ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮವು ಸು. ೧೪ ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರು ಅನಾರೋಗ್ಯ ಉಂಟಾದರೆ ಬಸವನಬಾಗೇವಾಡಿ ಪಟ್ಟಣದ ತಾಲೂಕು ಆಸ್ಪತ್ರೆಗೆ ತೆರಳಬೇಕಿದೆ. ಇದರ ಸುತ್ತಮುತ್ತಲಿರುವ ಗ್ರಾಮಗಳ ಜನರ ಪರಿಸ್ಥಿತಿಯೂ ಇದೆ ಆಗಿದೆ. ಇದರಿಂದಾಗಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಇಂಗಳೇಶ್ವರ ಗ್ರಾಮಸ್ಥರ ಬಹುದಿನಗಳಿಂದ ಬೇಡಿಕೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗಾಗಿ ಸಚಿವ ಶಿವಾನಂದ ಪಾಟೀಲರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ರಂದೀಪ್ ಡಿ. ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಈ ಕುರಿತು ಶಿಪಾರಸ್ಸು ಮಾಡಲಾಗಿದೆ. ಆದರೂ ಇದುವರೆಗೂ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಿಲ್ಲ. ಕೂಡಲೇ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

