ಭೂಮಾಲೀಕರೊಂದಿಗೆ ಚರ್ಚಿಸಿ ಕ್ರಮದ ಭರವಸೆ ನೀಡಿರುವ ಸರ್ಕಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಅಲಿಯಾಬಾದ, ಮದಬಾವಿ ಮತ್ತು ಬುರಣಾಪುರ ಗ್ರಾಮಗಳಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 1,870 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು, ಎಲ್ಲಾ ಭೂಮಾಲೀಕರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಅಗತ್ಯವಿದ್ದಲ್ಲಿ ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಈಚೆಗೆ ನಡೆದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ನಿಯಮ 73 ರ ಅಡಿಯಲ್ಲಿ ಗಮನಸೆಳೆಯುವ ಸೂಚನೆಯಲ್ಲಿ, ವಿಜಯಪುರ ವಿಮಾನ ನಿಲ್ದಾಣ ಯೋಜನೆಗಾಗಿ 3ನೇ ಹಂತದಲ್ಲಿ ಹೆಚ್ಚುವರಿಯಾಗಿ 1,870 ಎಕರೆ ಜಮೀನನ್ನು ಸರ್ಕಾರದ ಪ್ರಾಥಮಿಕ ಅಧಿಸೂಚನೆಯಡಿ ಭೂಸ್ವಾಧೀನಪಡಿಸಿಕೊಳ್ಳಲು, 2010ರಲ್ಲಿ ರೈತರಿಗೆ 28 (1) ರಡಿ ನೋಟಿಸ್ ನೀಡಿ, ಕಲಂ (3) ರಡಿ ಆಕ್ಷೇಪಣೆಗಳ ವಿಚಾರಣಾ ನೋಟಿಸ್ ಜಾರಿ ಮಾಡಿ 14 ವರ್ಷವಾದರೂ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಪರಿಹಾರ ನೀಡಿರುವುದಿಲ್ಲ.
ಭೂಸ್ವಾಧೀನ್ ಕಾರ್ಯ ಅಗತ್ಯವಿದ್ದರೂ ಕೂಡ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಕೃಷಿ ಚಟುವಟಿಕೆ ಇಲ್ಲದೆ, ಬ್ಯಾಂಕ್ ಸಾಲ ಪಡೆದುಕೊಳ್ಳಲು, ಮಾರಾಟ ಮಾಡಲು ಸಹ ಅವಕಾಶ ಇಲ್ಲದ್ದರಿಂದ ರೈತರು ಸಂಕಷ್ಟದಲ್ಲಿರುವ ಬಗ್ಗೆ ಸರ್ಕಾರದ ಗಮನಸೆಳೆದು, ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿದ್ದೆ.
ಇದಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಲಿಖಿತ ಉತ್ತರ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ರವರು, 2010ರಲ್ಲಿ ಕಲಂ 3(1) ಮತ್ತು 28(1) ರಡಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಸದರಿ ಭೂಸ್ವಾದೀನಕ್ಕೆ ರೈತರ ವಿರೋಧ ನೀಡಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಮತ್ತೊಮ್ಮೆ ಭೂಸ್ವಾಧೀನ ಎಲ್ಲಾ ಭೂಮಾಲೀಕರೊಂದಿಗೆ ಚರ್ಚಿಸಿ, ಅಗತ್ಯವಿದ್ದಲ್ಲಿ ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

