ಖೇಡ ಕಾಲೇಜ್ ದ್ವೀತಿಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಲ್ಲೆಲ್ಲೂ ಯುವಜನತೆಯ ಕೈಯಲ್ಲಿಂದು ಸ್ಕ್ರೀನ್ ಟಚ್ ಮೊಬೈಲ್ ರಾರಾಜಿಸುತ್ತಿವೆ.ಮೊಬೈಲ್ ಗುಂಗು ತೆಲೆ ಕಡಿಸಿವೆ. ಮೊಬೈಲ್ ವ್ಯಾಮೋಹದ ಹಾವಳಿ ಅಧಿಕಗೊಂಡಿದೆ. ವ್ಯಾಪಕವಾಗಿ ಅದು ನರ್ತನದೊಂದಿಗೆ ನಲಿದಾಡುತ್ತಿದೆ.ಇದು ಅಷ್ಟೊಂದು ಸರಿಯಾದ ಕ್ರಮವಲ್ಲ. ಹೊತ್ತು ಗೊತ್ತಿಲ್ಲದೇ ದಿನವಿಡೀ ಮೊಬೈಲ್ ದಲ್ಲಿ ಕಾಲಹರಣ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲೂ ಯುವಪೀಳಿಗೆ ಮೊಬೈಲ್ ಮಾಯಾಂಗನೆಯ ಸೆಳತಕ್ಕೆ ಒಳಗಾಗಿ ತಮ್ಮ ಸುಂದರ ಭವಿಷ್ಯ ಹಾಳುಗೆಡವುತ್ತಲ್ಲಿದ್ದಾರೆ. ಇದರಿಂದ ಪಾಲಕ, ಪೋಷಕರು ಹಾಗೂ ಶಿಕ್ಷಕ ಸಮೂಹ ತೀವ್ರ ಆತಂಕ ಪಡುವುಂಥ ದುಸ್ಥಿತಿ ಬಂದೊದಗಿರುವುದು ದುರದೃಷ್ಟಕರ ಎಂದು ವಿಜಯಪುರ ಸಿಕ್ಯಾಬ್ ಬಾಲಕಿಯರ ಪಪೂ ಕಾಲೇಜ್ ಹಿರಿಯ ಉಪನ್ಯಾಸಕ ಉಮರ ಶರೀಫ್ ಕುಂಟೋಜಿ ವಿಷಾಧಿಸಿದರು.
ಬಿಜಾಪುರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ವಿಜಯಪುರದ ಎಸ್.ಕೆ.ವಿ.ಎಂ.ಎಸ್. ಕಲಾ,ವಾಣಿಜ್ಯ, ವಿಜ್ಞಾನ ಪದವಿಪೂರ್ವ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಇಂದಿನ ಯುವಜನತೆ ಹತ್ತು ಮೊಬೈಲ್ ಕವರ್ ಚೇಂಜ್ ಮಾಡುವ ಬದಲು ಪಠ್ಯ ಪುಸ್ತಕದ ಕವರ್ ಚೇಂಜ್ ಮಾಡಿದರೆ ಉತ್ತಮ. ಇದರಿಂದ ಬದುಕು, ಭವಿಷ್ಯತ್ತಿನ ಕವರೇಜ್ ವಿಪುಲವಾಗಿ ತೆರೆದುಕೊಳ್ಳುತ್ತದೆ. ಕಂಡ ಕನಸು ನನಸಾಗುತ್ತದೆ.ಆದರ್ಶಪ್ರಾಯ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಜೀವನೋತ್ಸಾಹ ಇಮ್ಮಡಿವಾಗುತ್ತದೆ. ಇಡೀ ಬದುಕಿನ ಪಯಣ ನೆಮ್ಮದಿಯ ರಸಗವಳದಲ್ಲಿ ಮಿನುಗುತ್ತದೆ.ಇಂಥದೊಂದು ಸನ್ನಿವೇಶ ಅತ್ಯದ್ಭುತ ಚೇಂಜ್ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮೊಬೈಲ್ ಗೀಳು ತೊರೆದರೆ ಮಾತ್ರ ಸಕಲರಿಗೂ ಸುಖೋನ್ನತಿ ಪ್ರಾಪ್ತಿ. ಮೊಬೈಲ್ ದಲ್ಲಿ ಕಳೆಯುವ ಸಮಯ ಪುಸ್ತಕಕ್ಕೆ ಮೀಸಲಿಟ್ಟರೆ ಬದುಕು ಹಸನ. ಪುಸ್ತಕ ಓದಾಭ್ಯಾಸದ ವ್ಯಾಮೋಹ ಮಸ್ತಕಕ್ಕೆ ಇಳಿದರೆ ಜೀವನೋಲ್ಲಾಸ ಕಾಣಬಹುದು ಎಂದರು.
