ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ (ಐಎಪಿ) ಕರ್ನಾಟಕ ರಾಜ್ಯ ಘಟಕ-2025 ರ ಅನುಸ್ಥಾಪನಾ ಸಮಾರಂಭ ಜನವರಿ 5 ರಂದು ರವಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಡಾ. ಎಸ್. ವಿ. ಪಾಟೀಲ, ಕಾರ್ಯದರ್ಶಿಯಾಗಿ ಡಾ. ಸಿದ್ದು ಚರ್ಕಿ ಹಾಗೂ ಇತರ ಸದಸ್ಯರು ಹೊಸ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಐಎಪಿ ರಾಷ್ಟ್ರೀಯ ಅಧ್ಯಕ್ಷ ಡಾ. ಜಿ. ವಿ. ಬಸವರಾಜ ಹಾಗೂ ಡಾ. ಎಲ್. ಎಚ್. ಬಿದರಿ ಅಶ್ವಿನಿ ಆಸ್ಪತ್ರೆ ಮತ್ತು ಕರ್ನಾಟಕದ ನೆರೆಯ ರಾಜ್ಯಗಳ ನಾನಾ ಭಾಗಗಳಿಂದ ಪ್ರತಿಷ್ಠಿತ ವೈದ್ಯರು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ(KAHER)ನ ಹೊಸ ಯೋಜನೆಗಳ ನಿರ್ದೇಶಕ ಡಾ. ವಿ. ಡಿ. ಪಾಟೀಲ, ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರ್ಗಿ ಹಾಗೂ ಬಾಗಲಕೋಟೆ ಜಿಲ್ಲೆಗಳ (ಐಎಪಿ) ಪದಾಧಿಕಾರಿಗಳು ಭಾಗವಹಿಸಿ ಮಕ್ಕಳ ಆರೋಗ್ಯದ ವಿಕಾಸ, ಶಿಶು ಚಿಕಿತ್ಸೆಗಾಗಿ ಹೊಸ ಆವಿಷ್ಕಾರಗಳ ಕುರಿತು, ಮುಂದಿನ ವರ್ಷದ ಯೋಜನೆಗಳು ಮತ್ತು ಗುರಿಗಳು ಮತ್ತು ಮಕ್ಕಳ ಆರೋಗ್ಯದ ಕ್ಷೇತ್ರದಲ್ಲಿ ವೈದ್ಯರಿಗೆ ನಿರಂತರ ವೈದ್ಯಕೀಯ ತರಬೇತಿಗಳನ್ನು ನೀಡುವುದರ ಕುರಿತು ಚರ್ಚಿಸಲಿದ್ದಾರೆ ಎಂದು ಡಾ. ಪರೀಕ್ಷಿತ ಕೋಟಿ ಅವರು ಮಾಧ್ಯಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
