ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇಂದ್ರ ಸಚಿವ ಅಮಿತ್ ಷಾ ಅವರು ಡಾ. ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಾರೆ. ಜಿಲ್ಲೆಯ ಸಂಸದರಾದ ರಮೇಶ್ ಜಿಗಜಿಣಿ ಅವರು ಕೇಂದ್ರ ಸಚಿವರ ಮಾತನ್ನ ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ವಿಜಯೇಂದ್ರ ಅವರು ಖರ್ಗೆ ಅವರು ನನಗೆ ಸುಪಾರಿ ನೀಡಿದ್ದಾರೆ ಎನ್ನುವ ಮಾತು ಅವರ ಹುದ್ದೆಗೆ ಘನತೆ ತರುವಂತ ವಿಚಾರವಲ್ಲ. ಇಂಥಹ ಮಾತುಗಳು ರಾಜ್ಯದ ಜನ ಆಲಿಸುತ್ತಿದ್ದಾರೆ ಮತ್ತು ಬಿಜೆಪಿಯವರನ್ನೇ ಮಾತನಾಡಿಕೊಳ್ಳುತ್ತಿದ್ದಾರೆ. ರಾಜಕಾರಣ ಸತ್ಯ ಮತ್ತು ಸಂವಿಧಾನ ಬದ್ಧವಾಗಿ ಇರಬೇಕೆ ಹೊರತು ಅಸಂಬದ್ಧ ಮಾತುಗಳು ಅಸಂಬದ್ಧ ವಿಚಾರಗಳನ್ನ ಒಳಗೊಂಡಿರಬಾರದು. ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ಮಾಡುತ್ತಿರುವ ಆರೋಪಗಳನ್ನ ತಕ್ಷಣವೇ ಬಿಜೆಪಿ ಮುಖಂಡರು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆಯ ಸಹನೆ ಮಿತಿಮೀರುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡೆತ್ ನೋಟದಲ್ಲಿ ಸಚಿವರ ಹೆಸರಿಲ್ಲ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದಾಗ ಬಿಜೆಪಿ ಅವರು ನಡೆಸುತ್ತಿರುವ ಆರೋಪ ನೈತಿಕವಾಗಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಮುಖಂಡರು ರಾಜಕೀಯ ಜ್ಞಾನವಿಲ್ಲದೆ ಅವರು ಮಾತನಾಡುತ್ತಿದ್ದಾರೆ. ಸಂವಿಧಾನದ ಬದ್ಧತೆಯ ಮೇಲೆ ಪಾರದರ್ಶಕವಾಗಿ ಆಡಳಿತ ಮಾಡುತ್ತಿರುವ ರಾಜ್ಯ ಸರ್ಕಾರದ ಮೇಲೆ ಸುಖಾಸುಮ್ಮನೆ ಬಿಜೆಪಿಯವರು ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನತೆಯ ಆಶೀರ್ವಾದ ಇರುವವರೆಗೂ ರಾಜ್ಯ ಸರ್ಕಾರಕ್ಕೆ ಯಾವ ಕಂಠಕವೂ ಬರುವುದಿಲ್ಲ ಎಂದ ಅವರು ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಮಾನಸಿಕ ಕಿರುಕುಳ ನೀಡಿದರು, ಅದು ಸತ್ಯವಾಯಿತೆ ಎಂದು ಪ್ರಶ್ನಿಸಿದರು. ಸಿ.ಟಿ.ರವಿ ಅವರು ಮಹಿಳಾ ಸಚಿವೆಯ ಮೇಲೆ ಇಲ್ಲಸಲ್ಲದ ಮಾತುಗಳನ್ನಾಡಿ ಸಚಿವೆಯನ್ನು ಅವಮಾನಿಸಿದ್ದಾರೆ. ಇದು ಕೇವಲ ಒಬ್ಬ ಮಹಿಳೆಯ ಅಪಮಾನವಲ್ಲ ಇಡೀ ರಾಜ್ಯದ ಮಹಿಳೆಯರಿಗೆ ಮಾಡಿದ ದೊಡ್ಡ ಅಪಮಾನವಾಗಿದೆ.
ಈ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ವಾಯ್.ಸಿ.ಮಯೂರ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ನಡೆಸುತ್ತಿರುವ ಆರೋಪಗಳು ಸಾಬೀತಾಗಿದ್ದರೆ ಬಿಜೆಪಿಗರು ಅದರ ಮಾಹಿತಿಯನ್ನು ನೀಡಲಿ. ಒಬ್ಬ ದಲಿತ ಮುಖಂಡನ ಮೇಲೆ ಮತ್ತು ಪ್ರಭಾವಿ ಸಚಿವರ ಮೇಲೆ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿ ಅವರ ಮನೆ ಮುತ್ತಿಗೆ ಹಾಕುವುದು, ಪ್ರತಿಭಟಿಸುತ್ತಿರುವುದು ನಾವು ನೋಡಿ ಸುಮ್ಮನಿರಬೇಕೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆದಿಯಾಗಿ ಸಚಿವ ಪ್ರಿಯಾಂಕ ಖರ್ಗೆ ಅವರ ಹಿಂದೆ ಬೆನ್ನೆಲುಬಾಗಿ ನಿಂತಿರುವುದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎಮ್.ಎ.ಖತೀಬ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ರಮೇಶ ನಡುವಿನಕೇರಿ, ಶ್ರೀಕಾಂತ ಸೋಮಜಾಳ ಸೇರಿದಂತೆ ಅನೇಕರಿದ್ದರು.
” ಬೀದರ್‌ನ ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆ ವಿಚಾರವಾಗಿ ರಾಜ್ಯ ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟಿಸುತ್ತಿರುವುದು ಯಾವ ನ್ಯಾಯ. ಸಚಿವ ಪ್ರಿಯಾಂಕ ಖರ್ಗೆ ಅವರಿಗೂ ಮತ್ತು ಆ ಆತ್ಮಹತ್ಯೆ ಪ್ರಕರಣಕ್ಕೂ ಏನು ಸಂಬಂಧ ಅದನ್ನು ರಾಜ್ಯ ಬಿಜೆಪಿ ನಾಯಕರು ಸಾಬೀತು ಪಡಿಸಲಿ.”
– ಅಶೋಕ ಮನಗೂಳಿ ಶಾಸಕರು

