ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ರಸ್ತೆ ಅಪಘಾತದಿಂದ 420 ರಿಂದ 450 ಜನರು ಸಾವಿಗಿಡಾಗಿದ್ದಾರೆ. 1350 ರಿಂದ 1400 ಜನರು ಗಾಯಗೊಂಡಿದ್ದಾರೆ. ಪ್ರತಿಯೊಬ್ಬರೂ ರಸ್ತಾ ಸುರಕ್ಷತಾ ನಿಯಮಗಳನ್ನು ವಾಹನ ಚಲಾಯಿಸಿದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದ ನಂತರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮ ಅರಿತುಕೊಳ್ಳಬೇಕು, ವಾಹನಗಳನ್ನು ವೇಗವಾಗಿ ಚಾಲನೆ ಮಾಡಬಾರದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಡೆದುಕೊಂಡು ಹೋಗುವವರು ಪಾದಚಾರಿ ರಸ್ತೆಯಲ್ಲಿ ಹೋಗುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿನಿಯರಿಗೆ ಯಾರಾದರೂ ತೊಂದರೆ ಕೊಟ್ಟರೆ 112 ಸಂಖ್ಯೆಗೆ ಕರೆಮಾಡುವ ಮೂಲಕ ಪೊಲೀಸ್ ಇಲಾಖೆಯ ನೆರವು ಪಡೆದುಕೊಳ್ಳಬೇಕೆಂದರು.
ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ಬೈಕ್ ಇತರೆ ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳಬೇಕು. ಬೈಕ್ ಆಟೋಗಳಲ್ಲಿ ನಿಗದಿಗಿಂತ ಹೆಚ್ಚಿನ ಸವಾರರು ಪ್ರಯಾಣಿಸಬಾರದು. ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ಚಾಲನಾ ಪರವಾನಿಗೆ ಹೊಂದಿರಬೇಕು. ಪ್ರತಿಯೊಬ್ಬರ ಜೀವನ ಅಮೂಲ್ಯವಾಗಿದೆ. ನಮ್ಮ ಜೀವನಕ್ಕಿರುವ ಮಹತ್ವ ಇತರರ ಜೀವನಕ್ಕೂ ಇದೆ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ಮನೆಯ ಸದಸ್ಯರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ರಸ್ತೆ ಸಂಚಾರ ನಿಯಮಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳುವಳಿಕೆ ಹೊಂದಬೇಕು. ಬೈಕ್ ಸವಾರರು ಸೇರಿದಂತೆ ಇತರೆ ವಾಹನ ಚಾಲಕರು ಜಾಗ್ರತೆಯಿಂದ ವಾಹನ ಚಲಾಯಿಸುವ ಮೂಲಕ ಅಪಘಾತಗಳನ್ನ ತಡೆಯಬೇಕು ಎಂದು ಹೇಳಿದರು.
ಪಿಐ ಗುರುಶಾಂತ ದಾಶ್ಯಾಳ, ಬಸ್ ಡಿಪೋ ವ್ಯವಸ್ಥಾಪಕ ಬಿ.ವಿ.ಚಿತ್ತವಾಡಗಿ, ಬಸಮ್ಮ ಹಂಜಗಿ ಮಾತನಾಡಿದರು.
ವೇದಿಕೆಯಲ್ಲಿ ಉಪನ್ಯಾಸಕ ಪ್ರಕಾಶ ಮಸಬಿನಾಳ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಹೆಚ್ಚುವರಿ ಎಸ್.ಪಿ ಶಂಕರ ಮಾರಿಹಾಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ಬಸ್ ನಿಲ್ದಾಣ, ತೆಲಗಿ ರಸ್ತೆ ಮಾರ್ಗವಾಗಿ ಪೊಲೀಸ್ ಠಾಣೆ ಆವರಣಕ್ಕೆ ತಲುಪಿತು. ಜಾಥಾದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್.ನಾಯಕಲ್ಲಮಠ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾಂತ ದಾಶ್ಯಾಳ, ಪಿಎಸ್ಐ ಎಂ.ಎ.ಮುಲ್ಲಾ, ಎಎಸ್ಐಗಳಾದ ಎಸ್.ಐ.ಕುಪ್ಪಗೌಡರ, ಎ.ಎಚ್.ರಡ್ಡಿ, ಪೊಲೀಸ್ ಸಿಬ್ಬಂದಿಗಳಾದ ಜೆ.ಎಸ್.ತಕ್ಕೋಡ, ಬಸಪ್ಪ ಶೇಬಗೊಂಡ, ಎಂ.ಬಿ.ಮುಳವಾಡ, ಎಂ.ಡಿ.ಭೂಶೆಟ್ಟಿ, ಮಹಾಂತೇಶ ಸಜ್ಜನ, ಬಿ.ಎಸ್. ಪತ್ರಿ, ಬಸ್ ಡಿಪೋ ವ್ಯವಸ್ಥಾಪಕ ಬಿ.ವಿ.ಚಿತ್ತವಾಡಗಿ, ಸೇರಿದಂತೆ ಬಿಎಲ್ಡಿ ಸಂಸ್ಥೆಯ ಔಷಧ ವಿದ್ಯಾಲಯ, ಅಸ್ಕಿ ಔಷಧ ವಿದ್ಯಾಲಯ, ಬಸವೇಶ್ವರ ಸರ್ಕಾರಿ ಪಪೂ ಕಾಲೇಜು, ಅಕ್ಕನಾಗಮ್ಮ ಸರ್ಕಾರಿ ಪಪೂ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

