ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾನ್ ಸಂಶೋಧಕ, ಮಹಾಮಾರ್ಗದ ರೂವಾರಿ ಡಾ. ಎಂ. ಎಂ. ಕಲಬುರ್ಗಿಯವರು ಸಂಶೋಧನೆಯ ಜೊತೆಗೆ ಸೃಜನ ಸಾಹಿತ್ಯ ಕ್ಷೇತ್ರಕ್ಕೂ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಇವರ ಸೃಜನಶೀಲ ಬರಹಗಳ ಸಾಲಿಗೆ ಸೇರುವ ಕೆಟ್ಟಿತು ಕಲ್ಯಾಣ ಎಂಬ ನಾಟಕ ಕೂಡಾ ಒಂದು. ಇದರಲ್ಲಿ ಬಸವಣ್ಣನವರ ಜೀವನ ಮೂರು ಸಂಸ್ಕೃತಿಗಳಲ್ಲಿ ಸಾಗಿ ಬಂದಿದೆ. ಬಾಗೇವಾಡಿಯ ಅಗ್ರಹಾರ ಸಂಸ್ಕೃತಿ, ಕೂಡಲಸಂಗಮದ ದೇವಾಲಯ ಸಂಸ್ಕೃತಿ ಮತ್ತು ಕಲ್ಯಾಣದ ರಾಜ ಸಂಸ್ಕೃತಿ. ಇಲ್ಲೆಲ್ಲ ಆತ ಸ್ಥಾವರದಿಂದ ಜಂಗಮದತ್ತ, ಸ್ಥಾವರವನ್ನು ಜಂಗಮಗೊಳಿಸುತ್ತ ಸಾಗಿಬರುವುದರ ಜೊತೆಗೆ ಮಾನವತೆಯ ಸಂದೇಶ ಸಾರುತ್ತದೆ ಎಂದು ಚಡಚಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಹೇಳಿದರು.
ನಗರದ ರಾಧಾಕೃಷ್ಣನ್ ನಗರದ ಶಿವಬಸವ ಯೋಗಾಶ್ರಮದಲ್ಲ್ಲಿ ಓದುಗರ ಚಾವಡಿ, ರಾಜೇಂದ್ರ ಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಡಾ. ಎಂ. ಎಂ. ಕಲಬುರ್ಗಿಯವರ ಕೆಟ್ಟಿತ್ತು ಕಲ್ಯಾಣ ಕೃತಿ ಪರಿಚಯಿಸುತ್ತಾ ಅವರು ಮಾತನಾಡಿದರು.
ಶರಣ ಪರಂಪರೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕಲಬುರ್ಗಿರವರು ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೆಣೆದಿದ್ದಾರೆ. ಶರಣ ಚಳುವಳಿಯ ಅಂತ್ಯದ ಬಗ್ಗೆ ಅನೇಕ ನಾಟಕಗಳು ಬಂದಿವೆಯಾದರೂ ಈ ನಾಟಕ ಬಸವಣ್ಣನ ಸಮಗ್ರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಬಸವ, ಯೋಗಾಶ್ರಮದ ದಾನಮ್ಮ ತಾಯಿಯವರು ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವನ್ನು ಆಧ್ಯಾತ್ಮಿಕ ಅನುಭವದ ಕೇಂದ್ರವನ್ನಾಗಿಸಿ ಪುರುಷ ಮತ್ತು ಮಹಿಳೆಯನ್ನು ಸಮಾನವಾಗಿ ಕಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣು ಸಬರದ ಕನ್ನಡ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಉದ್ದೇಶ ಚಾವಡಿಯದಾಗಿದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಬಿ. ಕೆ. ಗೋಟ್ಯಾಳ ಮಾತನಾಡಿದರು
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಮನು ಪತ್ತಾರ್, ರಾಜಶೇಖರ ಉಮರಾಣಿ, ಶರಣಗೌಡ ಪಾಟೀಲ, ಡಾ. ಸುಭಾಷಚಂದ್ರ ಕನ್ನೂರ್, ಎಂ. ಎಸ್. ಹುಗ್ಗಿ, ಸುರೇಶ್ ಗಬ್ಬೂರು, ರಾಘವೇಂದ್ರ ಗೊದಿ, ಸಿದ್ದನಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ಬಸವರಾಜ ಕುಂಬಾರ ನಿರೂಪಿಸಿದರೆ, ಮೋಹನ್ ಕಟ್ಟಿಮನಿ ವಂದಿಸಿದರು.

