌಡ ಅವರಳ್ಳಿ, ಚನ್ನಬಸಯ್ಯ ಸ್ವಾಮಿ, ಮಹಾಲಿಂಗ ಅಂಗಡಿ, ಮಲ್ಲಯ್ಯ ಹೊಸಮಠ, ಗೌತಮ ಸಕ್ಕರಗಿ, ವಿಶ್ವನಾಥ ಕಾರ್ನಾಡ್, ವಿರೇಶ ಖೇಳಗಿ, ಮಲ್ಲು ವಾಳಿ ಸೇರಿದಂತೆ ಅಫಜಲಪುರ ಪಿಎಸ್‌ಐ ಸೋಮನಿಂಗ ಒಡೆಯರ್ ಮತ್ತು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.

“ಪಟ್ಟಣದ ಅಭಿವೃದ್ಧಿಗಾಗಿ ಶಾಸಕ ಎಂ.ವೈ.ಪಾಟೀಲ ಹಾಗೂ ಪುರಸಭೆಯ ಸದಸ್ಯರು ಮತ ನೀಡಿ ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಇವರೇಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಪಟ್ಟಣದ ನಾಗರಿಕರ ನಿರೀಕ್ಷೆಯಂತೆ ಅಭಿವೃದ್ಧಿ ಕೆಲಸಗಳು ಮಾಡುವ ಮೂಲಕ ತಮ್ಮೇಲ್ಲರ ವಿಶ್ವಾಸ ಉಳಿಸಿಕೊಳ್ಳುವೆ. ನನಗೆ ಅಧ್ಯಕ್ಷತೆ ಸ್ಥಾನದವರೆಗೂ ಬರಲು ಕಾರಣ ಕರ್ತರಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ.”
– ಸುಹಾಸಿನಿ ವಿರೇಶ ಖೇಳಗಿ
ನೂತನ ಅಧ್ಯಕ್ಷರು
ಪುರಸಭೆ, ಅಫಜಲಪುರ

“ಶಾಸಕ ಎಂ.ವೈ.ಪಾಟೀಲ ಅವರ ಆಶಯದಂತೆ ಪಟ್ಟಣದ ನಾಗರಿಕರು ನನ್ನನ್ನು ಎರಡು ಸಲ ಪುರಸಭೆ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ. ಸದಾ ಜನಸೇವೆಯಲ್ಲಿರುವ ನನ್ನನ್ನು ಸಧ್ಯ ಪುರಸಭೆಗೆ ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿ ಮಾಡುತ್ತೇನೆ.”
– ಶಿವಕುಮಾರ ಪದಕಿ
ನೂತನ ಉಪಾಧ್ಯಕ್ಷರು
ಪುರಸಭೆ, ಅಫಜಲಪುರ