ಲೇಖನ
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಶಕುಂತಲಾ ದೇವಿ ಅವರು ಮಾನವ ಕಂಪ್ಯೂಟರ್ ಎಂದೇ ಖ್ಯಾತಿಗಳಿಸಿದ್ದ ವಿಶ್ವ ವಿಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞೆ. ಬಾಲ ಪ್ರತಿಭೆಯಾಗಿ ಬೆಳಕಿಗೆ ಬಂದ ಇವರು ಜ್ಯೋತಿಷ್ಯ ಶಾಸ್ತ್ರದಲ್ಲೂ ವಿದ್ವಾಂಸರಾಗಿದ್ದರು. ಶಕುಂತಲಾ ದೇವಿ ಕ್ರಿಸ್ತಶಕ 1929ರ ನವೆಂಬರ್ 4ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಸಿ.ವಿ.ಎಸ್ ರಾಜಾ ರಾವ್ ಹಾಗೂ ತಾಯಿ ಸುಂದರಮ್ಮ. ಅವರ ತಂದೆ ಪುರೋಹಿತರಾಗಿದ್ದರು. ಕೆಲವು ಸಮಯ ಅವರು ಸರ್ಕಸ್ ನಲ್ಲೂ ಕೆಲಸ ಮಾಡುತ್ತಿದ್ದರು. ಶಕುಂತಲಾದೇವಿಯವರು ಚಿಕ್ಕಪ್ರಾಯದಲ್ಲಿ ಗಣಿತದಲ್ಲಿ ಅತ್ಯಾಸಕ್ತರಾಗಿದ್ದರು ಮತ್ತು ಅತ್ಯಂತ ಪ್ರತಿಭಾನ್ವಿತರಾಗಿದ್ದರು. ಹಲವಾರು ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರು. ಬಾಲ್ಯದಿಂದಲೇ ಶಕುಂತಲಾ ದೇವಿಯವರ ಪ್ರತಿಭೆ ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಜನಜನಿತವಾಗಿತ್ತು.
ಮನೆತನದ ಪೌರೋಹಿತ್ಯ
ವೃತ್ತಿಯನ್ನು ಮಾಡಲು ಒಪ್ಪದೇ ಇವರ ತಂದೆ ದೇವಸ್ಥಾನದಲ್ಲಿ ಪೂಜಾರಿಯಾಗುವುದನ್ನು ವಿರೋಧಿಸಿ ಸರ್ಕಸ್ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿದರು. ಮಗಳಿಗೆ ಇಸ್ಪೀಟ್ ಎಲೆಗಳಲ್ಲಿ ಮಾಡುವ ಕೆಲವು ಕೈಚಳಕಗಳ ಬಗ್ಗೆ ತರಬೇತಿ ನೀಡಿದರು. ತಂದೆಯ ಈ ಪ್ರತಿಭೆ ಪುಟ್ಟ ಬಾಲಕಿ ಶಕುಂತಲಾರ ಮೇಲೆ ಅದ್ಭುತ ಪರಿಣಾಮ ಬೀರಿತು. ಇದಾದ ತರುವಾಯ ಆ ಚಿಕ್ಕ ವಯಸ್ಸಿನಲ್ಲಿಯೇ ಮಗಳ ಪ್ರತಿಭೆಯನ್ನು ಮನಗಂಡ ತಂದೆ ತಮ್ಮ ಹೆಚ್ಚು ಸಮಯವನ್ನು ಮಗಳ ಇಷ್ಟದ ವಿಷಯಗಳ ಬಗ್ಗೆ ತರಬೇತಿ ಕೊಡುವುದರಲ್ಲಿ ಕಳೆದರು. ಐದು ವರ್ಷ ತುಂಬುವ ವೇಳೆಗೆ ಅಂಕಿಗಳ ಜೊತೆ ಆಟವಾಡುವ ಮಗಳ ಸಾಮರ್ಥ್ಯ ಅರಿತ ತಂದೆ ಸರ್ಕಸ್ ಕಂಪನಿ ತೊರೆದು ಮಗಳ ಗಣಿತದ ಜ್ಞಾನ ಪ್ರದರ್ಶನದ ಮೇಳ ಏರ್ಪಡಿಸಲು ಆರಂಭಿಸಿದರು.
