ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ‘ಹಾಸ್ಯಸಂಜೆ’ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಧಾವಂತದ ದಿನಗಳಲ್ಲಿ ನಮ್ಮತನದ ಸ್ವಾಭಿಮಾನ ಮಾನವೀಯತೆ ಮರೆತಿದ್ದೇವೆ. ದ್ಯಾನ, ದಾನ, ದಯೆ ಕಾಯಕ, ಅಂತಃಕರಣ ನಮ್ಮ ಉಸಿರಾಗಬೇಕು. ಕಷ್ಟದಲ್ಲಿ ಕೈ ಹಿಡಿದು ನೆರವಾದವರಿಗೆ ಪ್ರತಿಯಾಗಿ ನಾವೂ ಸಹಾಯ ಮಾಡಬೇಕು. ಕಳೆದ ವರ್ಷದ ಸಮಸ್ತ ದಿನಗಳು ಉತ್ತಮ ಅನುಭವಗಳೇ ಹೊಸ ವರ್ಷಕ್ಕೆ ಮಾರ್ಗದರ್ಶನವಾಗಲಿ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ನುಡಿದರು.
ಅವರು ವಿಜಯಪುರ ನಗರದ ಕೆ.ಎಸ.ಆರ್.ಟಿ.ಸಿ. ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಶಾರದಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ‘ಹಾಸ್ಯಸಂಜೆ’ ಉದ್ಘಾಟಿಸಿ ಮಾತನಾಡುತ್ತಾ, ಒತ್ತಡ ಜೀವನದಲ್ಲಿ ಆನಂದವಾಗಿರಲು ನಗುವೇ ದಿವ್ಯ ಔಷಧಿಯಾಗಿದೆ. ಎದುರಾಗುವ ಸಮಸ್ಯೆಗಳಿಗೆ ನಗುತ್ತಾ ಉತ್ತರಿಸಬೇಕು. ಸಾಧನೆಯಿಂದ ಎಷ್ಟೇ ಎತ್ತರಕ್ಕೆ ಬೆಳೆದರು ಕೂಡಾ ಸರ್ವರ ಹೃದಯಕ್ಕೆ ಹತ್ತಿರವಾದಾಗಲೇ ಜೀವನ ಸಾಫಲ್ಯ ಎಂದರು.
ಕಾರ್ಯಕ್ರಮ ಆಯೋಜಿಸಿದ ಎಕ್ಸಲಂಟ್ ಸಂಸ್ಥೆಯ ನಿರ್ದೇಶಕಿ ಪುಷ್ಪಾ ಬ. ಕೌಲಗಿ ಮಾತನಾಡಿ, ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮ ಎಂಬ ಕವಿವಾಣಿಯಂತೆ ನಾವೆಲ್ಲ ಸದಾ ಉಲ್ಲಾಸದಿಂದರಬೇಕು. ನಾಳೆಯ ಚಿಂತೆಯಲ್ಲಿ ಇಂದಿನ ಸಂತೋಷ ಕಳೆದುಕೊಳ್ಳಬಾರದು. ನಕ್ಕರೆ ಆರೋಗ್ಯ ವೃದ್ಧಿಸುತ್ತದೆ. ಮಾತ್ರವಲ್ಲ ಮಾನವ ಸಂಬಂಧ ಗಟ್ಟಿಗೊಳ್ಳುತ್ತವೆ. ವರ್ಷ ಕಳೆದು ಹೊಸ ವರುಷ ಬರುವುದು ಪ್ರಕೃತಿಯ ನಿಯಮ. ಹಳೆಯ ಸಂಸ್ಕಾರದ ಬೇರುಗಳ ಮೇಲೆಯೇ ನಮ್ಮ ಬದುಕಿನ ಬಳ್ಳಿಯ ಹೊಸ ಹೂವು ಅರಳುವುದು. ವಿದ್ಯಾರ್ಥಿಗಳು ಓದು ಬರಹದೊಂದಿಗೆ ಮನರಂಜನಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿಯವರು, ನಗುವಿನಲ್ಲಿ ಹಲವಾರು ಪ್ರಕಾರಗಳಿವೆ. ವ್ಯಂಗ್ಯ ಅಪಹಾಸ್ಯ ಅತಿರೇಕದ ನಗುವನ್ನು ಬಿಡಬೇಕು. ಹಸಿದವರಿಗೆ ಅನ್ನ ಹಾಕಿದರೆ ಅವರಲ್ಲಿ ಕೃತಜ್ಞತೆಯ ನಗು ಬರಲು ಸಾಧ್ಯ. ಹಳೆಯ ವರ್ಷದ ಜೊತೆಗೆ ಕೋಪ, ವೈಷಮ್ಯ, ಸ್ವಾರ್ಥ, ಸಣ್ಣತನ ತೊಲಗಬೇಕು. ಪರಿಸರ ಸಂರಕ್ಷಣೆ ಕಥೆ, ಕವನ, ಬರೆಯುವ, ರೈತ ಮಹಿಳೆಯರಿಗೆ ಗೌರವಿಸಿ ಸತ್ಕರಿಸುವ ಹಾಗೂ ಈ ನೆಲದ ಸಂಸ್ಕೃತಿ ಬೆಳೆಸುವ ಜೊತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಪಡೆಯುವ ಸಂಕಲ್ಪ ತೊಡಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯೂಟ್ಯೂಬರ್ ಮಿಮಿಕ್ರಿ ಮಾಳು ಅನೇಕ ಕಲಾವಿದರ ದ್ವನಿ ಅನುಕರಣೆ ಹಾಗೂ ಕನ್ನಡ ಚಿತ್ರಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಹಾಗೂ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಹಾಗೂ ಉಪನ್ಯಾಸಕರು, ವಸತಿ ನಿಲಯದ ಮೇಲ್ವಿಚಾರಕರು ಪಾಲ್ಗೊಂಡಿದರು.
ಕುಮಾರಿ ಶೃತಿ ವಾಲಿಕಾರ ಪ್ರಾರ್ಥಿಸಿದಳು. ಉಪನ್ಯಾಸಕರಾದ ವಿರೇಶ ಕಂಬಿ ನಿರ್ವಹಿಸಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ರಮೇಶ ಬಾಗೇವಾಡಿ ನಿರೂಪಿಸಿದರು. ಎಮ್.ಎಮ್. ಮಲಘಾಣ ವಂದಿಸಿದರು.

