ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಗರದ ಸಿದ್ದೇಶವರ ಸಂಸ್ಥೆಯ ಶಿವಾನುಭವ ಮಂಟಪ, ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಜ.೧೧ ರಿಂದ ೨೦ ರವರೆಗೆ ಸಾಬೂನು ಮೇಳ ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಎಂದು ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ ಪಿ.ಕೆ.ಎಮ್ ಹೇಳಿದರು.
ಶುಕ್ರವಾರದಂದು ನಗರದ ಖಾಸಗಿ ಹೊಟೇಲ್ ಒಂದರಲ್ಲಿ, ಸೋಪ್ ಮೇಳ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಸೋಪ್ ಮೇಳ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ವಿಜಯಪುರದಲ್ಲಿ ಸೋಪ್ ಮೇಳ ಆಯೋಜನೆ ಮಾಡಲಾಗಿದೆ. ಮೇಳವು ಜ.೨೦ ರವರೆಗೆ ಪ್ರತಿ ದಿನ ಬೆಳಿಗ್ಗೆ ೯.೩೦ ಗಂಟೆಯಿಂದ ರಾತ್ರಿ ೯.೩೦ ರವರೆಗೆ ನಡೆಯಲಿದೆ ಎಂದರು.
ಸಾಬೂನು ಮೇಳದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೆಟ್ ವಿಶೇಷ ಆಕರ್ಷಣೆಯನ್ನಾಗಿ ಮಾಡಲಾಗಿದ್ದು, ಸಂಸ್ಥೆ ಉತ್ಪಾದಿಸುತ್ತಿರುವ ೪೮ ಕ್ಕೂ ಹೆಚ್ಚು ಉತ್ಕುರ್ಷ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಈ ಮೇಳದಲ್ಲಿ ಗ್ರಾಹಕರು ವಿಶೇಷ ರಿಯಾಯತಿ ದರದಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದಾಗಿರುತ್ತದೆ. ಸಂಸ್ಥೆಯ ಉತ್ಪನ್ನಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಮೈಸೂರು ಸ್ಯಾಂಡಲ್ ಗಿಫ್ಟ್ ಪ್ಯಾಕ್, ಮೈಸೂರು ಸ್ಯಾಂಡಲ್ ಗೋಲ್ಡ್, ಮೈಸೂರು ಸ್ಯಾಂಡಲ್ ಗೊಲ್ಡ್ ಸಿಕ್ಸರ್, ಮೈಸೂರು ಸ್ಯಾಂಡಲ್ ದೂಪ್, ಮೈಸೂರು ಸ್ಯಾಂಡಲ್ ಅಗರಬತ್ತಿಗಳು, ಹರ್ಬಲ್ ಹ್ಯಾಂಡ್ ವಾಷ್, ಕೀನಾಲ್, ಬೇಬಿ ಸಾಬೂನು, ಸದಯಾಂಡಲ್ ಆಯಿಲ್, ಸ್ಯಾಂಡಲ್ ಕಾಬೋಲಿಕ್, ವಾಷಿಂಗ್ ಬಾರ್ ಸಾಬೂನು, ಮೈಸೂರು, ಮಾರ್ಜಕ ಬಿಲ್ಲೆ ಇವು ಎಲ್ಲಾ ವರ್ಗಗಳ ಗ್ರಾಹಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆನರಲ್ ಮ್ಯಾನೇಜರ್ ಗಂಗಪ್ಪಾ ಹಾಗೂ ವ್ಯವಸ್ಥಾಪಕ ರಮೇಶ ಇದ್ದರು.