ಅಂಕಿಗಳು ಶಕುಂತಲಾ ಅವರಿಗೆ ಬಹಳ ಮುದ ಕೊಡುತ್ತಿತ್ತು. ಲೀಲಾಜಾಲವಾಗಿ ಅಂಕೆ ಸಂಖ್ಯೆಗಳೊಡನೆ ಅವರು ಆಟವಾಡುತ್ತಿದ್ದರು. ತಮ್ಮ ಆರನೆಯ ವಯಸ್ಸಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಒಂದು ಚಿಕ್ಕ ಪ್ರದರ್ಶನ ನೀಡಿದರು. 13 ರಿಂದ 200 ವರೆಗಿನ ಸಂಖ್ಯೆಗಳನ್ನು ಇಟ್ಟುಕೊಂಡು ಗುಣಾಕಾರ, ಭಾಗಾಕಾರ, ವರ್ಗಮೂಲ, ಘನಮೂಲ, ಮೊದಲಾದ ಯಾವುದೇ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದ್ದುದು ಅವರ ವಿಶೇಷ ಗುಣವಾಗಿತ್ತು. ಇಷ್ಟು ಚಿಕ್ಕ ವಯಸ್ಸಿನ ಬಾಲಕಿಯ ಪಾಂಡಿತ್ಯವನ್ನು ಕಂಡ ಜನ ಬೆರಗಾದರು.ಹೀಗೆ ಕಾಲಕ್ರಮದಲ್ಲಿ ಬೆಳೆಯುತ್ತಾ ಹೋದ ಬಾಲಕಿಯ ಗಣಿತ ಶಾಸ್ತ್ರದ ಕ್ಷಮತೆ ಮುಗಿಲೆತ್ತರಕ್ಕೆ ಏರಿತು. ತಮ್ಮ 15ರ ವಯಸ್ಸಿನಲ್ಲಿ ಲಂಡನ್ ನಗರದಲ್ಲಿ ಒಂದು ಶೋ ಕೊಟ್ಟು ಅಲ್ಲಿನ ವಿದ್ವತ್ ಜನರಿಂದ ಸೈಯೆನಿಸಿಕೊಂಡರು ಈ ಪ್ರದರ್ಶನ ಅವರ ಜೀವನದಲ್ಲಿ ಅತಿ ಮಹತ್ವದ್ದಾಗಿತ್ತು ತಕ್ಷಣವೇ ಅವರು ವಿಶ್ವವಿಖ್ಯಾತರಾದರು.
ತಮ್ಮ ಮೂರನೆಯ ವಯಸ್ಸಿನಲ್ಲಿ ತಂದೆಯವರ ಜೊತೆ ಸರ್ಕಸ್ ಮೊದಲಾದ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಕುಂತಲಾ ಅವರಿಗೆ ಶಾಲಾ-ಕಾಲೇಜಿಗೆ ಹೋಗುವ ಬಗ್ಗೆ ತೀವ್ರತೆ ಇರಲಿಲ್ಲ. ಹಲವಾರು ಪದವಿಗಳನ್ನು ಗಳಿಸಿದ ಪಂಡಿತರು ಶಕುಂತಲಾ ಅವರ ಮುಂದೆ ತಮ್ಮ ಕುಬ್ಜತೆಯನ್ನು ಒಪ್ಪಿಕೊಂಡರು. 1977ರಲ್ಲಿ ವಿಶ್ವದ ದೊಡ್ಡ ವೇದಿಕೆ ಒಂದರಲ್ಲಿ ಪ್ರತಿಷ್ಠಿತ ಗಣಿತಜ್ಞರ ಸಮ್ಮುಖದಲ್ಲಿ ಶಕುಂತಲಾ ದೇವಿಯವರು ಒಂದು ಪ್ರದರ್ಶನ ನೀಡಿದಾಗ ಅದು ಒಂದು ಐತಿಹಾಸಿಕ ಪ್ರದರ್ಶನವಾಗಿ ಅವರಿಗೆ ಬಹಳ ಮನ್ನಣೆ ಗೌರವವನ್ನು ತಂದುಕೊಟ್ಟಿತು. 