ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ಸ್ಥಾನಗಳಿಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರದಿಂದ ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ (೪೯ಮತ), ಸಾತಿಹಾಳ ಸಾಲಗಾರ ಪರಿಶಿಷ್ಟ ಪಂಗಡ ಭಾಗ-೫ ಕ್ಷೇತ್ರದಿಂದ ಅಯ್ಯಪ್ಪ ತಿಪ್ಪಣ್ಣ ನಂದಿಹಾಳ (೨೩ಮತ), ಯಾಳವಾರ ಸಾಲಗಾರ ಸಾಮಾನ್ಯ ಭಾಗ-೬ ಕ್ಷೇತ್ರದಿಂದ ಸಾಹೇಬಗೌಡ ಶಾಂತಪ್ಪ ಉತ್ನಾಳ(೧೩ಮತ), ಹೂವಿನಹಿಪ್ಪರಗಿ ಸಾಲಗಾರ ಸಾಮಾನ್ಯ ಭಾಗ-೩ ಕ್ಷೇತ್ರದಿಂದ ಗಿರೀಶ ಬಸಣ್ಣ ಚಿಮ್ಮಲಗಿ(೨೬ಮತ), ಕುದರಿಸಾಲವಾಡಗಿ ಸಾಲಗಾರ ಮಹಿಳಾ ಭಾಗ-೪ ಕ್ಷೇತ್ರದಿಂದ ಶಂಕ್ರೆಮ್ಮ ಶಶಿಕಾಂತ ಗೌಡರ(೧೮ಮತ) ಪಡೆದುಕೊಂಡಿದ್ದು. ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಇದರ ಫಲಿತಾಂಶವನ್ನು ಕಲಬುರಗಿ ಉಚ್ಛನ್ಯಾಯಾಲಯದ ಪೀಠದಲ್ಲಿ ದಾಖಲಾಗಿರುವ ಪ್ರಕರಣದ ಮುಂದಿನ ಆದೇಶಕ್ಕೆ ಒಳಪಟ್ಟು ಘೋಷಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚೇತನ್ ಭಾವಿಕಟ್ಟಿ ಘೋಷಿಸಿದರು.
ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ೧೩ ಆಡಳಿತ ಮಂಡಳಿ ಸದಸ್ಯ ಬಲ ಹೊಂದಿದೆ. ೧೩ ಸದಸ್ಯ ಬಲದಲ್ಲಿ ೮ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ೫ ಸ್ಥಾನಗಳಿಗೆ ಸ್ಪರ್ಧೆ ನಡೆದ ಹಿನ್ನೆಲೆಯಲ್ಲಿ ೫ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.
ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ವಿವರಃ ಬಸವನಬಾಗೇವಾಡಿ ಪರಿಶಿಷ್ಟ ಜಾತಿ ಸಾಲಗಾರ ಭಾಗ-೧ ಕ್ಷೇತ್ರದಿಂದ ಬಾಬು ಸೀತಾರಾಮ ಲಮಾಣಿ, ನರಸಲಗಿ ಸಾಲಗಾರ ಹಿಂದುಳಿದ ವರ್ಗ ಅ ಭಾಗ-೨ ಕ್ಷೇತ್ರದಿಂದ ಬಸಪ್ಪ ಚಂದಪ್ಪ ರಡ್ಡಿ, ಇಂಗಳೇಶ್ವರ ಸಾಲಗಾರ ಸಾಮಾನ್ಯ ಭಾಗ-೭ ಕ್ಷೇತ್ರದಿಂದ ಸಿದ್ರಾಮಪ್ಪ ಸಂಗಪ್ಪ ಎಮ್ಮಿ, ಮನಗೂಳಿ ಸಾಲಗಾರ ಮಹಿಳಾ ಭಾಗ-೮ ಕ್ಷೇತ್ರದಿಂದ ಉಮಾಬಾಯಿ ಗಿರಿಮಲ್ಪ ವಿವೇಕಿ, ಮುಳವಾಡ ಸಾಲಗಾರ ಸಾಮಾನ್ಯ ಭಾಗ-೯ ಕ್ಷೇತ್ರದಿಂದ ಅಣ್ಣಾಸಾಹೇಬ ಅಪ್ಪಾಸಾಹೇಬ ಬಿರಾದಾರ, ಕೂಡಗಿ ಸಾಲಗಾರ ಹಿಂದುಳಿದ ವರ್ಗ ಬ ಭಾಗ-೧೦ ಕ್ಷೇತ್ರದಿಂದ ಹುಚ್ಚಪ್ಪ ಸಂಗಪ್ಪ ಬಾಟಿ, ಹೆಬ್ಬಾಳ ಸಾಲಗಾರ ಸಾಮಾನ್ಯ ಭಾಗ-೧೧ ಕ್ಷೇತ್ರದಿಂದ ರಾಮನಗೌಡ ಭೀಮನಗೌಡ ಪಾಟೀಲ, ಗೊಳಸಂಗಿ ಸಾಲಗಾರ ಸಾಮಾನ್ಯ ಭಾಗ-೧೩ ಕ್ಷೇತ್ರದಿಂದ ದಯಾನಂದ ಮಲ್ಲಪ್ಪ ಹೆಬ್ಬಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರಕ್ಕೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಈ ಕ್ಷೇತ್ರದಿಂದ ಈರಣ್ಣ ಪಟ್ಟಣಶೆಟ್ಟಿ, ಮಲ್ಲಪ್ಪ ಹಾರಿವಾಳ ಅವರು ಸ್ಪರ್ಧೆ ಮಾಡಿದ್ದರು. ಇದರಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಈರಣ್ಣ ಪಟ್ಟಣಶೆಟ್ಟಿ ೪೯ ಮತಗಳನ್ನು ಪಡೆದು ಮೂರನೇ ಬಾರಿಗೆ ಮರುಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಮಲ್ಲಪ್ಪ ಹಾರಿವಾಳ ೩೧ ಮತಗಳನ್ನು ಪಡೆದು ಪರಾಭವ ಗೊಂಡರು.
ವಿಜಯೋತ್ಸವ: ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಈರಣ್ಣ ಪಟ್ಟಣಶೆಟ್ಟಿ ಅವರು ಮರುಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಹಿತೈಷಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯ ಜನರು ಪರಸ್ಪರ ಗುಲಾಲು ಎರಚಿ ಪಟಾಕ್ಷಿ ಸಿಡಿಸಿ ಅವರನ್ನು ಮೆರವಣಿಗೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದ್ದು ಕಂಡುಬಂದಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಜರುಗಿತು.
ಈರಣ್ಣ ಪಟ್ಟಣಶೆಟ್ಟಿ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ, ಕಳೆದ ೨೦ ವರ್ಷಗಳಿಂದ ರೈತ ಬಾಂಧವರ ನಿಸ್ವಾರ್ಥ ಸೇವೆ ಮಾಡಿದ ಪ್ರತಿಫಲವಾಗಿ ರೈತರು ಪಿಎಲ್‌ಡಿಇ ಬ್ಯಾಂಕಿಗೆ ಮೂರನೇ ಅವಧಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಾನು ಈ ಚುನಾವಣೆಯಲ್ಲಿ ಯಾರ ಮುಂದೆಯೂ ಮತ ನೀಡುವಂತೆ ಹೇಳದೇ ಇದ್ದರೂ ನನ್ನ ಸೇವೆ ಗುರುತಿಸಿ ಮತಬಾಂಧವರು ಮರು ಆಯ್ಕೆ ಮಾಡಿರುವದು ನನಗೆ ಸಂತೃಪ್ತಿ ತಂದಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಹೆಚ್ಚಿನ ಸೇವೆ ಸಲ್ಲಿಸಲು ಸದಾ ಬದ್ಧ. ಉಳಿದ ೧೨ ಸ್ಥಾನಗಳಿಗೂ ನಮ್ಮವರೇ ಆಯ್ಕೆಯಾಗಿದ್ದಾರೆ. ಕಲಬುರಗಿ ಉಚ್ಛನ್ಯಾಯಾಲಯದ ಪೀಠಕ್ಕೆ ಹೋದ ಪ್ರಕರಣದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅದರ ಮತಎಣಿಕೆ ಬಂದರೂ ಯಾವುದೇ ಪರಿಣಾಮ ಬೀರದು. ನಮ್ಮ ವಿಜಯ ನಿಶ್ಚಿತವೆಂದರು.
