ಉದಯರಶ್ಮಿ ದಿನಪತ್ರಿಕೆ
ಚಡಚಣ: ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾವೆಲ್ಲರೂ ಪ್ರಕೃತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಅದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಅವುಗಳನ್ನು ತಪ್ಪಿಸಲು ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಇಕೋ ಕ್ಲಬ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪರಿಸರದಲ್ಲಿ ಮರಗಳ ಪಾತ್ರ ಹಿರಿದಾದದ್ದು, ಅವು ಸಕಲ ಜೀವಿಗಳಿಗೆ ಜೀವಾಮೃತ ನೀಡುತ್ತವೆ. ಹಾಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ನೆಟ್ಟು ಬೆಳೆಸಿ ಪರಿಸರವನ್ನು ಉಳಿಸೋಣ ಎಂದು ಹೇಳಿದರು.
ಶಿಕ್ಷಕ ಡಿ ಎಸ್ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುವ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಪರಿಸರ ಸಂರಕ್ಷಿಸುವ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಇಕೋ ಕ್ಲಬ್ ಕಾರ್ಯಕ್ರಮ ರೂಪಿಸಿದೆ.ಈ ಕಾರ್ಯಕ್ರಮದಡಿಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಇನ್ನೂ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಾಲಾಜಿ ಗಾಡಿವಡ್ಡರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುರೇಖಾ ಝುಲ್ಪಿ ಪ್ರಾರ್ಥಿಸಿದರು. ಜಗದೀಶ ಚಲವಾದಿ ಸ್ವಾಗತಿಸಿದರು. ಬಸವರಾಜ ಕರಜಗಿ ನಿರೂಪಿಸಿದರು. ಜಯಶ್ರೀ ಗೋಟ್ಯಾಳ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಹಾದೇವಿ ಕೇಶಟ್ಟಿ, ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಶಿಕ್ಷಕರಾದ ಎಚ್ ಜೆ ಲೋಣಿ,ಎಂ ಎಸ್ ನಿಂಬಾಳಕರ, ವ್ಹಿ ಎಸ್ ಪತ್ತಾರ, ಅಪೇಕ್ಷಾ ಕರಜಗಿ, ಗೀತಾ ಮಾಳಿ, ಪ್ರೇಮಾ ಧೋತ್ರೆ ಹಾಗೂ ಮಕ್ಕಳು ಉಪಸ್ಥಿತರಿದ್ದರು.

