ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎರಡು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣವಾದರೂ ಶಿಥಿಲಗೊಂಡ ಹಳೆ ಕಟ್ಟಡ ನೆಲಸಮಗಿಳಿಸದೆ ಇರುವುದರಿಂದ ಪಾಲಕರು ಆತಂಕಪಡುವಂತಾಗಿದೆ.
ಈಗಾಗಲೆ ಇಲ್ಲಿ ಹೆಚ್ ಕೆ ಆರ್ ಡಿ ಬಿ ಯೋಜನೆಯಡಿ 2019-20 ಹಾಗೂ 22-23 ನೇ ಸಾಲಿನಲ್ಲಿ ಎರಡು ಅಂತಸ್ತಿನ ಹೊಸ ಕಟ್ಟಡಗಳು ನಿರ್ಮಾಣವಾಗಿದ್ದು, ಮೂರ್ನಾಲ್ಕು ವರ್ಷಗಳಿಂದ ಮಕ್ಕಳಿಗೆ ಹೊಸ ಕಟ್ಟಡದಲ್ಲಿಯೇ ಪಾಠ ಪ್ರವಚ ನಡೆದಿರುತ್ತದೆ. ಆದರೆ ಹೊಸ ಶಾಲಾ ಕಟ್ಟಡದ ಮುಂಭಾಗವೇ ಇರುವ ಶಿಥಿಲಗೊಂಡ ಹಳೆ ಕಟ್ಟಡ ಇನ್ನೂ ತೆರವುಗೊಳಿಸದೆ ಇರುವುದರಿಂದ ನಿತ್ಯ ನೂರಾರು ಹೈಸ್ಕೂಲ್ ಮಕ್ಕಳು ಇದೇ ಶಿಥಿಲಗೊಂಡ ಕಟ್ಟಡದ ಅಡಿಯಲ್ಲೆ ಓಡಾಡುತ್ತಿದ್ದು ಯಾವ ಸಂದರ್ಭದಲ್ಲಿ ಯಾವ ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕ ಪಾಲಕರದ್ದಾಗಿದೆ.
ಹತ್ತಾರು ಕೋಣೆಗಳ ಬೃಹತ್ ಕಟ್ಟಡ ಇದಾಗಿದ್ದು, ಶಿಥಿಲಾವಸ್ಥೆ ತಲುಪಿದೆ ಎಂಬ ಕಾರಣಕ್ಕೆ ಶಾಲಾ ಮಕ್ಕಳ ಪಾಠ ಪ್ರವಚನಕ್ಕೆ ಅಪಾಯವೆಂದರಿತೆ ಹೊಸ ಕಟ್ಟಡ ನಿರ್ಮಾಣವಾದರೂ ಹೊಸ ಕಟ್ಟಡದ ಮುಂಭಾಗವಿರುವ ಅಪಾಯಕ್ಕೆ ಎಡೆಯಾದ ಈ ಹಳೆ ಕಟ್ಟಡದ ತೆರವು ಕಾರ್ಯಕ್ಕೆ ಮೀನಮೇಷ ಎಣಿಸುತ್ತಿರುವುದಾದರೂ ಏಕೆ ಎಂಬುವುದು ತಿಳಿಯದಾಗಿದೆ. ಪವಿತ್ರ ಸ್ಥಳದಲ್ಲಿ ಹಲವು ಅಕ್ರಮ ಚಟುವಟಿಕೆಗಳಿಗೆ ನೆಲೆಯಾಗುತ್ತಿರುವ ಶಿಥಿಲ ಶಾಲಾ ಕಟ್ಟಡ ಬೇಗ ತೆರವುಗೊಳಿಸುವಂತೆ ಹಲವರ ಒತ್ತಾಯ.
ಆಟದ ಮೈದಾನಕ್ಕೂ ಅಡತಡೆ:
ಹೊಸ ಕಟ್ಟಡದ ಮುಂಭಾಗವೇ ಈ ಬೃಹತ್ತಾದ ಶಿಥಿಲ ಕಟ್ಟಡ ಇರುವುದರಿಂದ ಸಾಕಷ್ಟು ಮೈದಾನವಿದ್ದರೂ ಮಕ್ಕಳಿಗೆ ಆಟೋಟಕ್ಕೆ ಮೈದಾನ ಇಲ್ಲದಂತಾಗಿದ್ದು. ಇದರಿಂದ ಮಕ್ಕಳು ಸ್ವಚ್ಚಂದವಾಗಿ ಓಡಾಡಿಕೊಂಡು ಇರಲಾಗದೆ ಆಟೋಟ ಎಲ್ಲವೂ ಭಯಾಗ್ರಸ್ಥವಾಗಿಯೆ ಮುಂದುವರಿದಿದೆ, ಎಚ್ಚೆತ್ತುಕೊಂಡು ಅಧಿಕಾರಿಗಳು ಹಳೆ ಕಟ್ಟಡ ನೆಲಸಮ ಮಾಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.