21 ಸಂಖ್ಯೆಗಳ ಅಂಕೆಯೊಂದರ 23ನೇ ವರ್ಗಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡುಹಿಡಿದು ಕಪ್ಪುಹಲ್ಲಿಗೆ ಮೇಲೆ ಬರೆದರು. ತೆಗೆದುಕೊಂಡ ಸಮಯ ಕೇವಲ ಐವತ್ತು ಸೆಕೆಂಡುಗಳು. ಆ ಸಮಯದಲ್ಲಿ ಬಳಕೆಯಲ್ಲಿದ್ದ ಪ್ರಬಲ ಕಂಪ್ಯೂಟರ್ ಇದೇ ಕೆಲಸಕ್ಕೆ 62 ಸೆಕೆಂಡ್ ಕಾಲ ತೆಗೆದುಕೊಂಡಿತ್ತು. ಕಂಪ್ಯೂಟರ್ ಗಿಂತ ವೇಗವಾಗಿ ಲೆಕ್ಕ ಮಾಡಬಲ್ಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರಿಗೆ ಒದಗಿ ಬಂತು ಅಂದಿನಿಂದ ವಿಶ್ವದಲ್ಲಿ ಅವರನ್ನು ಮಾನವ ಕಂಪ್ಯೂಟರ್ ಎಂದು ಇಂದಿಗೂ ಸಂಭೋಧಿಸಲಾಗುತ್ತಿದೆ. ವರ್ಷಾನುಗಟ್ಟಲೆ ಈ ಹವ್ಯಾಸವನ್ನು ಜಾರಿಯಲ್ಲಿಟ್ಟುಕೊಂಡು ಇನ್ನೂ ಹೆಚ್ಚು ಪ್ರಬಲವಾಗಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡು ತಮ್ಮ ಆತ್ಮವಿಶ್ವಾಸವನ್ನು ದೃಢಪಡಿಸಿಕೊಂಡು ಅವರು ಮುನ್ನುಗ್ಗಿದರು. ವಿಶ್ವದ ಹಲವಾರು ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅವರು ಆಹ್ವಾನಿಸಲ್ಪಟ್ಟರು.ಹೀಗೆ ಶಕುಂತಲಾ ಅವರು ತಮ್ಮ ಪ್ರದರ್ಶನಗಳನ್ನು ಕೊಡುತ್ತಾ ಸಾಗಿದರು.
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅವರು ತಮ್ಮ ದಾಖಲೆ ಒಂದನ್ನು ಸಾಧಿಸಿ ದಾಖಲಿಸಿದರು. ವಿಶ್ವದ ಹಲವಾರು ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಅವರ ಪ್ರದರ್ಶನಗಳು ಸತತವಾಗಿ ನಡೆದವು. ಬಾಲ್ಯದಲ್ಲಿ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಬಡ ಪರಿವಾರ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿತು. ಕೆಲವು ವರ್ಷಗಳ ಹಿಂದೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಶಕುಂತಲಾ ದೇವಿ ಅವರು ಹೇಳಿದ ಮಾತುಗಳು ” 10ನೆಯ ವಯಸ್ಸಿನವರಿದ್ದಾಗ ಹೇಗೋ ತಂದೆಯವರು ಶಕುಂತಲಾ ರನ್ನು ಚಾಮರಾಜಪೇಟೆಯಲ್ಲಿ ಒಂದನೆಯ ತರಗತಿಗೆ ಸೇರಿಸಿದರು. ಪ್ರತಿ ತಿಂಗಳು ಎರಡು ರೂಪಾಯಿ ಫೀಸ್ ಕೊಡಲು ಸಾಧ್ಯವಾಗದೆ ಮೂರು ತಿಂಗಳ ನಂತರ ಶಾಲೆಯಿಂದ ಹೊರಗೆ ಹಾಕಲ್ಪಟ್ಟರು”. ಹಾಗಾಗಿ ಶಕುಂತಲಾ ದೇವಿಯವರಿಗೆ ಬಡ ಮಕ್ಕಳ ಬಗ್ಗೆ ಅಪಾರ ಅನುಕಂಪ ಇತ್ತು.ತಮ್ಮ ಕೈಲಾದ ಸಹಾಯ ಮಾಡಲು ಸದಾ ಸಿದ್ಧರಿದ್ದರು.
