ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾಜಿ ಸಚಿವ ದಿ.ಬಿ.ಎಸ್.ಪಾಟೀಲ ಮನಗೂಳಿ ಅವರ ಪ್ರತಿಮೆ ಆವರಣದಲ್ಲಿ ಗುರುವಾರ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಗುರುನಮನದಂಗವಾಗಿ ಗುರುವಾರ ನುಡಿ ನಮನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ, ಈ ನಾಡಿಗೆ ಭಕ್ತರಿಗೆ ತಮ್ಮದೇಯಾದಂತಹ ಕೊಡುಗೆಯನ್ನು ನೀಡಿರುವ ಸಿದ್ದೇಶ್ವರ ಪೂಜ್ಯರ ತತ್ವಾದರ್ಶಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕಿದೆ. ಅವರು ಹೇಳಿರುವ ಪ್ರವಚನಗಳನ್ನು ಪ್ರತಿಯೊಬ್ಬ ಮಕ್ಕಳಿಗೆ ಕೇಳಿಸುವಂತಹ ಕಾರ್ಯ ಪಾಲಕರು ಮಾಡಬೇಕು. ಇಂತಹ ಪರಮಪೂಜ್ಯರನ್ನು ಪಡೆದ ನಾವೆಲ್ಲರೂ ಧನ್ಯ ಎಂದರು.
ಇಡೀ ಜಗತ್ತಿಗೆ ಸಮಾನತೆ ಸಂದೇಶ ನೀಡಿದ ವಿಶ್ವಗುರು ಬಸವೇಶ್ವರರರು ಜನಿಸಿದ ಬಸವನಬಾಗೇವಾಡಿ, ಪೂಜ್ಯ ಸಿದ್ದೇಶ್ವರರು ಜನಿಸಿದ ಸ್ಥಳ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮವಾಗಿದೆ. ಇಂತಹ ಮಹಾನ್ ಪುರುಷರು ಜನಿಸಿದ ಈ ನಾಡು ಪುಣ್ಯದ ಬೀಡಾಗಿದೆ. ಇವರು ನೀಡಿರುವ ಸಂದೇಶಗಳು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು.
ಮುಖಂಡರಾದ ಅಪ್ಪುಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶರಣಯ್ಯ ನಂದಿಕೋಲಮಠ,ಮಲ್ಲು ಯಾದವಾಡ. ಗೋವಿಂದಪ್ಪ ಚನ್ನಳ, ಶಿವಾನಂದ ಶಿರೋಳ, ಶೇಖಪ್ಪಗೌಡ ಬಿರಾದಾರ, ರವಿಗೌಡ ಪಾಟೀಲ ಇತರರು ಇದ್ದರು.

