ಪೊಲೀಸ್ ಅಧಿಕಾರಿಗಳು &ಸಿಬ್ಬಂದಿಗೆ ಹಾಗೂ ಅವರ ಅವಲಂಬಿತರಿಗೆ ‘ಆರೋಗ್ಯ ಭಾಗ್ಯ ಯೋಜನೆ’
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಅಧಿಕಾರಿಗಳು/ಸಿಬ್ಬಂದಿಗಳಿಗೆ ಹಾಗೂ ಅವರ ಅವಲಂಬಿತರಿಗೆ ‘ಆರೋಗ್ಯ ಭಾಗ್ಯ ಯೋಜನೆ’ ಯಡಿ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲು ಮಾನ್ಯತೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ ಹಾಗೂ ಡಿ.ವೈ.ಎಸ್.ಪಿ ಬಸವರಾಜ ಯಲಗಾರ ಅವರು ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.
ಆಸ್ಪತ್ರೆಯ ಆಪರೇಶನ್ ಥಿಯೇಟರ್, ಡಯಾಲಸಿಸ್ ಸೆಂಟರ್, ಪ್ರಯೋಗಾಲಯ ಸೇರಿದಂತೆ ಪ್ರತಿಯೊಂದು ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿರುವ ಆಧುನಿಕ ಚಿಕಿತ್ಸಾ ಸೌಲಭ್ಯಗಳು, ನುರಿತ ವೈದ್ಯರ ತಂಡ, ಶುಚಿತ್ವ, ಅತ್ಯುತ್ತಮ ವಾತಾವರಣ ಕಂಡು ಶ್ಲಾಘನೀಯ ವ್ಯಕ್ತಪಡಿಸಿದರು.
ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್, ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಹಾಗೂ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಲು ಮಾನ್ಯತೆ ನೀಡಲಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿ ಇ.ಎಸ್.ಐ, ಜ್ಯೋತಿ ಸಂಜೀವಿನಿ, ಎಲ್ಲಾ ವಿಮೆ ಸೌಲಭ್ಯಗಳ ಅಡಿಯಲ್ಲಿ ಉತ್ತಮ ದರ್ಜೆಯ ವೈದ್ಯಕೀಯ ಚಿಕಿತ್ಸೆ ಲಭ್ಯ ಇರುತ್ತವೆ ಎಂದು ಮಾಹಿತಿ ನೀಡಿದರು.
ನಗರ ಶಾಸಕರ ಆಪ್ತ ಸಹಾಯಕ ಉಮೇಶ ಕೋರೆ, ಅಂತರರಾಷ್ಟ್ರೀಯ ಯೋಗಿಕ್ ನ್ಯೂರೋ ಸರ್ಜನ್ ಡಾ.ಮಯೂರ್ ಕಾಕು, ಎಚ್.ಆರ್ ಹೆಡ್ ಲೀಲಾವತಿ, ವ್ಯವಸ್ಥಾಪಕ ಅರುಣ, ವೀರಣ್ಣ ಮತ್ತಿತರರು ಇದ್ದರು

