ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈಗ ಪರೀಕ್ಷಾ ಸಮಯ ಇರುವುದರಿಂದ ಮಕ್ಕಳಿಗೆ ಬಣ್ಣ ಹಾಕದಂತೆ ನೋಡಿಕೊಳ್ಳಬೇಕು. ಮತ್ತು ಹೋಳಿ ಮತ್ತು ರಮಜಾನ್ ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಸಿಪಿಆಯ್ ನಾನಾಗೌಡ ಪೊಲೀಸ್‌ಪಾಟೀಲ ಹೇಳಿದರು.
ಸಿಂದಗಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ರಮಜಾನ ಹಾಗೂ ಹೋಳಿ ಹಬ್ಬದ ನಿಮಿತ್ಯ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇಲಾಖೆಯೂ ಅಹಿತಕರ ನಡೆಯದಂತೆ ನಿಗಾವಹಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ ಎಂದರೆ ಹಮ್ಮಿಕೊಂಡ ಶಾಂತಿ ಸಭೆಗೆ ಒಂದು ಅರ್ಥ ಬರುತ್ತದೆ. ಇಲ್ಲಿಯವರೆಗೂ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ ಎಂಬ ಭರವಸೆ ನಮಗಿದೆ. ಸಾರ್ವಜನಿಕರು ಬಣ್ಣವಾಡುವ ಸಂದರ್ಭದಲ್ಲಿ ಯಾವುದೇ ಧಾರ್ಮಿಕತೆಗೆ ದಕ್ಕೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಸಾರ್ವಜನಿಕರಾದ ಶೇಖರಗೌಡ ಹರನಾಳ, ರಾಕೇಶ ಕಾಂಬಳೆ, ರಜತ ತಾಂಬೆ ಮಾತನಾಡಿ, ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಹಬ್ಬ ಆಚರಣೆಯಾಗಲಿ. ರಮಜಾನ್ ಮತ್ತು ಹೋಳಿ ಹಬ್ಬ ಎರಡು ಒಟ್ಟಿಗೆ ಬಂದಿವೆ. ನಿಮ್ಮ ಇಲಾಖೆಯಿಂದ ಬಂದಂತಹ ಸುತ್ತೋಲೆಯ ಮಾಹಿತಿಯನ್ನು ನೀಡಿ ಸಾರ್ವಜನಿಕರಿಗೆ ನಾವು ಮುಟ್ಟಿಸುವ ಕಾರ್ಯ ಮಾಡುತ್ತೇವೆ. ಕಾನೂನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ. ಇದೀಗ ಪರೀಕ್ಷೆ ಇರುವ ಕಾರಣ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು. ಹೊಳಿ ಹಬ್ಬದ ದಿನದಂದು ಮದ್ಯ ಮಾರಾಟ ಬಂದ ಮಾಡಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪಿಎಸ್‌ಐ ಆರಿಫ್ ಮುಷಾಪುರಿ ಮಾತನಾಡಿ, ಸಹೋದರತೆ ಮತ್ತು ಬಾಂಧವ್ಯದಿಂದ ಹೋಳಿ ಹಬ್ಬ ಆಚರಣೆ ಮಾಡಬೇಕು. ನಮ್ಮ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆಯೂ ಹದ್ದಿನ ಕಣ್ಣು ಇಟ್ಟಿದೆ. ಎಲ್ಲರೂ ಜಾಗರುಕತೆಯಿಂದ ಇರಬೇಕು. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಧರ್ಮಕ್ಕೆ ದಕ್ಕೆ ತರುವಂತ ಪೋಸ್ಟ್ಗಳನ್ನು ಯಾರು ಹಾಕಬಾರದು. ಒಂದು ವೇಳೆ ಹಾಕಿದರೆ ಅಂತಹವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಬಾಕ್ಸ್: ಪಾಲಕರು ಮಕ್ಕಳ ಕೈಯಲ್ಲಿ ದ್ವಿಚಕ್ರ ವಾಹನ ನೀಡಬಾರದು. ಒಂದು ವೇಳೆ ನೀಡಿದರೆ ಕಾನೂನು ಕ್ರಮಕೈಗೊಂಡು ಪ್ರಕರಣ ದಾಖಲಿಸಿ ೨೫ ಸಾವಿರ ದಂಡ ವಿಧಿಸಲಾಗುವುದು. ಮತ್ತು ಮದ್ಯಪಾನ ಸೇವನೆ ಮಾಡಿ ವಾಹನ ಚಾಲಕರು ಚಾಲನೆ ಮಾಡಬಾರದು. ಒಂದು ವೇಳೆ ಸೇವನೆ ಮಾಡಿ ವಾಹನ ಚಲಾವಣೆ ಮಾಡಿದರೆ ಡಿಡಿ ಪ್ರಕರಣ ದಾಖಲಿಸಲಾಗುವುದು. ಅಂತಹವರ ಪರವಾಗಿ ಪ್ರಕರಣ ದಾಖಲಿಸಿದಾಗ ನಾಯಕರು, ಹಿರಿಯರು ಯಾರು ನಮಗೆ ಕರೆ ಮಾಡಿಯಾಗಲಿ ಅಥವಾ ಠಾಣೆಗೆ ಬಂದು ಹೇಳುವುದಾಗಲಿ ಮಾಡಬೇಡಿ. ಅವರಿಗೆ ಬುದ್ದಿ ಹೇಳಿ ದಂಡ ಕಟ್ಟಲು ತಿಳಿಸಬೇಕು ಎಂದರು
ಇದೇ ಸಂದರ್ಭದಲ್ಲಿ ಪ್ರೋಬೇಶನರಿ ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಕ್ರೈಂ ಪಿಎಸ್‌ಐ ಶಕುಂತಲಾ ನಡುವಿನಕೇರಿ, ಸಿಬ್ಬಂದಿಗಳಾದ ಸುರೇಶ ಕೊಂಡಿ, ಭಗವಂತ ಮುಳಸಾವಳಗಿ, ಸಾರ್ವಜನಿಕರಾದ ಮುನ್ನಾ ಖಾನ್, ಎಸ್.ಎಸ್. ಹಿರೇಮಠ, ಶಾಂತು ನಾಗರಾಳ, ಪ್ರಕಾಶ ಸುಣಗಾರ, ಬಸವರಾಜ ಇಳಗೇರ, ದಿಲೀಪ ಚವ್ಹಾಣ, ಎಲ್.ವಾಯ್.ಚೌಗಲೆ, ಪಿ.ಎಂ.ನಾರಾಯಣಕರ ಸೇರಿದಂತೆ ಸಾರ್ವಜನಿಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.