ವಿಭಾಗ, ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿ ಸಜ್ಜು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣೆಯ ತಟದಲ್ಲಿರುವ ಉದ್ಯಾನ ನಗರಿ ಆಲಮಟ್ಟಿಯಲ್ಲಿ ನಾಳೆಯಿಂದ ಖೋಖೋ ಆಟದ ಕಲರವ ಮೊಳಗಲಿದೆ.
ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ಆಟಗಳಲ್ಲೊಂದಾದ ಖೋಖೋ ಪಂದ್ಯಾಟದ ರಸಸ್ವಾದ ಈ ಭಾಗದ ಕ್ರೀಡಾಭಿಮಾನಿಗಳು, ಕ್ರೀಡಾ ಪ್ರಿಯರು ಕಣ್ತುಂಬಿಸಿಕೊಂಡು ಖುಷಿ,ಉಲ್ಲಾಸದಿಂದ ಸವಿಯಲ್ಲಿದ್ದಾರೆ.
ಇಂಥದೊಂದು ಸುಕ್ಷಣದ ಸನ್ನಿವೇಶಕ್ಕೆ ಇಲ್ಲಿನ ಆಲಮಟ್ಟಿ ಡ್ಯಾಂ ಸೈಟಿನ ಶಾಲಾ ಮೈದಾನ ಇದೀಗ ಸಜ್ಜಾಗಿ ಕಂಗೊಳಿಸುತ್ತಿದೆ. ಸುಸಜ್ಜಿತ ನಾಲ್ಕು ಆಟದ ಅಂಕಣಗಳು ನಿಮಿ೯ಸಲಾಗಿದ್ದು ಇಲ್ಲಿ ಏಕಕಾಲದಲ್ಲಿಯೇ ಕಸರತ್ತಿನ ಖೋಖೋ ಪಂದ್ಯ ನಡೆಯಲಿದೆ. ಪ್ರತಿಷ್ಠಿತ ತಂಡಗಳು ಪ್ರತಿ ಆಟದಲ್ಲೂ ತಮ್ಮ ಹಣಾಹಣಿಭರಿತ ಮಿಂಚಿನ ವೇಗದ ಸ್ಪರ್ಧಾ ಕೌಶಲ್ಯ ಒರೆಗಲ್ಲಿಗೆ ಹಚ್ಚಲ್ಲಿವೆ. ಈ ಸವಿರಸ ಕ್ಷಣಗಳನ್ನು ವೀಕ್ಷಿಸುವ ಅವಕಾಶ ಕ್ರೀಡಾಸಕ್ತ ಪ್ರೇಮಿಗಳು ಕೌತಕದಿಂದ ಎದುರು ನೋಡುತ್ತಿದ್ದಾರೆ !
ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಬೆಳಗಾವಿ ವಿಭಾಗ ಮತ್ತು ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ ಇಲ್ಲಿ ಜರುಗಲ್ಲಿದ್ದು , ನ.೧೨ ರಂದು ವಿಭಾಗ ಮಟ್ಟ ಹಾಗೂ ನ.೧೪ ರಂದು ರಾಜ್ಯ ಮಟ್ಟದ ಸ್ಥರ್ಧೆಗಳು ನಡೆಯಲಿವೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ೧೪ ವಯೋಮಾನ (ಪ್ರಾಥಮಿಕ ಶಾಲೆ)ದ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ನ.೧೧ ರಂದು ೯ ಜಿಲ್ಲೆಗಳ ಕ್ರೀಡಾಪಟುಗಳು ಬರಲಿದ್ದು, ನ.೧೨ ರ ಬೆಳಿಗ್ಗೆ ೭.೩೦ ರಿಂದಲೇ ಸ್ಪರ್ಧೆಗಳು ಜರುಗಲಿವೆ. ಅದೇ ದಿನ ವಿಭಾಗ ಮಟ್ಟದ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.
ರಾಜ್ಯ ಮಟ್ಟದ ಖೋಖೋ ಕ್ರೀಡೆ ಉದ್ಘಾಟನೆ:
ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ರಾಜ್ಯದ ನಾನಾ ಭಾಗಗಳಿಂದ ನ,.೧೩ ರಂದು ಕ್ರೀಡಾಪಟುಗಳು ಆಗಮಿಸಲಿದ್ದು, ಆ ದಿನ ನೋಂದಣಿ ನಡೆಯಲಿದೆ. ೧೪ ವಯೋಮಾನದೊಳಗಿನ (ಪ್ರಾಥಮಿಕ ಶಾಲಾ ಹಂತ) ಹಾಗೂ ೧೭ ವಯೋಮಾನದೊಳಗಿನ (ಪ್ರೌಢಶಾಲಾ ಹಂತ) ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೩ ರಂದು ಸಂಜೆ ೬ ಕ್ಕೆ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ. ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಲಿದ್ದಾರೆ. ಅದ್ಧೂರಿ ಉದ್ಘಾಟನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನ.೧೪ ರಂದು ರಾಜ್ಯ ಮಟ್ಟದ ಸ್ಪರ್ಧೆಗಳು ಬೆಳಿಗ್ಗೆ ೭.೩೦ ರಿಂದಲೇ ಆರಂಭಗೊಳ್ಳಲಿವೆ. ಸಂಜೆಯ ವೇಳೆಗೆ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.
