ಮಕರ ಸಂಕ್ರಾಂತಿ ಜಾನುವಾರುಗಳ ಜಾತ್ರೆ | ಜಾನುವಾರುಗಳ ಆಯ್ಕೆಯಲ್ಲಿ ಅನ್ಯಾಯ | ರೈತಸಂಘ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಾನುವಾರಗಳನ್ನು ಮರೆತು ಆಧುನಿಕ ಯಂತ್ರೋಪಕರಣಗಳಿಗೆ ಬೆನ್ನು ಹತ್ತಿದ ಇಂದಿನ ದಿನಮಾನಗಳಲ್ಲಿ ಜಾನುವಾರುಗಳನ್ನು ಉಳಿಸಿಕೊಂಡು ಬೆಳಸಬೇಕಾದ ಕಾರ್ಯ ಸಮಾಜದ ಎಲ್ಲರ ಮೇಲಿದೆ ಆ ನಿಟ್ಟಿನಲ್ಲಿ ದೇಶಿ ಹಸುಗಳ ತಳಿಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆ, ಕಾರ್ಯಕ್ರಮ, ನಡೆಸಬೇಕಾದ ಜವಾಬ್ದಾರಿ ಇದೆ, ಅದರಡಿ ಜಾನುವಾರು ಜಾತ್ರೆಗಳು ಬಹು ಮುಖ್ಯಪಾತ್ರವಹಿಸುತ್ತವೆ, ಇಲ್ಲಿ ವಿಶೇಷ ಕಾಳಜಿಯಿಂದ ಜಾನುವಾರುಗಳನ್ನು ಸಾಕಿ ತಮ್ಮ ಸ್ವಂತ ಮಕ್ಕಳಂತೆ ಸಲುಹಿ ಒಳ್ಳೆಯ ಕಟ್ಟುಮಸ್ತಾಗಿ ಬೆಳೆಸಿರುವ ಒಳ್ಳೆಯ ರಾಸುಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.
ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ವೇಳೆ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ನಡೆಯುವ ಜಾನುವಾರುಗಳ ಆಯ್ಕೆಯಲ್ಲಿ ಅನ್ಯಾಯವಾಗುತ್ತಿದ್ದು ಇದರಿಂದ ವಿಜಯಪುರ ಮಾತ್ರವಲ್ಲದೇ ನೆರೆಯ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಜಾತ್ರೆಗೆ ಜಾನುವಾರುಗಳನ್ನು ತರುವ ರೈತರಿಗೆ ತುಂಬಾ ಅನ್ಯಾಯದಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಚಾಂಪಿಯನ್ ಆಯ್ಕೆ ಕುರಿತು ಅನೇಕ ಗೊಂದಲಗಳಿವೆ, ಇಲ್ಲಿ ಕೇವಲ ಒಬ್ಬರಿಗೆ ಮಾತ್ರ ಬಹುಮಾನ ನೀಡುವ ಬದಲಿಗೆ ಪ್ರಥಮ, ದ್ವೀತಿಯ, ತೃತೀಯ ಎಂದು ಆಯ್ಕೆ ಮಾಡಿ ಎಲ್ಲರಿಗೂ ಒಟ್ಟು ಮೊತ್ತದ ಬಹುಮಾನವನ್ನು ಹಂಚಿಕೆ ಮಾಡಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ, ಎ.ಪಿ.ಎಂ.ಸಿ ಕಾರ್ಯದರ್ಶಿಗಳಿಗೆ ಹಾಗೂ ಸಿದ್ದೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ ಬಂದಂತಹ ಜಾನುವಾರುಗಳಲ್ಲಿ ಆಯ್ಕೆಮಾಡಿ ಚಾಂಪಿಯನ್ ಎಂದು ೧೦ ಗ್ರಾಂ ಬಂಗಾರ ಕೊಡಲಾಗುತ್ತದೆ, ಆದರೆ ಇಲ್ಲಿ ಯಾವುದೇ ಮಾನದಂಡಗಳನ್ನು ನೋಡದೇ ಪ್ರಭಾವಿಗಳ ಶಿಫಾರಸ್ಸಿನ ಮೇಲೆ ಆಯ್ಕೆ ಮಾಡಿ ವಿಜೇತರೆಂದು ಘೋಷಣೆ ಮಾಡುತ್ತಿದ್ದಾರೆ, ಎಂಬುದು ಅನೇಕ ರೈತರ ಅಳಲಾಗಿದೆ ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಜಿಲ್ಲಾ ಸಂಚಾಲಕ ಜಕರಾಯ ಪೂಜಾರಿ, ಬಬಲೇಶ್ವರ ಅಧ್ಯಕ್ಷ ಮಕುಬುಲ ಕೀಜಿ, ಬಬಲೇಶ್ವರ ತಾಲೂಕಾ ಉಪಾಧ್ಯಕ್ಷ ರಾಜುಗೌಡ ಪಾಟೀಲ , ಹಿರಿಯರಾದ ಚನ್ನಬಸಯ್ಯ ಹಿರೇಮಠ, ರಾಘು ಬಳ್ಳಾರಿ, ಮಹೇಶ ಹಾದಿಮನಿ ಇದ್ದರು.

