ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಬ್ಬ ವ್ಯಕ್ತಿಗೆ ಗೌರವಯುತ ಜೀವನ ನಡೆಸಲು ಕಾನೂನಿನಡಿ ಅವಕಾಶಗಳಿದ್ದು, ಅನಿಷ್ಠ ಪದ್ಧತಿಯಾದ ಜೀತಪದ್ಧತಿಯ ನಿರ್ಮೂಲನೆಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಅಂದಾಗ ಮಾತ್ರ ಇಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಜೀತ ಕಾರ್ಮಿಕ ಪದ್ಧತಿ ನಿಷೇಧ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅನೇಕ ಸಮಸ್ಯೆಗಳಲ್ಲಿ ಜೀತಪದ್ಧತಿಯೂ ಒಂದು ಇದು ಮಾನವತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ. ಜೀತ ಪದ್ಧತಿ (ರದ್ಧತಿ) ಕಾಯ್ದೆ ೧೯೭೬ ರನ್ವಯ ಕಾರ್ಮಿಕರನ್ನು ಜೀತಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು.
ನಮ್ಮ ಸಂವಿಧಾನವು ನಾಗರಿಕರಿಗೆ ಗೌರವಯುತ ಜೀವನ ನಡೆಸಲು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಮಾನವನ ಗೌರವಯುತ ಜೀವನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜೀತ ಪದ್ಧತಿಯ ನಿಯಂತ್ರಣವನ್ನು ಒಂದು ಸಾಮಾಜಿಕ ಬದ್ಧತೆಯನ್ನಾಗಿ ತೆಗೆದುಕೊಂಡು ಅನಿಷ್ಠ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕೈ ಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ, ಜೀತ ಪದ್ಧತಿ ಕಾನೂನಿನ್ವಯ ನಿಷೇಧವಿದೆ. ರಾಜ್ಯದಲ್ಲಿ ಜೀತಪದ್ಧತಿಯನ್ನು ನಿಯಂತ್ರಣಗೊಳಿಸಿ, ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಫೆ.೯ ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಜೀತಪದ್ಧತಿ ಕುರಿತು ಅರಿವು ಮೂಡಿಸುವುದು, ಜೀತ ಕಾರ್ಮಿಕರಿಗೆ ಪುನರವಸತಿ, ಜೀತ ವಿಮುಕ್ತರ ಪುನರ್‍ವಸತಿ ಯೋಜನೆ, ಜೀತ ಪದ್ಧತಿ ಕಾಯ್ದೆಯಡಿ ನಿಗದಿಪಡಿಸುವ ಕಾನೂನು ಶಿಕ್ಷೆ, ಜೀತ ಕಾರ್ಮಿಕರನ್ನು ಗುರುತಿಸುವಿಕೆ, ಸರ್ಕಾರದ ವಿವಿಧ ಸುತ್ತೋಲೆ, ನಿರ್ದೇಶನಗಳ ಕುರಿತು ಈ ಒಂದು ದಿನದ ಕಾರ್ಯಾಗಾರದಲ್ಲಿ ಬೆಳಕು ಚೆಲ್ಲಲಾಗುವುದು. ಈ ನಿಟ್ಟಿನಲ್ಲಿ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗರಗಿ, ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಮುಕ್ತಿ ಮೆಂಬರ್ ಅಡ್ವೋಕೆಟ್ ಮಿಸ್ಟರ್ ಕ್ರಿಸ್ಟೋಫರ್ ಸ್ಟ್ಯಾನಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ಅಭಿರಕ್ಷಕ ಆರ್.ಎಸ್.ಬಿದರಿ ಇವರು ಜೀತ ಕಾರ್ಮಿಕ ಪದ್ಧತಿಯ ಕುರಿತು ಉಪನ್ಯಾಸ ನೀಡಿದರು.
ಕಾರ್ಮಿಕ ಅಧಿಕಾರಿಗಳಾದ ಶ್ರೀಮತಿ ಉಮಾಶ್ರೀ ಎಸ್ ಕೋಳಿ ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕರುಗಳಾದ ಶ್ರೀಮತಿ ಜಗದೇವಿ ಸಜ್ಜನ ಹಾಗೂ ಕುಮಾರ ಮಲ್ಲಿಕಾರ್ಜುನ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಬಾಳಪ್ಪ ಅರ್ಜಿ ನಿರೂಪಿಸಿ, ವಂದಿಸಿದರು.