ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಕಣಾಚಾರ್ಯರು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇಡೀ ಕುಟುಂಬವನ್ನೇ ತ್ಯಾಗ ಮಾಡಿ ಶಿಲ್ಪ ಕಲೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದರು. ಅವರು ಈ ನಾಡಿಗೆ ನೀಡಿದ ಕೊಡುಗೆ ಅಪಾರ ಎಂದು ಭಾಜಪಾ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ರವಿವಾರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಧ್ಯ ತಂತ್ರಜ್ಞಾನ ಬೆಳೆದಿದೆ. ಹಿಂದೆ ಯಾವ ತಂತ್ರಜ್ಞಾನ ಕೂಡ ಇರಲಿಲ್ಲ. ಉಳಿ ಹಿಡಿದು ಕೈಗಳಿಂದ ಕೆತ್ತನೆ ಮಾಡಬೇಕಾಗಿತ್ತು. ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಕೆತ್ತಿದ ಶಿಲ್ಪ ಕಲೆ, ದೇವಸ್ಥಾನಗಳು ಇಂದಿಗೂ ಅಮರವಾಗಿವೆ. ಇದಕ್ಕೆ ತುಮಕೂರಿನ ಚನ್ನಕೇಶವ ದೇವಸ್ಥಾನ ಸಾಕ್ಷಿಯಾಗಿದೆ ಎಂದರು.
ಮುರನಾಳದ ಜಗನ್ನಾಥ ಮಾಹಾಸ್ವಾಮಿಗಳು ಮಾತನಾಡಿ ಜಕಣಾಚಾರ್ಯರ ದೇಹ ದೂರವಾಗಿರಬಹುದು ಆದರೆ ಅವರ ಶಿಲ್ಪ ಕಲೆ ಎಷ್ಟು ಸಾವಿರ ವರ್ಷಗಳಾದರೂ ದೂರವಾಗುವದಿಲ್ಲ. ಹಲವು ಶಿಲ್ಪಿಗಳ ಪೈಕಿ ಜಕಣಾಚಾರ್ಯರು ಮಾತ್ರ ಅಮರರಾದವರು. ಇಂತಹ ಮಹಾನ್ ಪುರುಷರು ನಮ್ಮ ಸಮಾಜದವರು ಎಂದು ಹೇಳಿಕೊಳ್ಳಲು ಹೃದಯ ತುಂಬಿ ಬರುತ್ತದೆ. ಅವರ ಆದರ್ಶ ತತ್ವಗಳ ಅಡಿಯಲ್ಲಿ ಸಮಾಜ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಮುಖಂಡ ಎಲ್.ಐ.ಸಿ ಕ್ಲಬ್ ಮೆಂಬರ್ ಪ್ರಭಾಕರ ಪತ್ತಾರ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಲಕ್ಷ್ಮಿಪುರ ಮಾತನಾಡಿದರು.
ಕುಂಟೋಜಿಯ ಬಸವರಾಜ ಬಡಿಗೇರ ವಕೀಲರು ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ.ವಿ.ಎಸ್.ಲಮಾಣಿ ವಿಶೇಶ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಸಬಾ ಲಿಂಗಸ್ಗೂರಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಕಾಳಪ್ಪ ಬಡಿಗೇರ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ಎಲ್.ಎನ್.ನಾಯ್ಕೋಡಿ, ಹೊರಗುತ್ತಿಗೆ ನೌಕರರ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಆಯ್ಕೆಯಾದ ಬಸವರಾಜ ಬಡಿಗೇರ, ಇಳಕಲ್ ನ ಚಿತ್ರಕಲೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ವಿರೇಶ ಬಡಿಗೇರ ಇರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಲೇಬಗಿರಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ನಾಗಮೂರ್ತೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ, ನಾಲತವಾಡದ ಪಂಪಾಪತಿ ಮಹಾಸ್ವಾಮಿಗಳು, ವಿಜಯಪುರದ ದೇವೆಂದ್ರ ಮಹಾಸ್ವಾಮಿಗಳು, ಸಾಸನೂರದ ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಬಡಿಗೇರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಮಾಟಲದಿನ್ನಿ ವೇದಿಕೆಯ ಮೇಲಿದ್ದರು.