ಜ್ಯೋತಿಷ್ಯಶಾಸ್ತ್ರ ಅವರಿಗೆ ಬಹಳ ಪ್ರಿಯವಾದ ಮತ್ತೊಂದು ವಿಷಯವಾಗಿತ್ತು. ಗಣಿತ,ಜ್ಯೋತಿಷ್ಯ ಶಾಸ್ತ್ರಗಳ ಒಡನಾಟದ ಜೊತೆಜೊತೆಗೆ ಅಡುಗೆಯನ್ನು ಅವರು ಬಹಳವಾಗಿ ಪ್ರೀತಿಸುತ್ತಿದ್ದರು. ಅಡಿಗೆ ವಿಷಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವಾರು ಹೊಸ ಉಪಯುಕ್ತ ಮಾಹಿತಿಗಳನ್ನು ಅವರು ತಮ್ಮ ಅಡುಗೆ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇದಲ್ಲದೆ ಅವರು ಕೆಲವು ಉಪನ್ಯಾಸಗಳನ್ನೂ ಸಹ ಕೊಟ್ಟಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು” ವ್ಯಕ್ತಿತ್ವ ವಿಕಸನ” ಮತ್ತು “ಮಕ್ಕಳ ಬುದ್ಧಿ ಬೆಳವಣಿಗೆ” ಮೊದಲಾದವುಗಳು.
ಶಕುಂತಲಾದೇವಿಯವರು ಜ್ಯೋತಿಷ್ ಶಾಸ್ತ್ರಜ್ಞೆ ಆಗಿದ್ದರು. ಜನ್ಮದಿನ ಮತ್ತು ಹುಟ್ಟಿದ ಸಮಯ ಹಾಗೂ ಸ್ಥಳದ ಮಾಹಿತಿ ಪಡೆದು ಜ್ಯೋತಿಷ್ಯದ ಸಲಹೆಗಳನ್ನು ನೀಡುತ್ತಿದ್ದರು. ಖಗೋಳ ಶಾಸ್ತ್ರದಲ್ಲೂ ಅವರಿಗೆ ಸಿದ್ದಿ ಇತ್ತು. ಸ್ವಾದಿಷ್ಟವಾದ ಖಾದ್ಯ ತಯಾರಿಸುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಶಕುಂತಲಾ ದೇವಿ ಅವರು 1944ರಲ್ಲಿ 15 ವರ್ಷದವರಿದ್ದಾಗ ಲಂಡನ್ ಗೆ ತಂದೆಯ ಜೊತೆಯಲ್ಲಿ ಹೋದರು.1960 ರಲ್ಲಿ ಭಾರತಕ್ಕೆ ವಾಪಸಾದ ನಂತರ ಅವರು ಕಲ್ಕತ್ತಾದ ಐಎಎಸ್ ಆಫೀಸರ್ ಆದ ಪರಿತೋಷ ಬ್ಯಾನರ್ಜಿಯವರನ್ನು ಮದುವೆಯಾದರು. ಆದರೆ 1979ರಲ್ಲಿ ವಿವಾಹ ವಿಚ್ಛೇದನ ಪಡೆದು ಬೆಂಗಳೂರಿಗೆ ಮರಳಿದರು. ಬೆಂಗಳೂರಿನಲ್ಲಿ ಅವರು ಜನರಿಗೆ ಮತ್ತು ಗಣ್ಯರಿಗೆ ಜ್ಯೋತಿಷ್ಯದ ಸಲಹೆಗಾರರಾಗಿ ಉದ್ಯೋಗ ಆರಂಭಿಸಿದರು. ಅವರ ಅನುಪಮಾ ಎಂಬ ಮಗಳು ತಂದೆಯವರ ಸಂಸ್ಥೆಯಲ್ಲಿ ಡೈರೆಕ್ಟರ್ ಆಗಿದ್ದರು. ಶಕುಂತಲಾ ಅವರ ಪತಿ, ಪರಿತೋಷ ಬ್ಯಾನರ್ಜಿಯವರು ಕಲ್ಕತ್ತಾದಲ್ಲಿ 2010ರಲ್ಲಿ ತೀರಿಕೊಂಡರು. ಶಕುಂತಲಾ ದೇವಿಯವರು ಖಗೋಳ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ,ಗಣಿತ ಇವುಗಳು ಪ್ರಸಾರಕ್ಕಾಗಿ ವಿದ್ಯಾ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿದ್ದರು. ಅವರಿಗೆ ಜೀವಮಾನದ ಸಾಧನೆಗಾಗಿ 2013ರ ಮಾರ್ಚ್ ನಲ್ಲಿ ಮುಂಬೈಯಲ್ಲಿ ಸನ್ಮಾನ ಮಾಡಿದರು.