ವಿಜಯೋತ್ಸವದಲ್ಲಿ ಮುಖಂಡರಾದ ಸಂಗಣ್ಣ ಕಲ್ಲೂರ, ಶಂಕರಗೌಡ ಬಿರಾದಾರ, ಲೋಕನಾಥ ಅಗರವಾಲ, ರವಿ ಪಟ್ಟಣಶೆಟ್ಟಿ, ಮಹಾಂತೇಶ ಆದಿಗೊಂಡ, ಸಂಕನಗೌಡ ಪಾಟೀಲ, ಸಿ.ಎಸ್.ಪಾಟೀಲ, ಎಂ.ಬಿ.ತೋಟದ, ಸುರೇಶಗೌಡ ಪಾಟೀಲ, ಹರೀಶ ಅಗರವಾಲ, ರವಿ ರಾಠೋಡ, ಕಾಶೀನಾಥ ರಾಠೋಡ, ವ್ಹಿ.ಬಿ.ಮರ್ತುರ,ಸಾಹೇಬಗೌಡ ಉತ್ನಾಳ, ರಮಜಾನ ಮುಜಾವರ,ಗುರುನಗೌಡ ಪಾಟೀಲ, ಸಿದ್ರಾಮಪ್ಪ ಪಾತ್ರೋಟಿ, ಸಂಗಯ್ಯ ಕಾಳಹಸ್ತೇಶ್ವರಮಠ, ಅಶೋಕ ಗುಳೇದ, ಮಲ್ಲು ಒಡೆಯರ, ಶ್ರೀಕಾಂತ ಪಟ್ಟಣಶೆಟ್ಟಿ, ಪ್ರಕಾಶ ಪಡಶೆಟ್ಟಿ, ಶಾಂತು ಪಡಶೆಟ್ಟಿ, ದಸ್ತಗೀರ ವಜ್ಜಲ, ಮನ್ನಾನ ಶಾಬಾದಿ, ಸಂಗಮೇಶ ಜಾಲಗೇರಿ, ಸಂಗನಗೌಡ ಚಿಕ್ಕೊಂಡ ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.
ಬಾಕ್ಸ್
ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರದಲ್ಲಿ ಒಟ್ಟು ೮೯ ಮತದಾರರು ಇದ್ದರು. ಮತದಾನದ ಹಕ್ಕಿನಿಂದ ವಂಚಿತರಾದ ೨೦ ಜನ ಮತದಾರರು ಕಲಬುರಗಿ ಉಚ್ಛನ್ಯಾಯಾಲಯದ ಪೀಠಕ್ಕೆ ಅರ್ಜಿ ಸಲ್ಲಿಸಿ ೨೦ ಜನರು ಜ.೬ ರಂದು ಮತದಾನದ ಹಕ್ಕು ಪಡೆದುಕೊಂಡ ಆದೇಶ ಪಡೆದುಕೊಂಡ ಹಿನ್ನೆಲೆಯಲ್ಲಿ ಈ ೨೦ ಮತದಾರರಿಗೆ ಪ್ರತ್ಯೇಕವಾದ ಮತಪೆಟ್ಟಿಗೆಯಲ್ಲಿ ಅವರು ಮತ ಚಲಾಯಿಸಲು ಚುನಾವಣಾಧಿಕಾರಿ ವ್ಯವಸ್ಥೆ ಮಾಡಿದ್ದರು.
ಮತದಾನ ಹಕ್ಕು ಪಡೆದ ೨೦ ಮತದಾರರ ಪೈಕಿ ೧೮ ಮತದಾರರು ಇಂದು ಜರುಗಿದ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದರು. ಚುನಾವಣಾಧಿಕಾರಿಗಳು ಕಲಬುರಗಿ ಉಚ್ಛನ್ಯಾಯಾಲಯ ಪೀಠದ ಮುಂದಿನ ಆದೇಶ ಬರುವರೆಗೂ ಈ ಪ್ರತ್ಯೇಕ ಮತಪೆಟ್ಟಿಗೆಯನ್ನು ಎಣಿಕೆ ಮಾಡದೇ ಇದನ್ನು ಭದ್ರವಾಗಿ ಪಟ್ಟಣದ ಖಜಾನೆ ಇಲಾಖೆಯಲ್ಲಿ ಇಟ್ಟು ಬರಲಾಗಿದೆ. ಮುಂದಿನ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮವಹಿಸುವುದಾಗಿ ಚುನಾವಣಾಧಿಕಾರಿ ಚೇತನ್ ಭಾವಿಕಟ್ಟಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

