ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕಳೆದ 20 ವರ್ಷದ ಹಿಂದೆ ಅಭಿವೃದ್ದಿಯಿಂದ ವಂಚಿತವಾಗಿದ್ದ ಬಸವನಬಾಗೇವಾಡಿ ಮತಕ್ಷೇತ್ರವನ್ನು ನಾನು 2004 ಕ್ಕೆಈ ಮತಕ್ಷೇತ್ರಕ್ಕೆ ಬಂದ ನಂತರ ಸರ್ಕಾರದಿಂದ ಕೋಟಿ ಕೋಟಿ ಅನುದಾನವನ್ನು ತರುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಆರೋಗ್ಯ ಘಟಕ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿದ ನಂತರ ಪುರಸಭೆಯ ವಿವಿಧ ಯೋಜನೆ ಅಡಿಯಲ್ಲಿ ಅಂದಾಜು ರೂ. 17 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರ ನೀಡಿದ ಅನುದಾನವನ್ನು ಎಲ್ಲಿಯೂ ದುರುಪಯೋಗ ಮಾಡಿಕೊಳ್ಳದೇ ಸದುಪಯೋಗ ಮಾಡಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜಿಲ್ಲಾ ಆಸ್ಪತ್ರೆಯ ಒತ್ತಡವನ್ನು ತಪ್ಪಸಿದ್ದು ಶ್ಲಾಘನೀಯ. ತಾಲೂಕು ಆಸ್ಪತ್ರೆ ಕಳೆದ ಮೂರು ವರ್ಷದಿಂದ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆಯನ್ನು ಜನತೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಬಸವನಬಾಗೇವಾಡಿಯ ಬಸವ ಭಕ್ತರ ಬಹು ದಿನಗಳ ಬೇಡಿಕೆಯಾಗಿದ್ದ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗಿದೆ. ಮುಂಬರುವ ದಿನಗಳಲ್ಲಿ ಪಟ್ಟಣವು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಉತ್ತಮ ವ್ಯಾಪಾರದ ಹಿತದೃಷ್ಟಿಯಿಂದ ಪಟ್ಟಣದಲ್ಲಿ ರೂ.40 ಕೋಟಿ ವೆಚ್ಚದಲ್ಲಿ 130 ಕ್ಕೂ ಅಧಿಕ ಮಳಿಗೆಯನ್ನು ಹೊಂದಿದ ಜಿಲ್ಲೆಯಲ್ಲಿಯೇ ಮಾದರಿಯಾದ ಮೆಗಾ ಮಾರುಕಟ್ಟೆಯನ್ನು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಉತ್ತಮ ಅನುಕೂಲ ಕಲ್ಪಿಸುತ್ತದೆ. ಮಾರುಕಟ್ಟೆ ಆವರಣದಲ್ಲಿ ವಾಹನಗಳ ನಿಲುಗಡೆಗೆ ಸ್ಥಳ ಕಲ್ಪಿಸಲಾಗಿದ್ದು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಮೆಗಾ ಮಾರುಕಟ್ಟೆಗೆ ಬಸವೇಶ್ವರ ಮಾರುಕಟ್ಟೆ ಎಂಬ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿರುವ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿಯ ಸ್ಥಾಪನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈಗಾಗಲೇ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದಲ್ಲಿ ಬಸವಣ್ಣನವರ ಆಚಾರ- ವಿಚಾರ ಪ್ರತಿಬಿಂಬಿಸುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಸಂಗಮೇಶ ಓಲೇಕಾರ, ಶಿವನಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಬಸವರಾಜ ಕೋಟಿ, ಜಗದೇವಿ ಗುಂಡಳ್ಳಿ, ಸಂಜೀವ ಕಲ್ಯಾಣಿ, ಪ್ರವೀಣ ಪೂಜಾರಿ, ಶರಣಪ್ಪ ಬೆಲ್ಲದ, ಜಟ್ಟಿಂಗರಾಯ ಮಾಲಗಾರ, ಬಸವರಾಜ ರಾಯಗೊಂಡ, ತಹಶೀಲ್ದಾರ ವೈ.ಎಸ್.ಸೋಮನಕಟ್ಟಿ, ಡಿ.ಎಚ್.ಓ ಸಂಪತ್ತ ಗುಣಾರಿ, ಡಾ.ಸಾಬೀರ ಪಟೇಲ, ಡಾ.ಶ್ರೀನಿಕೇತನ ನಾಯಕ, ಡಾ.ಬಸವರಾಜ ಮುತ್ತತ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ, ಜಿ.ಪಂ ಎಇಇ ವಿಲಾಸ ರಾಠೋಡ, ಲೋಕೋಪಯೋಗಿ ಇಲಾಖೆ ಎಇಇ ಜೆ.ವಿ.ಕಿರಸೂರ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಕೆಐಎಡಿಬಿ ಎಇಇ ಆನಂದಸ್ವಾಮಿ, ಡಿ.ವೈ.ಎಸ್.ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಗುರುಶಾಂತ ದಾಶ್ಯಾಳ ಇತರರು ಇದ್ದರು.