ಸಮಾಜದ ಪ್ರಮುಖರಾದ ಈರಣ್ಣ ಬಡಿಗೇರ, ಗಂಗಾಧರ ಸೋನಾರ, ಸದಾಶಿವ ಬಡಿಗೇರ, ಮೌನೇಶ ಮಡಿಕೇಶ್ವರ, ವಿಠ್ಠಲ ಬಡಿಗೇರ, ಶೇಷಪ್ಪ ಬಡಿಗೇರ, ಶಿವು ಬಡಿಗೇರ, ವಿರೇಶ ಬಡಿಗೇರ, ಹಣಮಂತ ಬಡಿಗೇರ, ಬಾಲಚಂದ್ರ ಬಡಿಗೇರ, ರಾಮಚಂದ್ರ ಬಡಿಗೇರ, ಮನೋಹರ ಬಡಿಗೇರ, ವಿವೇಕ ದೋಟಿಹಾಳ, ಈರಣ್ಣ ಹಂದ್ರಾಳ, ವಿಜು ಸೋನಾರ ಸೇರಿದಂತೆ ಮತ್ತೀತರರು ಇದ್ದರು. ಬಸವರಾಜ ಹಡಗಲಿ ಸ್ವಾಗತಿಸಿದರು. ಶಿಕ್ಷಕ ಟಿ.ಡಿ.ಲಮಾಣಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀಯವರು ವಿಶ್ವಕರ್ಮ ಸಮ್ಮಾನ ಯೋಜನೆ ಎಂಬ ದೊಡ್ಡ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತಂದಿದ್ದಾರೆ. ಶಿಲ್ಪಿಗಳಿಗೆ ಸಹಾಯವಾಗುವ ಉದ್ದೇಶದಿಂದ ಈ ಯೋಜನೆಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ವಿಶ್ವಕರ್ಮರ ಹೆಸರಿನಲ್ಲಿಯೇ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ೩ಲಕ್ಷದವರೆಗೆ ಸಹಾಯ ಧನ ನೀಡಲಾಗುತ್ತದೆ. ಜೊತೆಗೆ ಟ್ರೇನಿಂಗ್ ಸ್ಟೆöÊಫಂಡ್ ಕೂಡ ಸರ್ಕಾರ ನೀಡುತ್ತದೆ. ಗುಡಿ ಕೈಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿರುವವರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳುವಂತೆ ಭಾಜಪಾ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಿಶ್ವಕರ್ಮ ಸಮಾಜ ಬಾಂಧವರಿಗೆ ಸಲಹೆ ನೀಡಿದರು.
“ನಮ್ಮ ಸಮಾಜ ಒಂದಾಗಬೇಕು. ಸಂಘಟನಾತ್ಮಕ ಚಟುವಟಿಕೆಗಳನ್ನ ಮಾಡಬೇಕು. ದುಡ್ಡಿನ ಹಿಂದೆ ಬೆನ್ನು ಹತ್ತಬಾರದು. ಸಮಾಜದ ಬಗ್ಗೆ ಕಳಕಳಿ ಇರುವವರು ಅಧಿಕಾರದಲ್ಲಿರಬೇಕು.”
– ಜಗನ್ನಾಥ ಮಹಾಸ್ವಾಮಿಗಳು
ಮಳೆರಾಜೆಂದ್ರಸ್ವಾಮಿ ಮಠ, ಮುರನಾಳ.
“ಸಚಿನ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಎರಡೂ ಪಕ್ಷಗಳು ರಾಜಕೀಯ ಮಾಡುತ್ತಿವೆ. ಎರಡೂ ಪಕ್ಷಗಳು ೫-೧೦ ಲಕ್ಷ ಕೊಡಿಸುವದಾಗಿ ಹೇಳುತ್ತಿವೆ. ನಿಮ್ಮ ಹಣ ತೆಗೆದುಕೊಂಡು ನಾವೇನು ಮಾಡೋಣ. ನಮಗೆ ನ್ಯಾಯ ಕೊಡಿಸಿ. ಇಲ್ದಿದ್ರೆ ಮುಂದಿನ ದಿನಮಾನಗಳಲ್ಲಿ ನಾವು ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಧರಣಿ ಮಾಡುತ್ತೇವೆ.”
– ಆನಂದ ಲಕ್ಷ್ಮಿಪುರ
ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ

