ದೇವರಹಿಪ್ಪರಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಮೂರು ಗೋಷ್ಠಿ, ಬಹಿರಂಗ ಅಧಿವೇಶನದ ನಂತರ ಸಮಾರೋಪಗೊಂಡಿತು.
ಪಟ್ಟಣದಲ್ಲಿ ಶುಕ್ರವಾರ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಮಧ್ಯಾನ್ಹವೇ ಆರಂಭಗೊಳ್ಳಬೇಕಿದ್ದ ಗೋಷ್ಠಿಗಳು ಸುಮಾರು ೨ ಗಂಟೆಗಳ ಕಾಲ ವಿಳಂಬವಾಗಿ ಆರಂಭಗೊಂಡವು. ಸಾಯಂಕಾಲ ಶರಣ ಗೋಷ್ಠಿಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
೧ನೇ ಗೋಷ್ಠಿ,ಶರಣ ಗೋಷ್ಠಿ: ನ್ಯಾಯವಾದಿ ಮಹ್ಮದ್‌ಗೌಸ ಹವಾಲ್ದಾರ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಶ್ರೀಧರ ಆಸಂಗಿಹಾಳ ಮಾತನಾಡಿ, ಸರ್ವರಿಗೂ ಹಿತವೇನಿಸುವುದೇ ಸಾಹಿತ್ಯ. ಪ್ರೇಮದ ನುಡಿ, ಭಾಷೆಯನ್ನು ಜಗಕ್ಕೆ ನೀಡುವುದೇ ಸಾಹಿತ್ಯ ಇಂಥ ಸಾಹಿತ್ಯ ರಕ್ಷಕ ಮಾಡಿವಾಳ ಮಾಚಿದೇವ ಎಂದು ಹೇಳುತ್ತಾ ಮಾಚಿದೇವರ ಕಾರ್ಯ, ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮೊಹರೆ ಹಣಮಂತ್ರಾಯರ ಕುರಿತು ಮಾತನಾಡಿ, ಪತ್ರಿಕಾರಂಗದಲ್ಲಿ ಅವರು ಸಲ್ಲಿಸಿದ ಸೇವೆ, ನಡೆದುಬಂದ ದಾರಿಯ ಕುರಿತು ವಿವರಿಸಿದರು.
ಹೂವಿನಹಿಪ್ಪರಗಿ ಪತ್ರಿಮಠದ ದ್ರಾಕ್ಷಾಯಣಿ ಮಾತಾಜಿ ಹಾಗೂ ಪರದೇಶಿಮಠದಶ್ರೀ ಸಾನಿಧ್ಯ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಉಮೇಶ ರೂಗಿ, ಸಿಂಧೂರ ಡಾಲೇರ್ ಇದ್ದರು.
೨ನೇ ಗೋಷ್ಠಿ. ಕವಿ ಗೋಷ್ಠಿ: ಸ್ಥಳೀಯ ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಗೋಷ್ಠಿಯಲ್ಲಿ ೩೦ ಹೆಚ್ಚು ಕವನಗಳು ವಾಚನಗೊಂಡವು. ಇವುಗಳಲ್ಲಿ ದಾನಮ್ಮ ಹೂಗಾರರ ‘ನಮ್ಮವ್ವ ಒಬ್ಬಾಕಿ, ಮರಿಲಿಂಗಪ್ಪ ಮೇಲಿನಕೇರಿಯ ‘ಹೊತ್ತು ಹೋಗತೈತಿ’ ಈರಪ್ಪ ಗಂಗಶೆಟ್ಟಿಯ ‘ನಮ್ಮ ಸರ್ಕಾರಿ ಶಾಲೆ’ ಭಾಗ್ಯಶ್ರೀ ಕ್ಯಾತಣ್ಣವರ ‘ನೆನಪಿನ ಅಲೆಯಲ್ಲಿ’ ಎಮ್.ಎಮ್.ಮುಲ್ಲಾ ಅವರ ‘ಹೆಣ್ಣು ಬಾಳ ಕಣ್ಣು’ ಶಂಕ್ರಯ್ಯ ಆಲಾಳಮಠರ ‘ನನ್ನಪ್ಪ’ ಪ್ರೇಮಾ ಪಾಟೀಲರ ‘ಒಂದು ಹೆಜ್ಜೆ’ ರಾಜಶೇಖರ ಸಾಸಟ್ಟಿಯ ತ್ರಿರತ್ನ ವಚನಗಳು ಗಮನ ಸೆಳೆದವು.
ಸಾಹಿತಿಗಳಾದ ಮಮತಾ ಮುಳಸಾವಳಗಿ, ಶಿಲ್ಪಾ ಭಸ್ಮೆ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ವ್ಹಿ.ಡಿ.ಐಹೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಕ.ಸಾ.ಪದ ಮಾಧವ ಗುಡಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಚಂದ್ರಶೇಖರ ದೇವರಡ್ಡಿ ಇದ್ದರು.
೩ನೇ ಗೋಷ್ಠಿ. ಜಾನಪದ ಸಂಭ್ರಮ ಮತ್ತು ಬಂಡಾಯ ಸಾಹಿತ್ಯ ಇದನ್ನು ವೃತ್ತ ನಿರೀಕ್ಷಕ ಡಾ.ಜ್ಯೋತಿರ್ಲಿಂಗ ಹೊನಕಟ್ಟಿ ಉದ್ಘಾಟಿಸಿ ಮಾತನಾಡಿ, ಸೂರ್ಯ ಚಂದ್ರರು ಇರುವವರೆಗೆ ಬತ್ತದ ಸಾಹಿತ್ಯ ಜಾನಪದ ಸಾಹಿತ್ಯ ಎಂದು ಹೇಳುತ್ತಾ ವಿವಿಧ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಬದುಕಿನ ಪ್ರತಿ ಕ್ಷಣದಲ್ಲಿ ನಾವು ಜಾನಪದ ಸಂಸ್ಕೃತಿಯನ್ನು ಕಾಣುತ್ತೇವೆ. ಜನಪದ ಇಲ್ಲದ ಬದುಕು ಬದುಕಾಗಲಾರದು ಎಂದರು.
ಜಾನಪದ ಸಾಹಿತ್ಯ ನಮ್ಮ ಪಾರಂಪರಿಕ ಆಸ್ತಿ. ಜಾನಪದದಲ್ಲಿ ಮೌಲ್ಯವಿದೆ, ಶಕ್ತಿಯಿದೆ, ಅಳಿಯದ ನೆನಪುಗಳಿವೆ ಎಂದು ಸಾಹಿತಿ ಶಿವಲೀಲಾ ಮುರಾಳ ಮಾತನಾಡಿ, ಸುಂದರ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿ ಸಭಿಕರನ್ನು ರಂಜಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಾಹಿತಿ ರಾವುತ ತಳಕೇರಿ ಮಾತನಾಡಿ, ಶೋಷಿತ ಸಮುದಾಯಗಳ ನೋವಿನ ಧ್ವನಿಯಾಗಿ ಬಂಡಾಯ ಸಾಹಿತ್ಯ ರೂಪಗೊಂಡಿದೆ. ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಬಿತ್ತುವಂತಾಗಬೇಕು. ಬದುಕು ಪರಿವರ್ತನೆಯ ದಾರಿಯಲ್ಲಿ ಸಾಹಿತ್ಯ ನಿರ್ಮಾಣವಾಗಬೇಕು ಎಂದು ಹೇಳಿ ಕ್ರಾಂತಿಗೀತೆಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಪ್ರಸಾದ, ಮೆರವಣಿಗೆ, ಪೆಂಡಾಲ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಯಿತು ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಕೆರೆಪ್ಪಗೋಳ ಉಪಸ್ಥಿತರಿದ್ದರು.
ಸಮ್ಮೇಳನದ ನಿರ್ಣಯಗಳು
೧) ದೇವರಹಿಪ್ಪರಗಿ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಡಿಪ್ಲೋಮಾ ಕಾಲೇಜು ಆರಂಭಕ್ಕೆ ಕ್ರಮ
೨) ಮೊಹರೆ ಹಣಮಂತ್ರಾಯರ ಸ್ಮಾರಕ ನಿರ್ಮಾಣ
೩) ಪಟ್ಟಣಕ್ಕೆ ಅಗತ್ಯವಾದ ಕ್ರೀಡಾಂಗಣ
೪) ಕಸಾಪಗಾಗಿ ‘ಕನ್ನಡ ಭವನ’ ನಿರ್ಮಾಣ.
೫) ತಾಲ್ಲೂಕು ಕೇಂದ್ರದಲ್ಲಿ ಅಗತ್ಯವಾದ ಸರ್ಕಾರಿ ಕಚೇರಿಗಳ ಆರಂಭಕ್ಕೆ ಕ್ರಮ ವಹಿಸಲು ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಲಾಯಿತು.