ಬಹುತೇಕ ಶಾಲಾ, ಕಾಲೇಜ್‌ನ ಬಾಲಕ, ಬಾಲಕಿಯರು ಯಾರ ಭಯಭೀತಿಯಿಲ್ಲದೇ ಮೊಬೈಲ್‌ಗೆ ಮಾರಿ ಹೋಗಿದ್ದಾರೆ. ಅವರು ಮೊಬೈಲ್ ಸದುಪಯೋಗಕ್ಕೆ ಬಳಿಸಿಕೊಳ್ಳುತ್ತಿರುವುದು ವಿರಳ.ಅದು ಹೆಚ್ಚಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸ್ವಚ್ಚಾಚಾರದ ನಾಗಾಲೋಟ ಅಧಿಕಗೊಳ್ಳುತ್ತಿದೆ. ಕೆಟ್ಟ ಸಂಸ್ಕೃತಿಯಡೆಗೆ ವಾಲುತ್ತಿದ್ದಾರೆ. ದಾರಿ ತಪ್ಪಿದ ಮಕ್ಕಳಾಗಿ ವಿಚಿತ್ರ ರೀತಿಯಲ್ಲಿ ಅನೇಕ ಯುವಪೀಳಿಗೆ ನಡೆ ಸಾಗುತ್ತಿದೆ. ಹಲ ಯುವಜನತೆ ಸಮಾಜಕ್ಕೆ ವಿಭಿನ್ನವಾಗಿ ಕಂಟಕರಾಗಿ ಗೋಚರಿಸುತ್ತಿದ್ದಾರೆ. ಊಹೆಗೂ ಮೀರಿ ಸುಸಂಸ್ಕೃತ ವಾತಾವರಣದ ದಾರಿ ತಪ್ಪಿಸುತ್ತಿರುವ ಈ ಮೊಬೈಲ್ ಸಂಸ್ಕೃತಿಗೆ ಇಷ್ಟೊಂದು ಹಪಾಹಪಿಯ ಚಟಾದಿ ನಮ್ಮ ಭವಿಷ್ಯತ್ತಿನ ಇಂದಿನ ಯುವಜನತೆ ಪಳಗಿಸಿಕೊಂಡಿರುವುದು ನಿಜಕ್ಕೂ ನೋವಿನ ಸಂಗತಿ. ಮೊಬೈಲ್ ದಿಂದ ಶಿಕ್ಷಣದ ಅಭ್ಯಾಸ ಮಾಯವಾಗುತ್ತಿದೆ. ಬಂದು,ಬಳಗ, ಸ್ನೇಹತ್ವದ ಅನ್ಯೋನ್ಯತೆ ಸಂಬಂಧ ಕಳೆದುಕೊಳ್ಳುತ್ತಲ್ಲಿದ್ದೇವೆ ಎಂದರು.
ಡಾ,ಬಾಬಾ ಸಾಹೇಬ್ ಅಂಬೇಡ್ಕರ್, ಡಾ,ಅಬ್ದುಲ್ ಕಲಾಂ ರಂಥ ಮಹಾನ ನಾಯಕರು ಕಡು ಬಡತನದಲ್ಲಿ ಜನ್ಮತಾಳಿ ಹೆಜ್ಜೆ ಹೆಜ್ಜೆಗೂ ಬೆಂದು ನೊಂದು ಸಾಧಕರಾಗಿ ಮಿನುಗಿದ್ದಾರೆ.ಇಡೀ ಜಗತ್ತೇ ತಮ್ಮತ್ತ ನೋಡುವಂತೆ ಅಪ್ರತಿಮ ಸಾಧನೆ ಮಾಡಿದ್ದಾರೆ. ಇಂಥ ಮಹಾನುಭಾವರ ಆದರ್ಶದ ಗುಣಗಳನ್ನು ಅಳವಡಿಸಿಕೊಂಡು ಸಾಧಕರಾಗಲು ಯುವಜನತೆ ಪ್ರಯತ್ನಿಸಬೇಕು. ಅಂಬೇಡ್ಕರ್, ಕಲಾಂ ಅವರಂಥ ಸಾಧಕ ರತ್ನ ಮಣಿಗಳೇ ನಿಮಗೆಲ್ಲ ರೋಲ್ ಮಾಡೆಲ್ ಆಗಿದ್ದಾರೆ ಎಂದರು.
ಗುರು,ಹಿರಿಯರ ವೇದ ವಾಕ್ಯದಲ್ಲಿ ನಿಮ್ಮೆಲ್ಲರ ಹಿತ ಅಡಗಿದೆ.ಕಾರಣ ಅವರ ನುಡಿಗಟ್ಟು ಆಲಿಸಿ ಪಾಲಿಸಬೇಕು. ಶಿಕ್ಷಕರು ತಮ್ಮನ್ನು ತಾವು ಮೇಣದ ಬತ್ತಿ ಹಾಗೆ ಸುಟ್ಟುಕೊಂಡು ಮಕ್ಕಳ ಬಳಗಕ್ಕೆ ನವತನದ ಬೆಳಕು ಚೆಲ್ಲುತ್ತಾರೆ. ಅವರಿಗೆ ನಿಮ್ಮ ಶೈಕ್ಷಣಿಕ ಪ್ರಗತಿಯೇ ಮುಖ್ಯ ಹೊರತು ಬೆರೆನು ಇಲ್ಲ. ಯಾರು ಶ್ರದ್ಧೆ, ಆಸಕ್ತಿಯಿಂದ ಮನಸ್ಸು ಕೊಟ್ಟು ಓದು,ಬರಹದಲ್ಲಿ ತೋಡಗುತ್ತಾರೋ ಅವರೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ಅಂದಾಗ ಒಳ್ಳೆಯ ಪ್ರತಿಫಲನದ ಚೌಕಟ್ಟಿನ ನೋಟ ಪ್ರತಿಬಿಂಬಿಸಲು ಸಾಧ್ಯ. ಜಾತಿ,ಮಥ,ಪಂಥ ತಲೆಯಿಂದ ಮೊದಲು ತಗೆದು ಹಾಕಿ ಎಂದು ಯುವ ಸಮೂಹಕ್ಕೆ ಸಲಹೆ ನೀಡಿದರು.
ಖೇಡ ಸಂಸ್ಥೆ ಕಾಲೇಜು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ.ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೌಭಾಗ್ಯವಂತರು. ಪಿಯುಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ.ಉತ್ತಮ ಅಭ್ಯಾಸದೊಂದಿಗೆ ಈ ಬಾರಿಯ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿ ಎಂದು ಮಕ್ಕಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಲಮಟ್ಟಿ ಎಂ.ಎಚ್.ಎಂ.ಪ್ರೌಢಶಾಲೆಯ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಮಾತನಾಡಿ, ಯುವಜನತೆಗೆ ನಯ,ವಿನಯ,ಮೃದುತ್ವದ ಸ್ವಭಾವ ಅತ್ಯಗತ್ಯ. ಒಳ್ಳೆಯ ವಿಚಾರ,ಭಾವದಿಂದ ಪ್ರಾಮಾಣಿಕತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕ್ರಿಯಾಶೀಲತೆಯಿಂದ ಸೃಜನಾತ್ಮಕವಾದ ಅಕ್ಷರ ಬರವಣಿಗೆ ಮೈಗೂಡಿಸಿಕೊಂಡು ಉನ್ನತಿ ಕಾಣಬೇಕು. ಅನ್ಯ ವಿಷಯಗಳಿಗೆ ಮಹತ್ವ ನೀಡದೆ ಪಠ್ಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಯಶಸ್ಸು ಕಾಣಬೇಕು. ದೃಷ್ಟಿ ಗೋಚರದ ಚಿಂತನ,ಮಂಥನ ಒಳಿತಿನೆಡೆಗೆ ಸದಾ ಸಾಗುತ್ತಿರಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಬಿ.ಡಿ.ಪಿ.ಎಚ್.ಡಬ್ಲ್ಯೂ ಅಧ್ಯಕ್ಷ ಎಸ್.ಎಸ್.ಅಗರಖೇಡ ಮಾತನಾಡಿ, ಯುವಜನತೆಗೆ ಸಭ್ಯತೆಯೇ ಭೂಷಣ. ಸನ್ನಡತೆಯೊಂದಿಗೆ ಸಮಾಜದ ಋಣಿಯಾಗಿ.ಪಿಯುಸಿ ಕಲಿಕಾ ಪಯಣ ಆತ್ಮವಿಶ್ವಾಸದ ಪ್ರಭುತ್ವದಿಂದ ಸ್ಮರಣೀಯವಾಗಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ವಿಜಯಪುರ ಬಿ.ಡಿ.ಪಿ.ಎಚ್.ಡಬ್ಲ್ಯೂ ವೆಲ್ಪೇರ್ ಟ್ರಸ್ಟ್ ಅಧ್ಯಕ್ಷ ವಿನೋದ ಖೇಡ, ನಿರ್ದೇಶಕ ವಿಜಯಕುಮಾರ ಖೇಡ, ವಿಕಾಸ ಖೇಡ, ವಿಜಯಪುರ ಎಸ್.ಕೆ.ವ್ಹಿ.ಎಂ.ಎಸ್.ಪಪೂ ಕಾಲೇಜ್ ನೋಡಲ್ ಅಧಿಕಾರಿ ಶಂಕರ ಭಾವಿಕಟ್ಟಿ ಪ್ರಾಚಾರ್ಯ ಎಂ.ಡಿ.ಹೆಬ್ಬಿ, ಹಿರಿಯ ಶ್ರೇಣಿ ಉಪನ್ಯಾಸಕ ಆರ್.ವ್ಹಿ.ಪಟ್ಟಣದ, ಐಐಟಿ ಕಾಲೇಜಿನ ಗೌಡರ,ಪಾಟೀಲ, ಪಂಪಾಪತಿ, ಬೊಮ್ಮನಳ್ಳಿ ಸೇರಿದಂತೆ ಕಾಲೇಜು ಉಪನ್ಯಾಸಕ ಸಿಬ್ಬಂದಿ ಇತರರಿದ್ದರು.
ಪ್ರಾಚಾರ್ಯ ಎಂ.ಡಿ.ಹೆಬ್ಬಿ ಸ್ವಾಗತಿಸಿದರು. ಲಕ್ಷ್ಮೀ ಸಂಗಡಿಗರು ಪ್ರಾರ್ಥಿಸಿದರು.ಸರೋಜನಿ ಕಾಂಬಳೆ ನಿರೂಪಿಸಿದರು.

