ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಚಾಲನೆ ನೀಡಿದ ಸಚಿವ ಶಿವಾನಂದ ಪಾಟೀಲ ಅಬಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದ ಮೇಲಂಸ್ತಿನ ಕೋಣೆಯಲ್ಲಿ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಶನಿವಾರ ಚಾಲನೆ ನೀಡಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಭೂಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್,ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತ ಅಪ್‌ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ. ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಅನ್‌ಲೈನ್‌ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಗಳನ್ನು ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪ್ಪುತ್ತದೆ. ದಾಖಲೆಗಳ ವ್ಯತ್ಯಾಸ ರೆಕಾರ್ಡ್ ಮಿಸ್ಸಿಂಗ್, ವಿಳಂಬ ಎಲ್ಲ ಸಮಸ್ಯೆಗಳು ಪರಿಹಾರವಾಗಲಿದೆ. ಜನರು ಕಚೇರಿಗಳಿಗೆ ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸುಲಭವಾಗಿ ಆನ್‌ಲೈನ್ ಮೂಲಕ ದಾಖಲೆಗಳನ್ನು ಢೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು.
ರಾಜ್ಯದಲ್ಲಿ ಪ್ರಸ್ತುತ ೨೦೯ ತಾಲೂಕು ಕಚೇರಿಗಳಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯ ೨೦೨೫ ಜನೇವರಿಯಿಂದ ಆರಂಭಿಸಲಾಗುತ್ತಿದೆ. ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಮೂರು ತಾಲೂಕು ಸೇರಿ ಅಖಂಡ ಬಸವನಬಾಗೇವಾಡಿ ತಾಲೂಕಿಗೆ ಸಂಬಂಧಿಸಿದ ಅಭಿಲೇಖಾಲಯದ ದಾಖಲೆಗಳ ಗಣಕೀಕರಣ ಕಾರ್ಯ ಇಂದಿನಿಂದ ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಕಾರ್ಯ ಎಂಟು ತಿಂಗಳಲ್ಲಿ ಪೂರ್ಣಗೊಳಲಿದೆ. ದಾಖಲೆಗಳು ಗಣಕೀಕರಣಗೊಂಡರೆ ದಾಖಲೆಗಳು ನಶಿಸದೇ, ಬೆಂಕಿಗೆ ಬಿದ್ದು ಹಾಳಾಗುವದನ್ನು ತಡೆದು ಸುರಕ್ಷಿತವಾಗಿಡಬಹುದು ಎಂದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್.ನಾಯಕಲ್ಲಮಠ, ನಿಡಗುಂದಿ ತಹಸೀಲ್ದಾರ ಎ.ಡಿ.ಅಮರವಾಡಗಿ, ಗ್ರೇಡ್-೨ ತಹಸೀಲ್ದಾರರಾದ ಜಿ.ಎಸ್.ನಾಯಕ, ಎಚ್.ಎನ್.ಬಡಿಗೇರ, ಎಡಿಎಲ್‌ಆರ್ ಜಿ.ಬಿ.ವಗ್ಗನವರ, ಭೂ ದಾಖಲೆಗಳ ಇಲಾಖೆಯ ವ್ಯವಸ್ಥಾಪಕ ಎ.ಬಿ.ಕಲಾದಗಿ, ಶಿರಸ್ತೇದಾರರಾದ ಬಿ.ಆರ್.ಪೊಲೇಶಿ, ಎಂ.ಡಿ.ಬಳಗಾನೂರ, ಎ.ಎಚ್.ಬಳೂರಗಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಸಿಬ್ಬಂದಿಗಳಾದ ರಾಜು ಇವಣಗಿ, ಶಂಕರ ತಳವಾರ, ಬಿ.ಜಿ.ದಾನಿ, ಅನಿಲ ಅವಟಿ, ಎಸ್.ಎಸ್.ದೇಸಾಯಿ, ಸಂತೋಷ ಕುಂಟೋಜಿ, ಜಗದೀಶ ಹಾರಿವಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಬಸವೇಶ್ವರ ಅರ್ಬನ್ ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ನಜೀರ ಗಣಿ, ಪ್ರವೀಣ ಪೂಜಾರಿ, ಮುಖಂಡರಾದ ಸಂಗಮೇಶ ಓಲೇಕಾರ, ಜಟ್ಟಿಂಗರಾಯ ಮಾಲಗಾರ, ಪರಶುರಾಮ ಜಮಖಂಡಿ, ಮಹಾಂತೇಶ ಸಾಸಾಬಾಳ, ರವಿ ಬಾವಿಕಟ್ಟಿ, ಗುರುಲಿಂಗ ಬಸರಕೋಡ, ಸಂಗಯ್ಯ ಕಾಳಹಸ್ತೇಶ್ವರಮಠ, ಈಶ್ವರ ಜಾಧವ ಸೇರಿದಂತೆ ಇತರರು ಇದ್ದರು.

