ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಾರ್ಡ್ ನಂ: 28 ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಗಬೇಕಾದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಿಜಯಪುರ ನಗರ ಉಪಾಧ್ಯಕ್ಷ ಆಮೀರ್ ಸೊಹೈಲ್ ಪಟೇಲ್ ಅವರ ನೇತೃತ್ವದಲ್ಲಿ ಮಂಗಳವಾರ ರಸ್ತೆ ತಡೆದು, ಟಾಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.
ಇಲ್ಲಿನ ರಸ್ತೆಗಳಲ್ಲಿ ತಿರುಗಾಡಿದರೆ ರಸ್ತೆಯೋ ಅಥವಾ ಗುಂಡಿಯೋ ಅನ್ನುವ ಹಾಗಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಗರ ಉಪಾಧ್ಯಕ್ಷ ಆಮೀರ್ ಸೊಹೈಲ್ ಪಟೇಲ್ ಕಿಡಿಕಾರಿದರು.
ವಾರ್ಡ್ ನಂ 28 ರಲ್ಲಿ ಕಳೆದ 10-12 ವರ್ಷಗಳಿಂದ ವಾರ್ಡಿನ ಜನತೆಗೆ ಮೂಲಭೂತ ಸೌಕರ್ಯಗಳಾದ ಒಳ್ಳೆಯ ರಸ್ತೆ, 24×7 ಕುಡಿಯುವ ನೀರು, ದಾರಿದೀಪಗಳು, ಒಳಚರಂಡಿ ವ್ಯವಸ್ಥೆ ಇಲ್ಲದೆ ಜನರು ಹೈರಾಣ ಆಗುತ್ತಿದ್ದಾರೆ ಹಾಗೂ ರಸ್ತೆಗಳಲ್ಲಿ ಬೀದಿ ನಾಯಿಗಳ ಮತ್ತು ಬಿಡಾಡಿ ದನಗಳ ಹಾವಳಿ ಅಧಿಕವಾಗಿರುವುದರಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ ಎಂದು ಆಮೀರ್ ಪಾಲಿಕೆಯ ವಿರುದ್ಧ ಹರಿಹಾಯ್ದರು.
ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಮಾತನಾಡಿ, ವಾರ್ಡಿನ ನಾಗರಬಾವಡಿ ಪ್ಲಾಟ್ ಹಾಗೂ ತಾಜುದ್ದೀನ್ ಹೋಟೆಲ್ ದಿಂದ ಸರ್ಕಾರಿ ಬಾಲಕಿಯರ ಶಾಲೆ ನಂ: 4 ರ ವರೆಗಿನ ರಸ್ತೆಗಳು ಅತಿಕ್ರಮಣಗೊಂಡಿದ್ದು, ಅತಿಕ್ರಮಣ ತೆರವುಗೊಳಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ಜನರು ಹಾಗೂ ಆಮ್ ಆದ್ಮಿ ಪಕ್ಷ ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೆ ಎಂದು ಭೋಗೇಶ್ ಸೋಲಾಪುರ್ ಅವರು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಕೊಡುವ ಮೂಲಕ ಆಗ್ರಹಿಸಿದರು.
ಕೇಂದ್ರ ಬಸ್ ನಿಲ್ದಾಣದಿಂದ ಮುಸ್ತಾಕ್ ಹೋಟೆಲ್ ವರೆಗೆ ರಸ್ತೆ ಮತ್ತು ಬೀದಿ ದೀಪಗಳು ಇಲ್ಲದಿರುವುದರಿಂದ ಹಾಗೂ ಈ ರಸ್ತೆಯಲ್ಲಿ ಅತಿ ಹೆಚ್ಚಿನ ಬಸ್ ಸಂಚಾರವಿದ್ದು ಅಲ್ಲದೆ ಸಾರ್ವಜನಿಕ ಮುಖ್ಯ ರಸ್ತೆ ಆಗಿರುವುದರಿಂದ ಅಲ್ಲಿನ ದಟ್ಟನೆಯಿಂದ ಯಾವಾಗಲೂ ಧೂಳಿನಿಂದ ಸ್ಥಳೀಯ ನಾಗರೀಕರ ಆರೋಗ್ಯ ಹಾಳಾಗುತ್ತಿದೆ ಎಂದು ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ ಆಮ್ ಆದ್ಮಿ ಪಕ್ಷದ ಮನವಿಯನ್ನು ಸ್ವೀಕರಿಸಿ ಇನ್ನೆರಡು ದಿನಗಳಲ್ಲಿ ನವಬಾಗ್ ರಸ್ತೆಯ ದಾರಿ ದೀಪಗಳು ಹಾಕಿಸಿಕೊಡುವುದಾಗಿ ತಿಳಿಸಿದರು. ನವಬಾಗ್ ರಸ್ತೆಯ ಒಳಚರಂಡಿ ಕಾಮಗಾರಿ ಬರುವ ಜನವರಿ 15ಕ್ಕೆ ಕೈಗೆತ್ತಿಕೊಂಡು ತದನಂತರ ರಸ್ತೆ ನಿರ್ಮಾಣ ಕಾಮಗಾರಿ ಮುಗಿಸಿಕೊಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸದರಿ ಕಾಮಗಾರಿಗಳನ್ನು ಒಂದು ವಾರದ ಒಳಗಾಗಿ ಪ್ರಾರಂಭಿಸದಿದ್ದರೆ ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಆಪ್ ಜಿಲ್ಲಾಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮಹಾನಗರ ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

