ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಗ್ರಾಮೀಣ ಕ್ರೀಡೆ ಖೋಖೋ ಕ್ರೀಡೆಯ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ನಿಡಗುಂದಿ ತಾಲ್ಲೂಕಿನ ಬೇನಾಳದ ಆರು ಜನ ಬಾಲಕಿಯರು ಹಾಗೂ ಮಣಗೂರಿನ ಇಬ್ಬರು ಬಾಲಕರು ಆಯ್ಕೆಯಾಗಿದ್ದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದು ನಿಡಗುಂದಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.
ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ೧೪ ವಯೋಮಾನದೊಳಗಿನ ಬಾಲಕಿಯರ ಕೊಕ್ಕೊ ಸ್ಪರ್ಧೆಗೆ ಆಯ್ಕೆಯಾಗಿರುವ ರಾಜ್ಯದ ಕೊಕ್ಕೊ ಕ್ರೀಡಾಪಟುಗಳಿಗೆ ಐದು ದಿನದ ವಿಶೇಷ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದ ಐದು ದಿನಗಳ ಕಾಲ ಎಲ್ಲಾ ತರಬೇತುದಾರರು ಹಾಗೂ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಬೇನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ ಮಾಡಿದ್ದಾರೆ.
ಕರ್ನಾಟಕ ಖೋಖೋ ಸಂಸ್ಥೆಯ ಆಯ್ಕೆ ಸಮಿತಿಯ ಸದಸ್ಯ ಬೆಳಗಾವಿಯ ಈರಣ್ಣ ಹಳಿಗೌಡರ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಬಿರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ವಿಜಯಪುರ ಜಿಲ್ಲೆಯ ಆರು ಜನ, ಬೆಳಗಾವಿ ಜಿಲ್ಲೆಯ ಮೂವರು, ಮೈಸೂರಿನ ಹೆಗ್ಗಡದೇವನಕೋಟೆಯ ಮೂವರು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಸ್.ಎಸ್. ಅವಟಿ, ಬಿ.ಎಚ್. ಗಣಿ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಲೀಂ ದಡೆದ, ಎನ್.ಬಿ.ದಾಸರ, ಎಸ್.ಎಂ. ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಕೊಕ್ಕೊ ತರಬೇತುದಾರ ಈರಣ್ಣ ಹಳಿಗೌಡರ, ತುಕಪ್ಪಗೌಡ ಬಿರಾದಾರ, ಮಹಾದೇವ ಐಹೊಳ್ಳಿ, ಮುನ್ನಾ ಬೆಣ್ಣಿ, ದಶರಥ ಬೈಲಕೂರ, ಭೀಮಣ್ಣ ಮನಗೂಳಿ, ರಾಜು ಬಿರಾದಾರ, ಶಬ್ಬಿರ್ ಬಾಗವಾನ, ಹನುಮಂತ ಇಲ್ಯಾಳ, ಪ್ರಭಾಕರ ಹೆಬ್ಬಾಳ, ಆನಂದ ರೇವಡಿ, ಎನ್.ಬಿ.ದಾಸರ ಮತ್ತೀತರರು ಇದ್ದರು.

