ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಮೀಪವಿರುವ ಸರ್ಕಾರಿ ಆದರ್ಶ ವಿದ್ಯಾಲಯ ಸೌಲಭ್ಯ ಒದಗಿಸಬೇಕೆಂದು ವಿದ್ಯಾಲಯದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಶುಕ್ರವಾರ ತಾಲೂಕು ಪಂಚಾಯಿತಿ ಇಓ, ತಹಸೀಲ್ದಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಬರೆದ ಮನವಿ ಪತ್ರಗಳನ್ನು ಆಯಾ ಇಲಾಖೆಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಸಜ್ಜನ ಅವರು, ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸುಮಾರು ೮೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಲಯದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಅಲ್ಲದೇ ವಿದ್ಯಾಲಯದ ಬಿಸಿಯೂಟ ತಯಾರಿಸಲು, ಶೌಚಾಲಯದ ಬಳಕೆಗೂ ನೀರು ಇಲ್ಲದಂತಾಗಿದೆ. ಇದು ಅಲ್ಲದೇ ವಿದ್ಯಾಲಯಕ್ಕೆ ಸರಿಯಾದ ಬಸ್ಸಿನ ಸೌಕರ್ಯ ಸರಿಯಾಗಿ ಇರದೇ ಇರುವದರಿಂದಾಗಿ ವಿದ್ಯಾರ್ಥಿಗಳು ಸಕಾಲಿಕವಾಗಿ ಬರಲು ಸಾಧ್ಯವಾಗುತ್ತಿಲ್ಲ. ವಿದ್ಯಾಲಯಕ್ಕೆ ಅನೇಕ ಸಮಸ್ಯೆಗಳಿದ್ದರೂ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಿದೆ. ವಿದ್ಯಾಲಯದ ಸಮಸ್ಯೆಗಳ ಕುರಿತು ಸಚಿವರಿಗೆ, ಶಾಸಕರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ವಿದ್ಯಾಲಯದ ಸಮಸ್ಯೆಗಳನ್ನು ಪರಿಹರಿಸಬೇಕು. ಒಂದು ಸಮಸ್ಯೆಗಳನ್ನು ಪರಿಹರಿಸದೇ ಹೋದರೆ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪಾಲಕರೊಂದಿಗೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರಾದ ಪ್ರಕಾಶ ಬೆಣ್ಣೂರ, ಶಿವಾನಂದ ಮಡಿಕೇಶ್ವರ, ರಮೇಶ ಮೊಕಾಶಿ, ಸತೀಶ ಬಿರಾದಾರ, ಪುಡಲಿಂಕ ಪವಾರ, ವೈಷ್ಣವಿ ಕುಲಕರ್ಣಿ, ರೇಣುಕಾ ಮನಹಳ್ಳಿ ಇದ್ದರು.