ವಸತಿ ವ್ಯವಸ್ಥೆ: ವಿಭಾಗ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಎಲ್ಲಾ ಬಾಲಕರಿಗೆ ಸಮೀಪದ ಯಲಗೂರದ ಯಾತ್ರಿ ನಿವಾಸದಲ್ಲಿ, ಬಾಲಕಿಯರಿಗೆ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಊಟ: ಎಲ್ಲಾ ಕ್ರೀಡಾಪಟುಗಳಿಗೆ, ಅಧಿಕಾರಿಗಳಿಗೆ ಕ್ರೀಡಾಕೂಟ ನಡೆಯುವ ಮೈದಾನದ ಪಕ್ಕದ ಶಾಲೆಯಲ್ಲಿ ಹಾಗೂ ಕ್ರೀಡಾಭಿಮಾನಿಗಳಿಗೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಾಡಲಾಗಿದೆ. ಕಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯೆ, ಶೇಂಗಾ ಹೋಳಿಗೆ ಸೇರಿದಂತೆ ನಾಲ್ಕು ದಿನ ಹತ್ತಾರು ಬೇರೆ ಬೇರೆ ತರಹದ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ೧೫ ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಮೈದಾನದ ಸಿದ್ಧತೆ:
ಕಳೆದ ೨೦ ದಿನಗಳಿಂದ ತಾಲ್ಲೂಕಿನ ನಾನಾ ಕಡೆಯಿಂದ ಆಗಮಿಸಿರುವ ೨೫ ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷಕರು ಮೈದಾನದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಕಟ್ಟಿಗೆಯ ಹೊಟ್ಟು ಹಾಗೂ ಕೆಂಪು ಮಣ್ಣು ತರಿಸಿ, ೪ ಖೋಖೋ ಮೈದಾನ ನಿರ್ಮಿಸಲಾಗಿದ್ದು, ಕ್ರೀಡಾಪಟುಗಳು ಹಾಗೂ ನಿರ್ಣಾಯಕರು ಮಾತ್ರ ಮೈದಾನದಲ್ಲಿರುವಂತೆ ಮೈದಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಮೂರು ಎಕರೆ ವಿಸ್ತೃತ ಮೈದಾನವನ್ನು ಸುತ್ತಲೂ ವಿದ್ಯುತ್ ದೀಪದಿಂದ ಕಂಗೊಳಿಸುವಂತೆ ದೀಪಾಲಂಕಾರ ಮಾಡಲಾಗಿದೆ. ಎರಡು ಬೃಹತ್ ಪೆಡ್ ಲೈಟ್ ವ್ಯವಸ್ಥೆ, ಕ್ಯಾಮರಾ ಕಣ್ಗಾವಲು ಇರಲಿದೆ. ನಾಲ್ಕು ಎಲ್ ಇಡಿ ಪರದೆ ಅಳವಡಿಸಲಾಗಿದ್ದು, ಅದರ ಮೂಲಕವೂ ಖೋಖೋ ಪಂದ್ಯಾವಳಿ ನೇರವಾಗಿ ವೀಕ್ಷಿಸಬಹುದು. ಪ್ರತಿ ಕ್ರೀಡಾಪಟುವಿಗೆ ಮೈದಾನದಲ್ಲಿಯೇ ಶಾಲು ಹೊದಿಸಿ ಸನ್ಮಾನಿಸಲಾಗುತ್ತಿದ್ದು, ಅವರಿಗೆ ಹಣ್ಣು, ನೀರಿನ ವ್ಯವಸ್ಥೆ ನಿರಂತರ ಇರಲಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೫ ಕ್ಕೂ ಅಧಿಕ ಪೊಲೀಸ್ ರನ್ನು ನಾಲ್ಕು ದಿನ ಕ್ರೀಡಾಕೂಟದ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಆಲಮಟ್ಟಿ ಪಿಎಸ್ ಐ ಎ.ಎಸ್. ಇಂಡಿಕರ ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳ ೫೦ ಕ್ಕೂ ಅಧಿಕ ದೈಹಿಕ ಶಿಕ್ಷಣ ಶಿಕ್ಷರು ನಿರ್ಣಾಯಕರಾಗಿ ಆಗಮಿಸಲಿದ್ದಾರೆ.
ಈ ಭಾಗದಲ್ಲಿ ನಡೆಯುತ್ತಿರುವ ಮೊದಲ ರಾಜ್ಯ ಮಟ್ಟದ ಕ್ರೀಡಾಕೂಟ ಇದು, ಹೀಗಾಗಿ ಅವಿಸ್ಮರಣೀಯಗೊಳಿಸಲು ೧೨ ಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗಿದ್ದು, ೫೦ ಕ್ಕೂ ಅಧಿಕ ಶಿಕ್ಷಕರ ಬಳಗ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ, ಮೇಲಾಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ, ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದರು.