ಎಸ್ ಐ ಐ ಎಂ ಎಸ್ ಅಂಡ್ ಪಿಯು ಕಾಲೇಜ್ ಸ್ಥಾಪನೆ- ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಶಕುಂತಲಾ ದೇವಿ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಪಿಯುಸಿ ಕಾಲೇಜ್ ಎಂಬ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿದ್ದರು. ಈ ಸಂಸ್ಥೆ ಕೆಲವು ವಿಶೇಷ ಭಾರತೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವುದರಲ್ಲಿ ಕೆಲಸ ಮಾಡುತ್ತಿತ್ತು. ಇಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎನ್ನುವ ವಿಷಯದ ಬಗ್ಗೆ ಸಾಕಷ್ಟು ಉತ್ತಮ ಕೆಲಸ ನಡೆದಿತ್ತು.
1969ರಲ್ಲಿ ವಿಶ್ವದ ಅತಿ ಮಹತ್ವದ ಮಹಿಳೆ ಎಂಬ ಪ್ರಶಸ್ತಿಯನ್ನು ಫಿಲಿಫೈನ್ಸ್ ವಿಶ್ವವಿದ್ಯಾಲಯ ಪ್ರಧಾನ ಮಾಡಿತು. ಇದರ ಜೊತೆಗೆ ಬಂಗಾರದ ಪದಕ ಸಹಿತ ಕೊಡಲಾಯಿತು. ರಾಮಾನುಜಮ್ ಮ್ಯಾಥಮೆಟಿಕಲ್ ಜೀನ್ಸ್ ಪ್ರಶಸ್ತಿಯನ್ನು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿ ಹಾಗೂ ಸ್ವರ್ಣ ಪದಕಗಳನ್ನು 1988 ರಲ್ಲಿ ಆಗ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದವರ ಹಸ್ತ ದಿಂದ ವಿತರಿಸಲಾಯಿತು.
2005ರಲ್ಲಿ ಎದೆ ನೋವು ಕಾಣಿಸಿಕೊಂಡು ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಪರೇಷನ್ ಆದ ನಂತರ ವೈದ್ಯರ ಸಲಹೆ ಮೇರೆಗೆ ಪರ್ಯಟನೆ ಕಡಿಮೆ ಮಾಡಿದ್ದರು. ಮಾನವ ಕಂಪ್ಯೂಟರ್ ಎಂದೇ ವಿಶ್ವಪ್ರಸಿದ್ಧರಾಗಿದ್ದ ಶಕುಂತಲಾ ದೇವಿಯವರು ಏಪ್ರಿಲ್ 21 2013ರ ರವಿವಾರ ಬೆಳಗ್ಗೆ 8:15 ಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆ ಒಂದರಲ್ಲಿ ನಿಧನರಾದರು. ಓರ್ವ ಪುತ್ರಿ, ಅಳಿಯ,ಇಬ್ಬರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಶಿಷ್ಯ ವೃಂದವನ್ನು ಅವರು ಆಗಲಿ ತೆರಳಿದರು.


